ಕರ್ನಾಟಕ

ಧಾರವಾಡ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಕೈ ಕೊಡಲಿರುವ ಮುಸ್ಲಿಂ ಮತದಾರರು?

Pinterest LinkedIn Tumblr


ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಈ ಬಾರಿ ಮುಸ್ಲಿಂ ಓಟ್‌ಬ್ಯಾಂಕ್‌ ಕೈಕೊಡುವ ಲಕ್ಷಣಗಳು ಕಾಣಿಸುತ್ತಿವೆ. ತಮ್ಮ ಸಮಾಜಕ್ಕೆ ಕೊನೆ ಕ್ಷಣದಲ್ಲಿ ಟಿಕೆಟ್‌ ಕೈತಪ್ಪಿದ್ದಕ್ಕೆ ಮುಸ್ಲಿಂ ಸಮುದಾಯವರು ಅಸಮಾಧಾನಗೊಂಡಿದ್ದು, ಕಾಂಗ್ರೆಸ್‌ ಪಕ್ಷದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೈ ಅಭ್ಯರ್ಥಿಗೆ ಮುಸ್ಲಿಂ ಅಸಮಾಧಾನದ ಶಾಕ್‌ ಜೋರಾಗಿಯೇ ತಟ್ಟಲಿದೆ ಎನ್ನುವ ವಿಶ್ಲೇಷಣೆಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಸಾಮಾಜಿಕ ನ್ಯಾಯದ ಆಧಾರದ ಮೇಲೆ ರಾಜ್ಯದಲ್ಲಿ ಇಬ್ಬರು ಮುಸ್ಪಿಮರಿಗೆ ಟಿಕೆಟ್‌ ಕೊಡಬೇಕು ಎನ್ನುವುದು ಕಾಂಗ್ರೆಸ್‌ ಪಕ್ಷದ ನಿಲುವಾಗಿತ್ತು. ಬೆಂಗಳೂರು ಕೇಂದ್ರ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಲಸಜ್ಜಾಗಿತ್ತು. ಧಾರವಾಡ ಕ್ಷೇತ್ರದಲ್ಲಿ ಮಾಜಿ ಸಂಸದ ಐ.ಜಿ. ಸನದಿಯವರ ಮಗ ಶಾಕಿರ್‌ ಸನದಿಯ ಹೆಸರು ಬಹುತೇಕ ಫೈನಲ್‌ ಆಗಿತ್ತು. ಆದರೆ ಮಾಜಿ ಸಚಿವ ವಿನಯ್ ಕುಲಕರ್ಣಿಯವರಿಗೆ ಟಿಕೆಟ್ ಕೊಡಿಸಲು ಲಿಂಗಾಯತ ಲಾಬಿ ಹೆಚ್ಚಾದ ಕಾರಣ ಮುಸ್ಲಿಮರಿಗೆ ಟಿಕೆಟ್‌ ಕೈತಪ್ಪಿದೆ. ಕೊನೆಯ ಕ್ಷಣದವರೆಗೆ ಟಿಕೆಟ್‌ ಸಿಗುತ್ತೆ ಎಂದು ಕಾಯ್ದು ಕುಳಿತಿದ್ದ ಮುಸ್ಲಿಂ ಸಮುದಾಯಕ್ಕೆ ಇದು ಬಿಗ್‌ ಶಾಕ್‌ ನೀಡಿದೆ.

ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯ ಕಾಪಾಡಿಲ್ಲ. ಹಣ ಬಲವಿಲ್ಲದ ಕಾರಣಕ್ಕೆ ತಮಗೆ ಟಿಕೆಟ್‌ ಕೈತಪ್ಪಿದೆ ಎಂದು ಸ್ವತಃ ಮಾಜಿ ಸಂಸದ ಐ.ಜಿ. ಸನದಿಯವರಿ ಸಚಿವ ಆರ್.ವಿ. ದೇಶಪಾಂಡೆ ಮತ್ತು ವಿನಯ್ ಕುಲಕರ್ಣಿ ಸಮ್ಮುಖದಲ್ಲಿ ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದಾರೆ.

ಟಿಕೆಟ್‌ ಕೈತಪ್ಪುತ್ತಿದ್ದಂತೆ ಮುಸ್ಲಿಮರು ಕಾಂಗ್ರೆಸ್‌ ವಿರುದ್ಧ ತಿರುಗಿಬಿದ್ದಿದ್ದಾರೆ. ಸ್ಥಳೀಯ ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಕಾಂಗ್ರೆಸ್‌ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ಅಧಿಕಾರಕ್ಕೆ ಬರಲು ಮುಸ್ಲಿಮರ ಓಟು ಬೇಕು. ಆದರೆ ಟಿಕೆಟ್‌ ಕೊಡುವಾಗ ಮಾತ್ರ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್‌ಗೆ ಕೈ ಕೊಡಬಹುದೆಂದು ವಿಶ್ಲೇಷಿಸಲಾಗುತ್ತಿದೆ.

ಲಿಂಗಾಯತ ಹೋರಾಟದಿಂದ ಕೈಸುಟ್ಟುಕೊಂಡಿರುವ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಲಕರ್ಣಿಗೆ ಈಗ ಮತ್ತೊಂದು ಸವಾಲು ಎದುರಾಗಿದೆ. ವೀರಶೈವ ಲಿಂಗಾಯತರನ್ನು ಒಡೆಯುತ್ತಿದ್ದಾರೆ ಎನ್ನುವ ಕಾರಣ ವೀರಶೈವ ಸಮುದಾಯ ವಿನಯ್ ಕುಲಕರ್ಣಿ ವಿರುದ್ಧ ಅಸಮಾಧಾನಗೊಂಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಲಿಂಗಾಯತ ಹೋರಾಟವೂ ಕಾರಣ ಎಂದು ವಿನಯ್‌ ಕುಲಕರ್ಣಿಯೇ ಒಪ್ಪಿಕೊಂಡಿದ್ದಾರೆ. ಈಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ವಿನಯ್ ಕುಲಕರ್ಣಿಗೆ ಅಲ್ಪಸಂಖ್ಯಾತರ ಅಸಮಾಧಾನದ ಶಾಕ್‌ ಎದುರಾಗಿದೆ. ಈ ಡ್ಯಾಮೇಜ್‌ನ್ನು ಕಂಟ್ರೋಲ್‌ ಮಾಡುವಂತೆ ಕ್ಷೇತ್ರದ ಕೈನಾಯಕರು ಹೈಕಮಾಂಡ್‌ ಮೊರೆ ಹೋಗಿದ್ದಾರೆ.

Comments are closed.