ಕರ್ನಾಟಕ

ಬೆಂಗಳೂರಿನಲ್ಲಿ ಗುಡುಗುಸಹಿತ ಭಾರೀ ಮಳೆ

Pinterest LinkedIn Tumblr


ಬೆಂಗಳೂರು: ಬೇಸಿಗೆ ಬಿಸಿಲಿನ ಝಳದಿಂದ ಪರಿತಪಿಸುತ್ತಿದ್ದ ರಾಜಧಾನಿ ಜನರಿಗೆ ಬುಧವಾರ ಸಂಜೆ ಮಳೆರಾಯ ತಂಪು ಎರೆದಿದ್ದಾನೆ. ಇಂದು ಸಂಜೆ ನಗರದ ಹಲವೆಡೆ ಗುಡುಗುಸಹಿತ ಭಾರೀ ಮಳೆಯಾಗಿದೆ. ಲುಂಬಿನಿ ಗಾರ್ಡನ್​ ಬಳಿ ಬೈಕ್​ ಸವಾರನ ಮೇಲೆ ಮರ ಬಿದ್ದ ಪರಿಣಾಮ ಸವಾರ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಣಿಗಲ್‌ ಮೂಲದ ಕಿರಣ (27) ಮೃತವ್ಯಕ್ತಿ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ‌ ಕಿರಣ್ ಕೋರಿಯರ್ ಬಾಯ್​ ಆಗಿ ಕೆಲಸ ಮಾಡುತ್ತಿದ್ದರು.

ಹೆಬ್ಬಾಳದ ಲುಂಬಿಣಿ ಗಾರ್ಡನ್ ಬಳಿ ಕೆಲಸ ಮುಗಿಸಿ ಕಿರಣ್ ಬೈಕಿನಲ್ಲಿ ಕೆ.ಆರ್.ಪುರಂನಿಂದ ಹೆಬ್ಬಾಳ ಮಾರ್ಗವಾಗಿ ಮನೆಗೆ ತೆರಳುವಾಗ ಮಳೆ-ಗಾಳಿಗೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಸ್ಥಳದಲ್ಲೇ ಆತ ಕೊನೆಯುಸಿರೆಳೆದಿದ್ದಾನೆ. ಕಿರಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ.

ಜೆ.ಪಿ.ನಗರ, ಮೆಜೆಸ್ಟಿಕ್, ಬಿಟಿಎಂ ಲೇಔಟ್, ಚಾಲುಕ್ಯ ಸರ್ಕಲ್, ಎಚ್​ಎಸ್​ಆರ್​ ಲೇಔಟ್​, ಮಾರುಕಟ್ಟೆ, ಜಯನಗರ, ಬನಶಂಕರಿ, ಶಿವಾಜಿನಗರ ಸುತ್ತಮುತ್ತ ಭಾರೀ ಮಳೆಯಾಗಿದೆ. ಇದನ್ನು ಹೊರತುಪಡಿಸಿ, ಹಲವು ಕಡೆ ತುಂತುರು ಮಳೆಯ ಸಿಂಚನವಾಗಿದೆ. ದಟ್ಟ ಕಾರ್ಮೋಡ ಕವಿದಿದ್ದು, ಮತ್ತೆ ಮಳೆ ಆರ್ಭಟಿಸುವ ಸಾಧ್ಯತೆ ಇದೆ. ಹಲವು ಕಡೆ ಮರದ ಕೊಂಬೆಗಳು ಮುರಿದುಬಿದ್ದಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ನಾಳೆ ಕೂಡ ಮಳೆ
ನಾಳೆ ಮಧ್ಯಾಹ್ನದ ನಂತರ ರಾಜ್ಯದ ಹಲವು ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ. ಜನರು ಆದಷ್ಟು ಬೆಳಗ್ಗೆಯೇ ಮತದಾನ‌ ಮಾಡುವುದು ಒಳಿತು. ಮಧ್ಯಾಹ್ನದ ನಂತರ ಮಳೆಯಾದರೆ ಮತಗಟ್ಟೆಗೆ ಬರುವುದು ಸಮಸ್ಯೆಯಾಗಬಹುದು ಎಂದು ಇಲಾಖೆ ತಿಳಿಸಿದೆ.

Comments are closed.