ಕರ್ನಾಟಕ

ನಮ್ಮ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಮೋದಿಯಿಂದ ಸಾಧ್ಯವಿಲ್ಲ: ದೇವೇಗೌಡ

Pinterest LinkedIn Tumblr


ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಂದು ತಮ್ಮ ತವರು ಜಿಲ್ಲೆ ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದರು. ಬೇಲೂರು ತಾಲೂಕಿನ ವಿವಿಧೆಡೆ ಸಂಚರಿಸಿದ ಗೌಡರು, ಬಿರುಸಿನ ಪ್ರಚಾರ ಮಾಡಿದರು. ಪ್ರಚಾರದ ವೇಳೆ ಹೋದ ಕಡೆಯೆಲ್ಲಾ ಬಿಜೆಪಿ ವಿರುದ್ಧ ಹರಿಹಾಯ್ದ ದೇವೇಗೌಡರು, ದೇಶದಲ್ಲಿ ಮೋದಿ ಬಿಟ್ಟರೇ ಬೇರೆ ಯಾರು ಪ್ರಧಾನಿಯಾಗಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಅಂತೆಯೇ ಮಾಧ್ಯಮದವರು ಕೂಡ ಮೋದಿ ಹೊರತುಪಡಿಸಿ ಬೇರೆ ಯಾರೂ ದೇಶ ಆಳರು ಎಂಬಂತೆ ಬಿಂಬಿಸುತ್ತಿದ್ದಾರೆ. ಬಿಎಸ್​​ಪಿ ನಾಯಕಿ ಮಾಯಾವತಿ, ಸಿಎಂ ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಸೇರಿದಂತೆ ರಾಹುಲ್ ಗಾಂಧಿಗೆ ಈ ದೇಶ ಆಳುವ ಸಾಮರ್ಥ್ಯ ಇಲ್ಲವೇ ಎಂದು ತಪರಾಕಿ ಬಾರಿಸಿದರು.

ಇನ್ನು ನಾನು ಮತ್ತು ಸಿದ್ದರಾಮಯ್ಯ ಒಟ್ಟಿಗೆ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇವೆ. ಈ ಮೂಲಕ ಬಿಜೆಪಿ ಬಲ ಕುಗ್ಗಿಸಲು ಹೋರಾಟ ಮಾಲಿದ್ದೇವೆ. ಪ್ರಜ್ವಲ್​ನನ್ನು ಗೆಲ್ಲಿಸಲು ಕಾಂಗ್ರೆಸ್​-ಜೆಡಿಎಸ್​​ ಒಟ್ಟಿಗೆ ಕೆಸಲ ಮಾಡಬೇಕಿದೆ. ಇಲ್ಲಿನ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕಿದೆ ಎಂದರು.

ತಮ್ಮ ಇಡೀ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ವಿರುದ್ಧ ಬಹಿರಂಗವಾಗಿಯೇ ಗೌಡರು ಹರಿಹಾಯ್ದಿದ್ದಾರೆ. ಮೋದಿ 5 ವರ್ಷ ದೇಶ ಆಡಳಿತ ನಡೆಸಿದರೇ, ವಾಜಪೇಯಿ 6 ವರ್ಷ ಆಡಳಿತ ನಡೆಸಿದ್ದಾರೆ. ಆದರೆ, ಮೋದಿ ಅವರಂತೆ ಕೆಟ್ಟದಾಗಿ ಎಂದು ಕೂಡ ವಾಜಪೇಯಿ ನಡೆದುಕೊಂಡಿಲ್ಲ. ಈ ಬಾರಿ ಬೆಂಗಳೂರಿನಲ್ಲಿ ಬಿಜೆಪಿ ಒಂದೇ ಒಂದು ಸೀಟು ಗೆಲ್ಲಲು ಬಿಡುವುದಿಲ್ಲ. ಅದಕ್ಕಾಗಿಯೇ ಕಾಂಗ್ರೆಸ್​-ಜೆಡಿಎಸ್ ಒಟ್ಟಿಗೆ ಕೆಲಸ ಮಾಡುತ್ತಿದೆ​​ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370 ವಿಧಿ ರದ್ದು ಮಾಡಿ ಪ್ರತ್ಯೇಕ ದೇಶ ಮಾಡಿ ಎಂಬ ಓಮರ್ ಅಬ್ದುಲ್ಲಾ ಹೇಳಿಕೆಗೆ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಘಟಬಂಧನ್ ನಾಯಕರ ನಿಲುವೇನು ಎಂದು ಪ್ರಶ್ನಿಸಿದ್ದ ಪ್ರಧಾನಿ ಮೋದಿ ಅವರಿಗೂ ತಕ್ಕ ಉತ್ತರ ನೀಡಿದರು. ಮೋದಿ ಇಡೀ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕೆಂದು ಹೊರಟಿದ್ದಾರೆ. ಇದು ಮೋದಿ ಕೈಯಲ್ಲಿ ಸಾಧ್ಯವಾಗದ ಕೆಲಸ. ದೇಶದ 130 ಕೋಟಿ ಜನತೆ ಒಪ್ಪಿದರೇ ಖಂಡಿತಾ ಹಿಂದೂ ರಾಷ್ಟ್ರವನ್ನಾಗಿ ಮಾಡಲಿ ಎಂದು ಹೇಳಿದರು.

ನಾನೇ ಎಂದು ಮೆರೆಯುತ್ತಿದ್ದ ಮೋದಿ ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಸೋತರು. ಮೂರು ರಾಜ್ಯಗಳು ಕೈ ತಪ್ಪಿದ ನಂತರದಲ್ಲಿ ಐಟಿ ಮತ್ತು ಇಡಿ ದಾಳಿ ಮೂಲಕ ಸಣ್ಣ ಪಕ್ಷಗಳನ್ನು ಮುಗಿಸಲು ಹೊರಟಿದ್ದಾರೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್​​ನ ಎಲ್ಲಾ ಮೈತ್ರಿ ಅಭ್ಯರ್ಥಿಗಳು ಬಿಜೆಪಿ ಅಭ್ಯರ್ಥಿಗಳನ್ನು ಮಣಿಸಿ ಗೆಲ್ಲಬೇಕೆಂಬುದೇ ನಮ್ಮ ಗುರಿ ಎಂದು ತಿಳಿಸಿದರು.

ನಮ್ಮ ಕುಲದೇವತೆ ತಾಯಿ ಪಾರ್ವತಿಗೆ ಪೂಜೆ ಮಾಡಿದ್ದೇವೆ. ಎಲಿಯೂರಿನಲ್ಲಿ ದೇವೀರಮ್ಮ, ಹರದನಹಳ್ಳಿಯಲ್ಲಿ ಈಶ್ವರ ದೇವರಿಗೆ ವರ್ಷಕ್ಕೆ ಎರಡು ಬಾರಿ ಬಂದು ಪೂಜೆ ಮಾಡುತ್ತೇವೆ. ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಬಂದು ಪೂಜೆ ಮಾಡುತ್ತಿಲ್ಲ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದು, ತಾವು ಬೇರೆ ಕೇತ್ರದಲ್ಲಿ ಸ್ಪರ್ಧಿಸಿರುವುದಕ್ಕೆ ಕಾರಣ ಬೇರೆ ಇದೆ ಎಂದು ವಿವರಿಸಿದರು.

Comments are closed.