ಕರ್ನಾಟಕ

ತೇಜಸ್ವಿ ಸೂರ್ಯ ಪ್ರಕರಣ: ಹೈಕೋರ್ಟ್ ನಿಂದ ಮಾಧ್ಯಮ ನಿರ್ಬಂಧ ಆಜ್ಞೆ ತೆರವು!

Pinterest LinkedIn Tumblr


ಬೆಂಗಳೂರು: ತನ್ನ ವಿರುದ್ಧ ತೇಜೋವಧೆ ಸುದ್ದಿಗಳನ್ನು ಹಾಕದಂತೆ ತೇಜಸ್ವಿ ಸೂರ್ಯ ಅವರು ಮಾಧ್ಯಮಗಳ ವಿರುದ್ಧ ತಂದಿದ್ದ ನಿರ್ಬಂಧದ ಆಜ್ಞೆಯನ್ನು ಹೈಕೋರ್ಟ್ ಇವತ್ತು ತೆರವುಗೊಳಿಸಿದೆ. ಪ್ರಜಾಪ್ರಭುತ್ವ ಸುಧಾರಣೆ ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ| ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ನಿನ್ನೆ ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು.

ಇವತ್ತು ತೀರ್ಪು ಓದಿದ ನ್ಯಾಯಮೂರ್ತಿಗಳು, ತೇಜೋವಧೆಯಂತಹ ವಿಚಾರ ಬಿಟ್ಟು ಉಳಿದ ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸುವುದನ್ನು ತಡೆಯಲು ಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಒಂದು ವೇಳೆ ತಮ್ಮ ಮೇಲೆ ಮಾನಹಾನಿಕರ ಸುದ್ದಿ ಬಂದಿದೆ ಎಂದು ಅನಿಸಿದರೆ ತೇಜಸ್ವಿ ಸೂರ್ಯ ಅವರು ಚುನಾವಣಾ ಆಯೋಗವನ್ನು ಸಂಪರ್ಕಿಸಿ ದೂರು ಸಲ್ಲಿಸುವ ಅವಕಾಶ ಇದೆ ಎಂದು ನ್ಯಾಯಪೀಠವು ತಿಳಿಸಿದೆ.

ತೇಜಸ್ವಿ ಸೂರ್ಯ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಮಹಿಳೆಯೊಬ್ಬರು ಅವರ ವಿರುದ್ಧ ಕೆಲ ಕಿರುಕುಳದ ಆರೋಪ ಹೊರಿಸಿದ್ದರು. ಈ ಟ್ವೀಟ್ ಉಲ್ಲೇಖಿಸಿ ಕಾಂಗ್ರೆಸ್ ಪಕ್ಷವು ಸೋಷಿಯಲ್ ಮೀಡಿಯಾದಲ್ಲಿ ತೇಜಸ್ವಿ ಅವರನ್ನು ತರಾಟೆಗೆ ತೆಗೆದುಕೊಂಡಿತು. ಕೆಲ ಮಾಧ್ಯಮಗಳು ಇದನ್ನು ಸುದ್ದಿಯಾಗಿ ಬಿತ್ತರಿಸಿದವು. ಅದಾದ ಬಳಿಕ ತೇಜಸ್ವಿ ಸೂರ್ಯ ಅವರು ಸಿವಿಲ್ ಕೋರ್ಟ್ ಮೊರೆ ಹೋಗಿ ಮಾಧ್ಯಮಗಳ ಮೇಲೆ ನಿರ್ಬಂಧ ಆಜ್ಞೆ ತಂದರು. ತೇಜಸ್ವಿ ಸೂರ್ಯ ವಿರುದ್ಧ ತೇಜೋವಧೆ ಮಾಡುವಂತಹ ಸುದ್ದಿಗಳನ್ನ ಪತ್ರಿಕೆಗಳು, ಸುದ್ದಿ ವಾಹಿನಿಗಳು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಬೇಡಿ ಎಂದು ಮಾರ್ಚ್ 29ರಂದು ಸಿವಿಲ್ ಕೋರ್ಟ್ ತಾತ್ಕಾಲಿಕ ಇಂಜಕ್ಷನ್ ಆರ್ಡರ್ ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರಜಾಪ್ರಭುತ್ವ ಸುಧಾರಣೆ ಸಂಸ್ಥೆಯು ಹೈಕೋರ್ಟ್​ನಲ್ಲಿ ಪಿಐಎಲ್ ಸಲ್ಲಿಸಿತ್ತು. ಇದೀಗ ಉಚ್ಚನ್ಯಾಯಾಲಯವು ಮಾಧ್ಯಮಗಳ ವಿರುದ್ಧದ ನಿರ್ಬಂಧ ಆಜ್ಞೆಯನ್ನ ತೆರವುಗೊಳಿಸಿದೆ.

Comments are closed.