ಬಳ್ಳಾರಿ: ಮೂರ್ಖ ಈಶ್ವರಪ್ಪಗೆ ಮುಸಲ್ಮಾನರಿಗೆ ಟಿಕೆಟ್ ಕೊಡಿಸುವುದಿರಲಿ, ಕುರುಬರಿಗೆ ಟಿಕೆಟ್ ಕೊಡಿಸುವ ಯೋಗ್ಯತೆಯೂ ಇಲ್ಲ. ಮೂಲತಃ ಬಳ್ಳಾರಿಯವರಾದ ಈಶ್ವರಪ್ಪ ಆರ್ಎಸ್ಎಸ್ ಗುಲಾಮ. ಅವರು ಬಳ್ಳಾರಿಗೆ ಬಂದರೆ ಊರೊಳಗೆ ಬಿಟ್ಟುಕೊಳ್ಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.
ನನಗೆ ಮೋದಿ ಮತ್ತೆ ಪ್ರಧಾನಿಯಾದರೆ ಏನು ಗತಿ? ಎಂಬ ಆತಂಕ ಕಾಡುತ್ತಿದೆ. ಅವರು ಮತ್ತೆ ಪ್ರಧಾನಿಯಾದರೆ ಪ್ರಜಾತಂತ್ರ ವ್ಯವಸ್ಥೆ ನಾಶವಾಗುತ್ತದೆ, ದೇಶದಲ್ಲಿ ಸರ್ವಾಧಿಕಾರಿ ಅಧಿಕಾರ ನಡೆಯುತ್ತದೆ, ಸಂವಿಧಾನಾತ್ಮಕ ಸಂಸ್ಥೆಗಳ ದುರ್ಬಳಕೆಯಾಗುತ್ತದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ. ಆದರೆ, ನಾವು 8 ಮಂದಿ ಹಿಂದುಳಿದವರಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದು ಬಳ್ಳಾರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಯಾವ ಕಾರಣಕ್ಕೂ ಎರಡಂಕಿ ದಾಟಬಾರದು. ಕರ್ನಾಟಕದಲ್ಲಿ ನಾವು ಕನಿಷ್ಠ 20 ಸ್ಥಾನ ಗೆಲ್ಲಲೇಬೇಕು. ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು. ದೇಶದಲ್ಲೀಗ ದಲಿತರು, ಹಿಂದುಳಿದವರು ನೆಮ್ಮದಿಯಿಂದ ಬದುಕುತ್ತಿಲ್ಲ. ದಲಿತರಿಗೆ ಬಿಜೆಪಿಯವರು ಬೆತ್ತಲೆ ಮಾಡಿ ಹೊಡೆಯುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಗೋ ರಕ್ಷಣೆ ಹೆಸರಿನಲ್ಲಿ ತೊಂದರೆ ನೀಡಲಾಗುತ್ತಿದೆ. ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು 40 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಆದರೆ, ಮೋದಿಯಂತಹ ಮಹಾಸುಳ್ಳುಗಾರನನ್ನು ಎಲ್ಲಿಯೂ ನೋಡಿಲ್ಲ. ಈ ದೇಶಕ್ಕೆ ನರೇಂದ್ರ ಮೋದಿಯವರ ಕೊಡುಗೆ ಏನು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರ ಪರವಾಗಿ ಇಂದು ಬಳ್ಳಾರಿಯ ಕಂಪ್ಲಿಯಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಬಳ್ಳಾರಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ನಮ್ಮ ಪಕ್ಷದಲ್ಲಿಯೇ ಇದ್ದವರು. ದೇವೇಂದ್ರಪ್ಪ ಒಳ್ಳೆಯ ವ್ಯಕ್ತಿ, ಹಣ ಇರುವ ವ್ಯಕ್ತಿ. ಆದರೆ ಲೋಕಸಭೆಗೆ ಸ್ಪರ್ಧಿಸೋ ಅಭ್ಯರ್ಥಿಯಲ್ಲ. ಕಳೆದ ಬಾರಿ ಟಿಕೆಟ್ ಕೇಳಲು ಮನೆಗೆ ಬಂದಿದ್ದ.ವಿಧಾನಸಭೆ ಟಿಕೆಟ್ ಪ್ರಯತ್ನ ಮಾಡು, ನಿನಗೆ ಲೋಕಸಭೆ ಸೂಟ್ ಆಗಲ್ಲ ಎಂದು ಹೇಳಿ ಕಳುಹಿಸಿದ್ದೆ. ಅದಕ್ಕೆ ಬೇಜಾರಾಗಿ ಪಾಪ ಬಿಜೆಪಿಗೆ ಹೋಗಿಬಿಟ್ಟಿದ್ದಾನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಾನು ಕೂಡ 5 ವರ್ಷ ಮುಖ್ಯಮಂತ್ರಿಯಾಗಿದ್ದೆ. ಮೋದಿಯೂ 5 ವರ್ಷ ಪ್ರಧಾನಮಂತ್ರಿಯಾಗಿದ್ದಾರೆ. ನಾನು 5 ವರ್ಷದಲ್ಲಿ ಏನೇನು ಕೆಲಸ ಮಾಡಿದ್ದೇನೆ ಎಂದು ಲೆಕ್ಕ ಕೊಡುತ್ತೇನೆ. ಪ್ರಧಾನಿ ಮೋದಿ 5 ವರ್ಷದ ತಮ್ಮ ಕೆಲಸದ ಬಗ್ಗೆ ಲೆಕ್ಕ ಕೊಡಲು ಸಾಧ್ಯವೇ? ಮೋದಿ ದೇಶ ಎಲ್ಲಾದ್ರೂ ಬಡವರಿಗೆ ಉಚಿತವಾಗಿ ಊಟ ಕೊಟ್ಟಿದ್ದಾರ? ಹಸಿದ ಹೊಟ್ಟೆಗೆ ಊಟ ಕೊಟ್ಟಿದ್ದಾರ? ನಾನು ರೈತರ ಬ್ಯಾಂಕ್ ಸಾಲ ಮನ್ನಾ ಮಾಡಿ ಎಂದು ನರೇಂದ್ರ ಮೋದಿ ಬಳಿ ಪರಿಪರಿಯಾಗಿ ಬೇಡಿಕೊಂಡೆ. ಆದರೆ, ದುರಾತ್ಮರಾದ ಅವರು ಒಪ್ಪಲೇ ಇಲ್ಲ. ಮಿಸ್ಟರ್ ಯಡಿಯೂರಪ್ಪನವರ ಬಳಿ ರೈತರ ಸಾಲ ಮನ್ನಾ ಮಾಡು ಎಂದರೆ ನಾನೇನು ನೋಟಿನ ಪ್ರಿಂಟಿಂಗ್ ಮಷಿನ್ ಇಟ್ಟಿದ್ದೀನಾ ಎಂದರು. ಅವರೆಲ್ಲ ಹಸಿರು ಶಾಲು ಹಾಕಿ ಓಡಾಡುವ ರೈತ ವಿರೋಧಿಗಳು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
Comments are closed.