ಕರ್ನಾಟಕ

ಪ್ರತಿ ಬಾರಿ ಟೀಕೆ ಮಾಡಿದಾಗಲೂ ನಾನು ಇನ್ನಷ್ಟು ಗಟ್ಟಿಯಾಗುತ್ತೇನೆ: ಸುಮಲತಾ ಅಂಬರೀಷ್

Pinterest LinkedIn Tumblr

ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವ ಮಾಜಿ ಸಚಿವ ಹಿರಿಯ ಚಿತ್ರನಟ ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರ ಮೇಲೆ ಹಲವು ಆರೋಪ, ಟೀಕೆಗಳು ಕೇಳಿಬರುತ್ತಿವೆ.

ಕಳೆದ ಶುಕ್ರವಾರವಷ್ಟೇ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಸುಮಲತಾ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿ ಭಾರೀ ಟೀಕೆಗೊಳಗಾದರು. ಆದರೆ ಇಂತಹ ಹೇಳಿಕೆಗಳು, ಟೀಕೆಗಳಿಂದ ತಾವು ಕುಗ್ಗಿ ಹೋಗುವುದಿಲ್ಲ. ಪ್ರತಿ ಬಾರಿ ಕಲ್ಲು ಹೊಡೆದಾಗಲೂ ತಮ್ಮ ಮನೆ ಮತ್ತಷ್ಟು ಗಟ್ಟಿಯಾಗುತ್ತದೆ. ಪ್ರತಿ ಬಾರಿ ಟೀಕೆ ಮಾಡಿದಾಗಲೂ ನಾನು ಇನ್ನಷ್ಟು ಗಟ್ಟಿಯಾಗುತ್ತೇನೆ, ಅದನ್ನು ಅವರು ಏಕೆ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಸುಮಲತಾ.

ಮಂಡ್ಯ ಲೋಕಸಭೆ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಸುಮಲತಾ ಇಂಗಿತ ವ್ಯಕ್ತಪಡಿಸಿದಾಗಿನಿಂದ ಅಷ್ಟು ದಿನ ಮಂಡ್ಯ ಜಿಲ್ಲೆ ತನ್ನ ಭದ್ರ ನೆಲೆ ಎಂದು ಭಾವಿಸಿಕೊಂಡಿದ್ದ ಜೆಡಿಎಸ್ ಗೆ ಸೋಲುವ ಭೀತಿ ಎದುರಾಗಿದೆ. ಅದು ಹತಾಶೆಯಿಂದಲೋ ಅಥವಾ ಬೇರೇನಾದರೂ ರಾಜಕೀಯ ಉದ್ದೇಶದಿಂದಲೋ ಹೆಚ್ ಡಿ ರೇವಣ್ಣ ಅವರು ನೀಡಿದ ಹೇಳಿಕೆ ಪಕ್ಷಕ್ಕೆ ಹಾನಿ ಮಾಡಿದ್ದಂತೂ ಹೌದು.ಇಂತಹ ಹೇಳಿಕೆಗಳಿಗೆ ನಾನು ಬಗ್ಗುವುದಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ನನ್ನ ನಿರ್ಧಾರ ಇನ್ನೂ ಅಚಲವಾಗುತ್ತದೆ ಎನ್ನುತ್ತಾರೆ ಸುಮಲತಾ.

ಜನರ ಬೆಂಬಲ ನನಗೆ ಇದೆ: ತಮ್ಮನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆಯೇ ಎಂದು ಕೇಳಿದ್ದಕ್ಕೆ, ಅದು ನನಗೆ ಗೊತ್ತಿಲ್ಲ, ಜನರು ಪಕ್ಷದಲ್ಲಿ ಆಸಕ್ತಿ ಕಳೆದುಕೊಂಡಾಗ ಈ ರೀತಿ ಕ್ಷುಲ್ಲಕ ರಾಜಕೀಯ ಹೇಳಿಕೆ ನೀಡುವುದರಲ್ಲಿ ತೊಡಗುತ್ತಾರೆಯೇನೊ? ಆದರೆ ಯುವಜನತೆ ನಮ್ಮನ್ನು ನೋಡುತ್ತಿರುತ್ತಾರೆ, ಅವರು ನಮ್ಮಿಂದ ಸ್ಪೂರ್ತಿ ಪಡೆಯಬೇಕಾದರೆ ನಾವು ಆದರ್ಶವಾಗಿರಬೇಕು ಎಂದರು.

ಟೀಕೆಗಳು ಮಾಡುವುದು ಅವರ ಮನೋಭಾವವನ್ನು ತೋರಿಸುತ್ತದೆ. ಮಹಿಳೆಯ ಬಗ್ಗೆ ಅವರು ಎಷ್ಟು ಗೌರವ ತೋರಿಸುತ್ತಾರೆ ಎಂದು ಜನರಿಗೆ ಗೊತ್ತಾಗುತ್ತದೆ. ಅವರು ನನ್ನೊಬ್ಬಳ ಬಗ್ಗೆ ಮಾತನಾಡುತ್ತಿಲ್ಲ, ಎಲ್ಲಾ ಮಹಿಳೆಯರನ್ನು ನಾನು ಪ್ರತಿನಿಧಿಸುತ್ತಿದ್ದೇನೆ. ಮಂಡ್ಯದ ಅಂಬರೀಷ್ ಅಭಿಮಾನಿಗಳು ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಬಿಜೆಪಿಯ ಬೆಂಬಲದ ಬಗ್ಗೆ ಕೇಳಿದಾಗ, ನಾನು ಬಿಜೆಪಿ ನಾಯಕರನ್ನು ಹೋಗಿ ಕೇಳಿಲ್ಲ, ಆದರೆ ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಮತ್ತು ಸುರೇಶ್ ಕುಮಾರ್ ರಂತವರು ನನಗೆ ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ನಿಂದ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದೇನೆ, ಅದರ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸುಮಲತಾ ಹೇಳಿದರು.

Comments are closed.