ಕರ್ನಾಟಕ

ಸ್ಪೀಕರ್ ಯಿಂದ ಉಮೇಶ್ ಜಾದವ್‍ ಸೇರಿ ನಾಲ್ವರು ಶಾಸಕರಿಗೆ ನೋಟಿಸ್

Pinterest LinkedIn Tumblr


ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿರುವ ಶಾಸಕ ಉಮೇಶ್ ಜಾದವ್‍ಗೆ ಸ್ಪೀಕರ್ ರಮೇಶ್ ಕುಮಾರ್ ಅವರು ನೋಟಿಸ್ ಜಾರಿ ಮಾಡಿದ್ದಾರೆ.

ಕೇವಲ ಉಮೇಶ್ ಜಾದವ್ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಮನವಿ ಮಾಡಿದ್ದ ಇತರೇ ಮೂವರಿಗೂ ಸ್ಪೀಕರ್ ನೋಟಿಸ್ ನೀಡಿದ್ದಾರೆ. ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಹಳ್ಳಿಗೆ ನೋಟಿಸ್ ಕಳುಹಿಸಲಾಗಿದೆ.

ಸದ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಉಮೇಶ್ ಜಾದವ್ ಅವರ ರಾಜೀನಾಮೆಯನ್ನು ಸ್ವೀಕರ್ ಇನ್ನು ಅಂಗೀಕರಿಸಿಲ್ಲ. ಆದರೆ ಈಗಾಗಲೇ ಜಾದವ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದ ಕಾರಣ ಮಾರ್ಚ್ 12 ರಂದು ತಮ್ಮ ಮುಂದೇ ಹಾಜರಾಗುವಂತೆ ರಮೇಶ್ ಕುಮಾರ್ ಅವರು ತಮ್ಮ ನೋಟಿಸ್‍ನಲ್ಲಿ ಸೂಚನೆ ನೀಡಿದ್ದಾರೆ.

ಜಾದವ್ ರಾಜೀನಾಮೆ ನೀಡಿದ್ದರು, ಅದಕ್ಕೂ ಮುನ್ನ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಎಂದು ತಿಳಿಸಿ ಸಿದ್ದರಾಮಯ್ಯ ಅವರು ಸ್ಪೀಕರ್ ಅವರಿಗೆ ದೂರು ನೀಡಿದ್ದರು. ಅಲ್ಲದೇ ಜಾದವ್ ನೀಡಿದ್ದ ರಾಜೀನಾಮೆ ಅಂಗೀಕಾರ ಮಾಡುವ ಮುನ್ನವೇ ಉಮೇಶ್ ಜಾದವ್ ಬಿಜೆಪಿ ಸಮಾವೇಶದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ವಿವರಣೆ ಪಡೆಯಲು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಎಲ್ಲಾ ಶಾಸಕರು ಕೂಡ ಸ್ಪೀಕರ್ ನೋಟಿಸ್ ನೀಡಿರುವುದರಿಂದ ಹಾಜರಾಗಿ ವಿವರಣೆ ನೀಡುವ ಸಂಭವವಿದ್ದು, ಆ ಬಳಿಕ ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

Comments are closed.