ಕರ್ನಾಟಕ

14 ಮಕ್ಕಳು, 14 ಸೊಸೆಯರನ್ನು ದೇವೇಗೌಡ ಹೊಂದ್ದಿದ್ದರೆ 28 ಕ್ಷೇತ್ರಕ್ಕೂ ಅಭ್ಯರ್ಥಿ ನಿಲ್ಲಿಸಬಹುದಿತ್ತು: ಈಶ್ವರಪ್ಪ

Pinterest LinkedIn Tumblr


ಕೊಪ್ಪಳ: “ಮಾಜಿ ಪ್ರಧಾನಿ ದೇವೇಗೌಡರಿಗೆ 14 ಮಕ್ಕಳು, 14 ಸೊಸೆ ಇದ್ದಿದ್ದರೆ 28 ಕ್ಷೇತ್ರಕ್ಕೂ ಅಭ್ಯರ್ಥಿ ನಿಲ್ಲಿಸಬಹುದಿತ್ತು. ಗೌಡರ ಮನೆಯಲ್ಲಿ ಅಷ್ಟು ಜನ ಯಾಕಿಲ್ಲ ಎಂಬುದು ನನಗೆ ಬೇಸರ ತರಿಸಿದೆ. ತಮ್ಮ ಮೊಮ್ಮಗನಿಗೆ ಕ್ಷೇತ್ರ ಬಿಟ್ಟು, ದೇಶಕ್ಕೇನೋ ತ್ಯಾಗ ಮಾಡಿದಂತೇ ಗೌಡರು ಕಣ್ಣೀರು ಹಾಕುತ್ತಿದ್ಧಾರೆ” ಎಂದು ಬಿಜೆಪಿ ಶಾಸಕ ಕೆ.ಎಸ್​​​ ಈಶ್ವರಪ್ಪ ವ್ಯಂಗ್ಯವಾಡಿದ್ಧಾರೆ. ಈ ಮೂಲಕ ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಕುಹಕವಾಡಿದ್ದಾರೆ.

ಕರ್ನಾಟಕದಲ್ಲೀಗ ಲೋಕಸಭೆ ಚುನಾವಣೆಗೆ ದಿನಗಣನೇ ಶುರುವಾಗಿದೆ. ಕಾಂಗ್ರೆಸ್​​​-ಜೆಡಿಎಸ್ ಮೈತ್ರಿಯಾಗಿ ಚುನಾವಣೆಗೆ ಹೋಗುತ್ತಿದ್ದರೇ, ಬಿಜೆಪಿ ಏಕಾಂಗಿ ಹೋರಾಟಕ್ಕೆ ಮುಂದಾಗಿದೆ. ಇತ್ತ ದೋಸ್ತಿ ನಾಯಕರು ಬಹಿರಂಗವಾಗಿಯೇ ಬಿಜೆಪಿ ನಾಯಕರ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ್ದಾರೆ. ಅತ್ತ ಕೇಸರಿ ನಾಯಕರು ಕೂಡ ಮೈತ್ರಿ ​ನಾಯಕರ ವಿರುದ್ಧ ಕೆಂಡಕಾರುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿಯೇ ಮೂರು ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ.

ಅಂತೆಯೇ ಇಂದು ಕೊಪ್ಪಳದಲ್ಲಿ ಸುದ್ದಿಗಾರರ ಜತೆ ಮಾತಾಡಿದ ಬಿಜೆಪಿ ಶಾಸಕ ಕೆ.ಎಸ್​ ಈಶ್ವರಪ್ಪ ಅವರು, ನಾವು ಮೂರು ಅಂಶಗಳೊಂದಿಗೆ ಚುನಾವಣೆ ಎದುರಿಸುತ್ತಿದ್ದೇವೆ. ಸಂಘಟನೆ, ರಾಷ್ಟ್ರೀಯತೆ, ಪ್ರಧಾನಿ ಹೆಸರಿನಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ನಾನು ಕುರುಬ ಅಲ್ಲವೇ ಅಲ್ಲ, ನಾ‌ನೊಬ್ಬ ಹಿಂದು, ನಾನೊಬ್ಬ ರಾಷ್ಟ್ರೀಯವಾದಿ ಎಂದರು.

ಹಾಗೆಯೇ ಸಿದ್ದರಾಮಯ್ಯ ಒಬ್ಬ ಜಾತಿವಾದಿ. ನಾನು ಅಹಿಂದ ಮತ್ತು ಕುರುಬರಿಗೆ ಮಾಡಿದಷ್ಟು ಕೂಡ ಸಿದ್ದರಾಮಯ್ಯ ಮಾಡಿಲ್ಲ. ಅವರು ಕುರುಬ ಸಮುದಾಯಕ್ಕೆ ಏನು ಮಾಡಿದ್ದಾರೆ? ಎಂದು ಈಶ್ವರಪ್ಪ ಪ್ರಶ್ನಿಸಿದರು. ಜತೆಗೆ 125 ಕೋಟಿ ಖರ್ಚು ಮಾಡುವ ಮೂಲಕ ಸಿದ್ದರಾಮಯ್ಯ ಜಾತಿ ಗಣತಿ ಮಾಡಿದರು. ಈ ವರದಿ ಸರ್ಕಾರದ ಬಳಿಯಿದ್ದರೂ ಇನ್ನೂ ಬಿಡುಗಡೆ ಮಾಡುತ್ತಿಲ್ಲ. ಕುರುಬ ಸಮುದಾಯವನ್ನು ಕೇವಲ ರಾಜಕಾರಣಕ್ಕೆ ಮಾತ್ರ ಬಳಕೆ ಮಾಡುತ್ತಿರೋ ಮಹಾ ಪುರುಷ ಎಂದರೇ ಸಿದ್ದರಾಮಯ್ಯ ಎಂದು ಟೀಕಿಸಿದರು.

ಸಿದ್ದರಾಮಯ್ಯ ಸ್ವಯಂ ಘೋಷಿತ ಕುರುಬ ಮತ್ತು ಅಹಿಂದ ನಾಯಕ. ಕುರುಬರಿಗಾಗಲೀ, ಅಹಿಂದ ವರ್ಗಕ್ಕಾಗಲೀ ಬಿಜೆಪಿ ನೀಡಿದ್ದಕ್ಕಿಂತ ಕಾಂಗ್ರೆಸ್​​​ 1 ರೂಪಾಯಿ ಜಾಸ್ತಿ ನೀಡಿದ ದಾಖಲೆ ಇದ್ದರೇ ನೀಡಲಿ. ಒಂದು ವೇಳೆ ಸರಿಯಾದ ದಾಖಲೆ ಕಾಂಗ್ರೆಸ್​​ ನೀಡಿದ್ದಲ್ಲಿ ನಾನೇ ರಾಜಕೀಯ ಸನ್ಯಾಸ ತಗೋತೀನಿ. ಸಿದ್ದರಾಮಯ್ಯ ಕೋಮುವಾದಿ ಕೊಲೆಗಡುಕ. ಸುಮ್ಮನೇ ಪ್ರಧಾ‌ನಿ ಮೋದಿಗೆ ಕೋಮುವಾದಿ ಅಂತಿದ್ದಾರೆ. ಅವರ ತಲೆಯಲ್ಲಿ ಸಗಣಿ ತುಂಬಿಕೊಂಡಿದೆ. ಕರ್ನಾಟಕದಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲ, ಕೊಡೋದೂ ಇಲ್ಲ. ಯಾಕೆಂದರೇ ಇವರಿಗೆ ನಮ್ಮ ಪಕ್ಷದ ಮೇಲೆ ವಿಶ್ವಾಸವೇ ಇಲ್ಲ ಎಂದು ಕುಟುಕಿದರು.

ಅನ್ಸಾರಿ ಬಿಜೆಪಿ ಸೇರಿದರೇ ಟಿಕೆಟ್ ಕೊಡ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆ.ಎಸ್​​ ಈಶ್ವರಪ್ಪ, ಮುಸ್ಲಿಮರು ನಮ್ಮನ್ನು ನಂಬಿ ಮತ ಹಾಕಿದಾಗ ಟಿಕೆಟ್​​ ನೀಡುತ್ತೇವೆ. ಅನ್ಸಾರಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಮೊದಲು ಅನ್ಸಾರಿ ಬಿಜೆಪಿ ಸೇರಿ, ಹತ್ತಾರು ವರ್ಷ ಕಚೇರಿ ಕಸ ಗುಡಿಸಲಿ. ಪಕ್ಷದ ಕೆಲಸ ಮಾಡಲಿ, ನಂತರ ಟಿಕೆಟ್ ಕೊಡೋದಾ? ಎಂಬುದರ ಬಗ್ಗೆ ಕೊಪ್ಪಳದ ಜನತೆ ಬಳಿ ಕೇಳಿ ತೀರ್ಮಾನ ಮಾಡುತ್ತೇವೆ. ನನ್ನ ಮನೆಯಲ್ಲಿ ನೋಟ್ ಕೌಂಟಿಂಗ್ ಮಷಿನ್ ಇದೆ. ಆದರೆ, ಕಾಂಗ್ರೆಸ್ – ಜೆಡಿಎಸ್​​​ ನಾಯಕರ ಮನೆಯಲ್ಲಿ ನೋಟ್ ಪ್ರಿಂಟಿಂಗ್ ಮಿಷನ್ ಇರಬಹುದು ಎಂದು ಈಶ್ವರಪ್ಪ ತಿರುಗೇಟು ನೀಡಿದರು.

Comments are closed.