ಕರ್ನಾಟಕ

ಅಂಬರೀಶ್​ ಕೊಡುಗೈ ದಾನಿ ಕರ್ಣ ಎಂದು ಹೆಸರಾಗಿದ್ದವರು, ನಾನು ಕೈಚಾಚುತ್ತಿದ್ದೇನೆ; ಸುಮಲತಾ

Pinterest LinkedIn Tumblr


ಮಂಡ್ಯ: “ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ಅಭಿಷೇಕ್​ ಗೌಡನ ತಾಯಿ. ಅಂಬರೀಷ್​ ಹೆಂಡತಿ. ಈ ಮಣ್ಣಿನ ಮಗಳು,” ಎನ್ನುವ ಮೂಲಕ ಸುಮಲತಾ ಜೆಡಿಎಸ್​ ಮತ್ತು ಕೆಲ ಕಾಂಗ್ರೆಸ್​ ನಾಯಕರ ಮಾತುಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಜತೆಗೆ ಸುಮಲತಾ ಯಾರು ಎನ್ನುವವರಿಗೆ ಜನರಿಂದಲೇ ಉತ್ತರ ಸಿಗಲಿದೆ ಎಂದೂ ಸುಮಲತಾ ಗುಡುಗಿದ್ದಾರೆ. ಬುಧವಾರ ಬೆಳಗ್ಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಬಹಿರಂಗ ಸಮಾವೇಶದಲ್ಲಿ ಅಬ್ಬರಿಸಿದ ಅವರು ತಮ್ಮ ವಿರುದ್ಧ ಕೇಳಿ ಬಂದ ಟೀಕೆಗಳಿಗೆಲ್ಲ ಸಮರ್ಥ ಉತ್ತರ ನೀಡಿದರು. ಸಮಾವೇಶಕ್ಕೆ ಹರಿದು ಬಂದಿದ್ದ ಜನಸಾಗರ ಮತ್ತು ಸುಮಲತಾರ ದಿಟ್ಟ ಮಾತು ಎದುರಾಳಿಗಳಲ್ಲಿ ನಡುಕ ಶುರುಮಾಡಿರಲೂಬಹುದು.

ನನಗೆ ರಾಜಕೀಯ ಗೊತ್ತಿಲ್ಲ. ನನಗೆ ಯಾವ ಅರ್ಹತೆ ಇದೆ. ಇಂದು ಇಲ್ಲಿ ಮತ ಕೇಳುತ್ತಿರುವರು ನಾಳೆ ವಿದೇಶದಲ್ಲಿ ಇರುತ್ತಾರೆ ಎಂದು ಟೀಕೆ ಮಾಡುತ್ತಾರೆ. ನಾನು ರಾಜಕೀಯಕ್ಕೆ ನಿಂತಿರುವುದು ಮಂಡ್ಯ ಜನರ ಪ್ರೀತಿಗಾಗಿ. ಅಂಬರೀಷ್​ ಅವರ ಕೆಲಸವನ್ನು ಮುಂದುವರೆಸಿಕೊಂಡು ಹೋಗುವವರು ಯಾರು ಎಂದು ಮಂಡ್ಯದ ಸಾವಿರಾರು ಜನರು ಬಂದು ಕೇಳಿದರು. ಆ ಜನರ ಪ್ರೀತಿ ಉಳಿಸಿಕೊಂಡು ಹೋಗುವ ಸಲುವಾಗಿ ನಾನು ಈ ಹಾದಿಯನ್ನು ಆರಿಸಿಕೊಂಡಿದ್ದೇನೆ.

ನನಗೆ ಅಧಿಕಾರ ದಾಹ ಇದ್ದಿದ್ದರೆ, ನಿಮ್ಮ ಆಮಿಷಗಳಿಗೆ ನಾನು ಒಪ್ಪಿಕೊಳ್ಳುತ್ತಿದ್ದೆ. ಆದರೆ, ನನಗೆ ಇರುವುದು ಜನರ ಪ್ರೀತಿಯನ್ನು ಉಳಿಸಿಕೊಂಡು ಹೋಗಬೇಕೆಂಬ ಕಾಳಜಿ. ಆ ಜನರ ಪ್ರೀತಿಗೆ ಕಟ್ಟು ಬಿದ್ದು, ಅವರ ಅಭಿಪ್ರಾಯ ಪಡೆದು ನಾನು ನಿಂತಿದ್ದೇನೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದ ಜನ ಮುಗ್ದರು, ಮುಠ್ಠಾಳರಲ್ಲ. ಅವರ ಸ್ವಾಭಿಮಾನ ತೋರಿಸುವ ಸಮಯ ಇದೀಗ ಬಂದಿದೆ ಎಂದು ತಮ್ಮ ವಿರುದ್ಧ ಟೀಕಿಸಿದವರಿಗೆ ತಿರುಗೇಟು ನೀಡಿದರು.

40 ವರ್ಷದಿಂದ ನಾನು ಚಿತ್ರಂಗದಲ್ಲಿದ್ದೇನೆ. ಅಂಬರೀಷ್​ ನೆಮ್ಮದಿಯಿಂದ ಜೀವನ ಸಾಗಿಸುವಷ್ಟು ಮಾಡಿಟ್ಟಿದ್ದಾರೆ. ಸಿನಿಮಾರಂಗದಲ್ಲಿ ಈಗಾಗಲೇ ಹೆಸರನ್ನು ಹೊಂದಿದ್ದೇನೆ. ರಾಜಕೀಯದಲ್ಲಿ ನನ್ನ ಅಸ್ತಿತ್ವ ಕಂಡುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ರಾಜಕೀಯಕ್ಕೆ ಬರುವ ಬಗ್ಗೆ ಏಕಾಏಕಿ ನಿರ್ಧಾರ ಕೈಗೊಂಡಿಲ್ಲ. ಅನೇಕರ ಬಳಿ ಸಮಾಲೋಚನೆ ನಡೆಸಿ ನಂತರ ಈ ನಿರ್ಧಾರಕ್ಕೆ ಬಂದಿದ್ದೇನೆ, ಎಂದು ಸುಮಲತಾ ತಿಳಿಸಿದರು.

ನನ್ನ ಮುಂದೆ ಇರುವುದು ಕಠಿಣ ಸವಾಲು, ನೀವೆಲ್ಲಾ ಕೈ ಜೋಡಿಸಿದರೆ ಈ ಕಷ್ಟ ಅಸಾಧ್ಯವಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ ಸುಮಲತಾ, ಅಂಬರೀಶ್​ ನಡೆಸಿಕೊಂಡು ಬಂದ ಕೆಲಸವನ್ನು ಮುಂದುವರೆಸುವ ಭರವಸೆ ನೀಡಿದರು. ನೀವೆಲ್ಲರೂ ನನ್ನ ಜತೆಗೆ ನಿಂತರೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ, ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ನಿಲ್ಲುತ್ತೇನೆ. ಮಂಡ್ಯದ ಜನರ ಎಲ್ಲಾ ಕಷ್ಟಗಳಿಗೂ ಹೆಗಲು ಕೊಡುತ್ತೇನೆ ಎಂದರು.

ಕಾಂಗ್ರೆಸ್​ ವಿರುದ್ಧ ಮುನಿಸು:

ಅಂಬರೀಷ್​ ಕಾಂಗ್ರೆಸ್​ನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಪಕ್ಷದ ಕದ ತಟ್ಟಿದೆ. ಮಂಡ್ಯದ ಜನರ ಜನಾಭಿಪ್ರಾಯ ಮುಂದಿಟ್ಟು ಜನಪರವಾಗಿ ಮುನ್ನಡೆಯೋಣ ಎಂದೆ. ಒಂದು ಕಾಲದಲ್ಲಿ ಕಾಂಗ್ರೆಸ್​ ಪ್ರಾಬಲ್ಯ ಹೊಂದಿದ್ದ ಮಂಡ್ಯ ಕ್ಷೇತ್ರ ನಿಮಗೆ ಬೇಡವಾ? ನಿಮ್ಮನ್ನು ನಂಬಿದವರನ್ನು ಕೈ ಬಿಡುತ್ತೀರಾ ಎಂದು ಕೇಳಿದೆ. ಆದರೆ, ಕಾಂಗ್ರೆಸ್​ ನಾಯಕರಿಂದ ಬಂದ ಉತ್ತರ ನಿರಾಶಾದಾಯಕವಾಗಿತ್ತು. ಮೈತ್ರಿ ಧರ್ಮ ಪಾಲಿಸಬೇಕು ಎಂಬ ಕಾರಣದಿಂದ ಅವರು ನಿಸ್ಸಹಾಯಕರಾಗಿದ್ದಾರೆ. ಮೈತ್ರಿ ಧರ್ಮ ಎಷ್ಟು ಮಟ್ಟಕ್ಕೆ ಪಾಲಿಸುತ್ತಾರೆ ನೀವೇ ನೋಡಿ. ಕಾರ್ಯಕರ್ತರಿಗೆ ಬೆದರಿಕೆ ಹಾಕುವುದು ನಡೆಯುತ್ತದೆಯಾ ನೋಡಿ ಎಂದು ಕುಟುಕಿದರು.

ತಾಯಿಗೋಸ್ಕರ ಬಂದ್ರೆ ತಪ್ಪಾ:

ದರ್ಶನ್​ ಮತ್ತು ಯಶ್​ ನನ್ನ ಬೆಂಬಲಕ್ಕೆ ನಿಂತಿರುವುದಕ್ಕೆ ಟೀಕೆಗಳು ಕೇಳು ಬರುತ್ತಿದೆ. ದರ್ಶನ್​ ಆಗಲಿ ಯಶ್​ ಆಗಲಿ ಬಂದಿರುವುದು ತಾಯಿಗೋಸ್ಕರ. ತಾಯಿಗಾಗಿ ಪ್ರಚಾರಕ್ಕೆ ಬರುವುದು ತಪ್ಪಾ. ಅವರು ನಮ್ಮ ಮನೆ ಮಕ್ಕಳು. ನೀವು ಈ ರೀತಿ ಆಡುತ್ತಿರುವ ಮಾತಿನಿಂದ ನೋವಾಗುತ್ತಿರುವುದು ಅಭಿಮಾನಿಗಳಿಗೆ ಎಂದರು.

ಚಿತ್ರರಂದವರ ಬಗ್ಗೆ ಮಾತನಾಡಲ್ಲ ಎನ್ನುತ್ತೀರಲ್ಲ, ನೀವು ಯಾವ ನಟರನ್ನು ಪ್ರಚಾರಕ್ಕೆ ಕರೆದಿಲ್ಲ. ನನ್ನ ಪರ ಚಿತ್ರರಂಗ ನಿಂತಿದೆ ಎಂದರೆ ಅದಕ್ಕೆ ಕಾರಣ ಅಂಬರೀಷ್​ ಅವರ ಪ್ರೀತಿ, ಎಂದರು.

ಅಂಬರೀಷ್​ ಕೆಲಸಗಳೇ ಮಾತನಾಡುತ್ತವೆ:

ಅಂಬರೀಷ್​ ಮಂಡ್ಯಕ್ಕೆ ಏನು ಮಾಡಿದರು ಎಂದು ಕೇಳುತ್ತಾರೆ. ಅವರು ಏನು ಮಾಡಿದರು ಎಂದು ಅವರ ಕೆಲಸಗಳು ಹೇಳುತ್ತವೆ. ನಾಡಿನ ರೈತರು ಕಷ್ಟದಲ್ಲಿದ್ದಾಗ ಕೇಂದ್ರ ಸಚಿವ ಸ್ಥಾನ ಬಿಟ್ಟು ಬಂದವರು ಅವರು. ಚುನಾವಣೆ ಬಂದಾಗ ಬಿ ಫಾರಂಗಾಗಿ ಕಚೇರಿಗೆ ಹೋದವರಲ್ಲ. ಅವರನ್ನು ಹುಡುಕಿಕೊಂಡು ಮನೆಗೆ ಬಿ ಫಾರಂ ತಂದು ಕೊಟ್ಟಾಗ ನೋವಿನಿಂದ ವಾಪಸ್ಸು ಕಳುಹಿಸಿದವರು ಅವರು.

ಮೂರು ಬಾರಿ ಎಂಪಿ ಆಗಿದ್ದ ಅವರ ಸಾಧನೆ ಏನು ಎಂದು ಓದಲು ಶುರುಮಾಡಿದರೆ ಚುನಾವಣೆವರೆಗೆ ಸಮಯಬೇಕಾಗುತ್ತದೆ. ​ನಮ್ಮ ಸಾಧನೆಗಳು ನಮ್ಮ ಬಗ್ಗೆ ಮಾತನಾಡಬೇಕು ಎನ್ನುತ್ತಿದ್ದರು ಅಂಬರೀಶ್​ ಎಂದು ಗಂಡನನ್ನು ನೆನಪಿಸಿಕೊಂಡರು.

ಕಳೆದ ನಾಲ್ಕು ತಿಂಗಳಿಂದ ನಾನು ಯಾವ ಮನಸ್ಥಿತಿಯಲ್ಲಿದ್ದೇನೆ ಎಂಬುದು ನನಗೆ ಗೊತ್ತು. ಯಾವುದನ್ನು ನಾನು ನೋಡಬಾರದು ಎಂದು ಕೊಂಡಿದ್ದೆ, ಅದು ಆಗಿಯೇ ಹೋಯಿತು. ಆದರೆ ನೋವನ್ನು ಗೆದ್ದು ನಿಲ್ಲುವ ಆತ್ಮಸ್ಥೈರ್ಯವನ್ನು ಮಂಡ್ಯದ ಜನ ನನಗೆ ನೀಡಿದರು.

ನನ್ನ ನಿರ್ಧಾರ ತಿಳಿಸುವ ಮುನ್ನವೇ ರಾಜಕೀಯ ಮುಖಂಡರಿಂದ ಮಾತುಗಳು ಬಾಣವಾಗಿ ಬಂದವು. ಈ ಮಾತಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಜನರೇ ಇದಕ್ಕೆ ಉತ್ತರ ಕೊಡುತ್ತಾರೆ. ಮುಂದಿರುವ ಸವಾಲುಗಳಿಗೂ ಜನರೇ ಉತ್ತರ ನೀಡಲಿದ್ದಾರೆ.

ನಾವು ಸಮಾವೇಶ ಮಾಡುವಾಗ ಎಲ್ಲ ಮನೆಯ ಕೇಬಲ್​ ಕಟ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಾಧ್ಯವಾದರೆ ಅವರು ಈ ಪ್ರೀತಿ ಕಟ್​ ಮಾಡಲಿ. ಇದು ಯಾರ ಕೈಯಲ್ಲಿ ಆಗಲ್ಲ. ಎಷ್ಟೋ ಜನರ ಋಣದಿಂದ ಬಂದಿದ್ದು ಇದನ್ನು ಉಳಿಸಿಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದರು.

ಕೈ ಚಾಚಿದ ಸುಮಲತಾ:

ಅಂಬರೀಷ್​ ಅವರು ಕೊಡುಗೈ ದಾನಿ, ಕರ್ಣ ಎಂದು ಹೆಸರಾಗಿದ್ದರು. ಅವರಿಗೆ ಯಾವಗಲೂ ಕೊಟ್ಟೇ ಅಭ್ಯಾಸ. ಆದರೆ ನಾನು ಇಂದು ನಿಮ್ಮ ಮುಂದೆ ಇಂದು ಕೈ ಚಾಚುತ್ತಿದ್ದೇನೆ. ಒಂದು ಮಾತು ಕೊಡಿ. ನೀವು ನನ್ನ ಜೊತೆ ಇರುತ್ತೀರಾ, ನನ್ನ ಕೈ ಹಿಡಿಯುತ್ತೀರಾ? ನಿಮ್ಮ ಪ್ರೀತಿಗೆ ಚಿರಋಣಿಯಾಗಿ ನಿಮ್ಮ ಸೇವೆ ಮಾಡುತ್ತೇನೆ ಎನ್ನುವ ಮೂಲಕ ತಮ್ಮ ಮಾತನ್ನು ಸುಮಲತಾ ಮುಗಿಸಿದರು.

Comments are closed.