
ಬೆಂಗಳೂರು: ಕಳೆದ 4 ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಸಂಜೆಯಾಗುತ್ತಿದ್ದಂತೆ ಸುರಿಯುವ ಮಳೆಗೆ ಇಂದು ಕೂಡ ಬೆಂಗಳೂರು, ಮೈಸೂರು, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳು ಸಾಕ್ಷಿಯಾಗಿವೆ.
ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದ್ದು, ಇಂದು ರಾತ್ರಿಯೊಳಗೆ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರದ ಹಲವೆಡೆ ಅತಿಹೆಚ್ಚು ಮಳೆಯಾಗಿದ್ದು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯದ ಕೆಲವೆಡೆ ಮಳೆಯಾಗಿದೆ.
ಎರಡು ದಿನಗಳ ಹಿಂದೆ ರಾಜಧಾನಿಯಲ್ಲಿ ವ್ಯಾಪಲಕ ಮಳೆಯಾಗಿತ್ತು. ಇಂದು ರಾತ್ರಿ ವೇಳೆಗೆ ಬೆಂಗಳೂರಿನಲ್ಲಿ ಮತ್ತೆ ಮಳೆಯಾಗಲಿದ್ದು, ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಮಳೆಯ ಸಾಧ್ಯತೆಯಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ. ಚಿಕ್ಕಬಳ್ಳಾಪುರದ ಹಲವೆಡೆ ಅತಿಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಕೂಡ ಎಚ್ಚರಿಕೆ ನೀಡಲಾಗಿದೆ.
ಮೈಸೂರಿನಲ್ಲಿ ಇಂದು ಧಾರಾಕಾರ ಮಳೆಯಾಗಿದ್ದು, ದಿಢೀರ್ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದ್ದು, ನಿಲ್ಲಿಸಿದ್ದ ವಾಹನಗಳು ಕೂಡ ಮುಳುಗಿಹೋಗಿವೆ. ಕೋಲಾರದಲ್ಲಿ ಕೂಡ ಗಾಳಿ ಸಹಿತ ಜೋರು ಮಳೆಯಾಗಿದ್ದು, 2 ಗಂಟೆಗಳ ಕಾಲ ಸುರಿದ ಗಾಳಿ ಸಹಿತ ಮಳೆಯಿಂದ ಮಾವು, ದ್ರಾಕ್ಷಿ ಬೆಳಗಾರರಲ್ಲಿ ಆತಂಕ ಮನೆಮಾಡಿದೆ. ಕೋಲಾರದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ನಿನ್ನೆ ಸುರಿದ ಮಳೆಗೆ ಹಲವೆಡೆ ಮಾವು, ಟೊಮ್ಯಾಟೋ ಗಿಡಗಳು ನೆಲಕಚ್ಚಿದ್ದವು.
Comments are closed.