ಬೆಂಗಳೂರು: ರೌಡಿ ಲಕ್ಷ್ಮಣ್ ಕೊಲೆ ಪ್ರಕರಣ ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದ್ದು, ಕಳೆದ ದಿನವಷ್ಟೆ ಆರೋಪಿ ವರ್ಷಿಣಿ ತನ್ನ ಪ್ರಿಯಕರನಿಗೆ ಗೊತ್ತಿಲ್ಲದೆ ಮೃತ ಲಕ್ಷ್ಮಣನನ್ನು ಪ್ರೀತಿ ಮಾಡುತ್ತಿದ್ದಳು ಎಂದು ಸಿಸಿಬಿ ಪೊಲೀಸರ ತನಿಖೆ ವೇಳೆ ತಿಳಿದುಬಂದಿತ್ತು. ಆದ್ರೆ ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರಮಾಪ್ತ ಶಾಸಕರೊಬ್ಬರ ಪುತ್ರನ ಜೊತೆಗೆ ಕೂಡ ಲವ್ವಿಡವ್ವಿ ಇಟ್ಟುಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿ ವರ್ಷಿಣಿಗೆ ಮಂಡ್ಯದ ಪ್ರಭಾವಿ ಶಾಸಕರ ಪುತ್ರನ ಜೊತೆ ಸಂಬಂಧ ಹೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ರೌಡಿ ಲಕ್ಷ್ಮಣನ ಕೊಲೆಯ ಹಿಂದೆ ಶಾಸಕನ ಪುತ್ರನ ಕೈವಾಡ ಇದೆಯಾ ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಿಸಿಬಿ ಪೊಲೀಸರು ಕೊಲೆಯಾದ ರೌಡಿ ಲಕ್ಷ್ಮಣ್‍ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದಾರೆ. ಈ ವೇಳೆ ಆರೋಪಿ ವರ್ಷಿಣಿಯ ಫೋನ್ ಪರಿಶೀಲನೆ ನಡೆಸಿದ್ದಾರೆ. ಆಗ ಶಾಸಕರೊಬ್ಬರ ಪುತ್ರನ ಹಾಗೂ ವರ್ಷಿಣಿ ನಡುವಿನ ಕಾಲ್ ಡೀಟೈಲ್ಸ್ ಸಿಕ್ಕಿದೆ. ಹೀಗಾಗಿ ಇದೀಗ ಇಬ್ಬರ ಫೋನ್ ಕಾಲ್ ಡೀಟೈಲ್ಸ್ ಪಡೆದು ಸಿಸಿಬಿ ಪೊಲೀಸರು ತುಂಬಾ ಆಳವಾಗಿ ತನಿಖೆಯನ್ನು ಆರಂಭಿಸಿದ್ದಾರೆ.
ಒಂದು ವೇಳೆ ಲಕ್ಷ್ಮಣನ ಕೊಲೆ ಕೇಸ್ ನಲ್ಲಿ ಶಾಸಕನ ಪುತ್ರನ ಕೈವಾಡ ಇರುವುದು ಸಾಬೀತಾದರೆ ಶಾಸಕನ ಪುತ್ರನಿಗೆ ಕಂಟಕ ಎದುರಾಗಲಿದ್ದು, ಪ್ರಭಾವಿ ಶಾಸಕರ ಪುತ್ರನನ್ನ ತನಿಖೆಗೊಳಪಡಿಸುವ ಸಾಧ್ಯತೆ ಇದೆ. ಕಳೆದ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯಿಂದ ರೌಡಿ ಲಕ್ಷ್ಮಣ ಸ್ಪರ್ಧೆ ಮಾಡಿದ್ದನು. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಲು ಲಕ್ಷ್ಮಣ್ ಮುಂದಾಗಿದ್ದನು.
ಸದ್ಯಕ್ಕೆ ಸಿಸಿಬಿ ಪೊಲೀಸರು ರೌಡಿ ಲಕ್ಷ್ಮಣ್‍ನ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ತನಿಖೆ ಮಾಡುತ್ತಿದ್ದಾರೆ. ಆದರೆ ಬಂಧಿತ ಆರೋಪಿಗಳು ದಿನಕ್ಕೊಂದು ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸುತ್ತಿದ್ದಾರೆ. ಅದೇ ರೀತಿ ಆರೋಪಿ ವರ್ಷಿಣಿ ಕೂಡ ಕೊಲೆಗೆ ಸಾಥ್ ನೀಡಿದ್ದವರ ಬಗ್ಗೆ ಮಾಹಿತಿ ನೀಡುತ್ತಿದ್ದಾಳೆ.
Comments are closed.