ಕರ್ನಾಟಕ

ರಮೇಶ್ ಜಾರಕಿಹೊಳಿ ಬಂಡಾಯಕ್ಕೆ ಕಾರಣ? ಕೌಟುಂಬಿಕ ಸತ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

Pinterest LinkedIn Tumblr


ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ, ಅದರಲ್ಲೂ ಮುಂಬೈ-ಕರ್ನಾಟಕ ಭಾಗದಲ್ಲಿ ಜಾರಕಿಹೊಳಿ ಸಹೋದರರ ಪ್ರಭಾವ ಬಹಳ ಆಳವಾದದ್ದು. ಈ ಸಹೋದರರು ವಿವಿಧ ಪಕ್ಷಗಳಲ್ಲಿದ್ದರೂ ವೈಯಕ್ತಿಕವಾಗಿ ಯಾವತ್ತೂ ಕಚ್ಚಾಡಿದವರಲ್ಲ. ಆದರೆ, ವರ್ಷದ ಹಿಂದೆ ರಮೇಶ್ ಜಾರಕಿಹೊಳಿ ಅವರು ಆಪರೇಷನ್ ಕಮಲದ ದಾರಿ ಹಿಡಿದ ನಂತರದಿಂದ ಸಹೋದರರ ಸವಾಲುಗಳು ಹೆಚ್ಚಾಗಿವೆ. ರಾಜಕೀಯವಾಗಿ ಮತ್ತು ವೈಯಕ್ತಿವಾಗಿ ಸಂಬಂಧಗಳು ಬಿರುಕುಬಿಟ್ಟಿವೆ. ಸತೀಶ್ ಜಾರಕಿಹೊಳಿ ಎಷ್ಟೇ ಮನವಿ ಮಾಡಿದರೂ ಆಪರೇಷನ್​ನ ಪ್ರಯತ್ನವನ್ನು ರಮೇಶ್ ಕೈಬಿಟ್ಟಿಲ್ಲ. ಕಾಂಗ್ರೆಸ್ಸನ್ನೂ ತ್ಯಜಿಸದೇ ಕಾಂಗ್ರೆಸ್ ಶಾಸಕರನ್ನೂ ಬಿಡದೇ ಕಾಡುತ್ತಿರುವ ರಮೇಶ್ ಅವರಿಗೆ ಸತೀಶ್ ಜಾರಕಿಹೊಳಿ ಬುದ್ಧಿ ಹೇಳಲು ಸಾಕಷ್ಟು ವಿಫಲ ಯತ್ನ ಕೂಡ ಮಾಡಿದ್ಧಾರೆ. ರಮೇಶ್ ಅವರಿಗೆ ಅತ್ಯಾಪ್ತರಾಗಿದ್ದ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದು ಪರಿಸ್ಥಿತಿ ನಿಭಾಯಿಸುವ ಪ್ರಯತ್ನವನ್ನೂ ಸತೀಶ್ ಜಾರಕಿಹೊಳಿ ಮಾಡಿದರು. ಇದ್ಯಾವುದೂ ಫಲಪ್ರದವಾಗಿಲ್ಲ.

ರಮೇಶ್ ಜಾರಕಿಹೊಳಿ ಅವರು ಕತ್ತಲಲ್ಲಿ ಕುಳಿತು ಕಲ್ಲು ಹೊಡೆಯುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷದಿಂದ ಹೊರಗೆ ಹೋಗಿ ನೋಡಲಿ ಎಂದು ಸತೀಶ್ ಜಾರಕಿಹೊಳಿ ಸವಾಲು ಹಾಕಿದರು. ಅದಾದ ಬೆನ್ನಲ್ಲೇ ರಮೇಶ್ ಅವರು ಸತೀಶ್ ಅವರ ಯಮಕನಮರಡಿ ಕ್ಷೇತ್ರದಲ್ಲಿ ರಾಜಾರೋಷವಾಗಿಯೇ ಹೋಗಿ ಕೈ ಕಾರ್ಯಕರ್ತರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದರು. ಇದರೊಂದಿಗೆ ಜಾರಕಿಹೊಳಿ ಸಹೋದರರ ಕಚ್ಚಾಟ ಬೀದಿಗೆ ಬಂದಂತಾಯಿತು.

ಅಳಿಯ ಅಂಬಿರಾವ್ ಎಂಬ ಶಕ್ತಿ:

ಇವತ್ತು ಸತೀಶ್ ಜಾರಕಿಹೊಳಿ ಅವರು ಕಹಿ ಸತ್ಯವೊಂದನ್ನು ಹೊರಹಾಕಿದ್ದಾರೆ. ತಮ್ಮ ಸಹೋದರ ರಮೇಶ್ ಅವರು ರೆಬೆಲ್ ಯಾಕಾಗಿದ್ದಾರೆ? ಅವರ ಹಿಂದೆ ಯಾರಿದ್ಧಾರೆ? ಎಂಬಿತ್ಯಾದಿ ವಿವರವನ್ನು ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಈ ರೀತಿಯ ವರ್ತನೆಗೆ ಅವರ ಅಳಿಯ ಅಂಬಿರಾವ್ ಪಾಟೀಲ್ ಅವರು ಕಾರಣರೆಂದು ಸತೀಶ್ ಜಾರಕಿಹೊಳಿ ಹೇಳುತ್ತಾರೆ.

“ನಮ್ಮ ಕುಟುಂಬವನ್ನು ನಿಯಂತ್ರಣ ಮಾಡುವ ಶಕ್ತಿ ಅಂಬಿರಾವ್​ಗೆ ಇದೆ. ಅವರಿಗೆ ರಮೇಶ್ ಅವರೇ ಸಂಪೂರ್ಣ ಅಧಿಕಾರ ಕೊಟ್ಟಿದ್ಧಾರೆ. ಲಖನ್ ಹೊರಗೆ ಬರೋದಕ್ಕೂ ಆತನೇ ಕಾರಣ” ಎಂದು ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದಾರೆ.

Comments are closed.