ಕರ್ನಾಟಕ

ಶಾಸಕರ​ ಗಲಾಟೆ ರಹಸ್ಯ ಬಯಲು; ಕಾಂಗ್ರೆಸ್​ ನಾಯಕರಿಗೆ ಟೆನ್ಷನ್​

Pinterest LinkedIn Tumblr


ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಕೈ ಶಾಸಕರ ಹೊಡೆದಾಟ ಪ್ರಕರಣದಿಂದ ಕಾಂಗ್ರೆಸ್​ ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೆ ಒಳಗಾಯಿತು. ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಗಣೇಶ್​ನನ್ನು ಬಂಧಿಸುವ ಮೂಲಕ ಈ ಗಲಾಟೆಯನ್ನು ತಣ್ಣಾಗಾಗಿಸಲು ಸರ್ಕಾರ ಮುಂದಾಗಿತ್ತು. ಈ ಗಲಾಟೆಯ ವಿಡಿಯೋ ಈಗ ಬಿಡುಗಡೆಯಾಗುವ ಮೂಲಕ ಕೈ ನಾಯಕರಲ್ಲಿ ಆತಂಕ ಮನೆ ಮಾಡಿದೆ. ಕಾರಣ ಇವರು ಜಗಳವಾಗಿರುವುದು ಒಂದು ಹೆಣ್ಣುಮಗಳ ವಿಚಾರಕ್ಕೆ ಎನ್ನಲಾಗಿದೆ.

ಈಗಲ್ಟನ್​ ರೆಸಾರ್ಟ್​ನಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದ ಪ್ರಕರಣದ ವಿಡಿಯೋ ಕುರಿತು ಕಾಂಗ್ರೆಸ್​ ನಾಯಕರು ಕಟ್ಟೆಚ್ಚರ ವಹಿಸಿದ್ದರು ಎನ್ನಲಾಗಿದೆ. ಈ ವಿಡಿಯೋ ಸಿಕ್ಕಿದರೆ ಈ ಇಬ್ಬರು ಶಾಸಕರ ನಡುವೆ ಯಾವ ವಿಚಾರಕ್ಕೆ ಗಲಾಟೆ ಆಯಿತು ಎಂಬ ಪುರಾವೆ ಸಿಗಲಿದೆ. ಇದರಿಂದ ಕಾಂಗ್ರೆಸ್​ ಮುಜಗರ ಅನುಭವಿಸಲಿದೆ. ಈ ಹಿನ್ನೆಲೆ ಈ ವಿಡಿಯೋ ಬಿಡುಗಡೆಯಾಗದಂತೆ ಕಟ್ಟೆಚ್ಚರ ವಹಿಸಿದ್ದರು ಎನ್ನಲಾಗಿದೆ. ಆದರೆ, ಈ ವಿಡಿಯೋ ಬಿಡುಗಡೆಯಾಗುವ ಮೂಲಕ ಕಾಂಗ್ರೆಸ್​ ನಾಯಕರಲ್ಲಿ ಆತಂಕ ಮೂಡಿದೆ. ಅಲ್ಲದೆ ಇದು ಲೋಕಸಭಾ ಚುನಾವಣೆ ಮೇಲೆ ಕೂಡ ಪರಿಣಾಮ ಬೀರಲಿದೆ ಎನ್ನವ ಭಯ ಶುರುವಾಗಿದೆ.

ಅಂತಹದ್ದೇನಿದೆ ವಿಡಿಯೋದಲ್ಲಿ?

ಶಾಸಕ ಆನಂದ್​ ಸಿಂಗ್​-ಗಣೇಶ್​ ಮಧ್ಯೆ ಜಗಳ ನಡೆಯಿತು ಎಂದು ಮಾತ್ರ ಯಾವ ವಿಷಯಕ್ಕೆ ಗೊತ್ತಿಲ್ಲ ಎನ್ನುತ್ತಿದ್ದ ನಾಯಕರು ಯಾಕೆ ಈ ರೀತಿ ಹೇಳಿಕೆ ನೀಡಿದ್ದರು ಎಂಬ ಸತ್ಯ ಬಯಲಾಗಿದೆ. ಈ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಒಂದು ಹೆಣ್ಣಿಗಾಗಿ ಎಂಬುದಾಗಿದೆ ಎನ್ನಲಾಗಿದೆ.

ಬಿಡುಗಡೆಯಾಗಿರುವ 5 ಸೆಕೆಂಡ್​ಗಳ ವಿಡಿಯೋದಲ್ಲಿ ಶಾಸಕ ಆನಂದ್​ ಸಿಂಗ್​, ಶಾಸಕ ಗಣೇಶ್​ರ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಇತ್ತ ಗಣೇಶ್ ಸಹ ಇದು ತಪ್ಪು. ಅಣ್ಣಾ ಬೇಡಣ್ಣಾ, ಅಂತಾ ಹೇಳುತ್ತಿದ್ದಾರೆ. ಆದರೂ ಆನಂದ್​ ಸಿಂಗ್ ನನಗೆ ಹೊಡಿತೀಯಾ ಅಂತಾ ಅವಾಜ್​ ಹಾಕಿದ್ದಾರೆ. . ಇವರಿಬ್ಬರ ಜಗಳದ ಮಧ್ಯೆ ಅವಳು ಅನ್ನೋ ಪದ ಬಂದು ಹೋಗುತ್ತದೆ. ಹೀಗಾಗಿ ಇವರಿಬ್ಬರ ಗಲಾಟೆಗೆ “ಆಕೆ” ಕಾರಣ ಎನ್ನಲಾಗಿದೆ.

ಆನಂದ್​ ಸಿಂಗ್​ ಹಾಗೂ ಗಣೇಶ್ ಮಧ್ಯೆ ಯಾವುದೇ ದ್ವೇಷ ಇರಲಿಲ್ಲ. ಮೊದಲು ರೆಸಾರ್ಟ್​​ ರೂಮ್​ನಲ್ಲಿ ಭೀಮಾನಾಯ್ಕ್​ ಹಾಗೂ ಆನಂದ್​ ಸಿಂಗ್​ ಮಧ್ಯೆ ಗಲಾಟೆ ನಡೆಯುತ್ತಿತ್ತಂತೆ. ಈ ವೇಳೆ ಜಗಳ ಬಿಡಿಸಲು ಗಣೇಶ್​ ಹೋದಾಗ ಜಗಳ ತಾರಕಕ್ಕೇರಿದೆ ಎನ್ನಲಾಗಿದೆ.

ನಾನು ಹಲ್ಲೆ ಮಾಡಿಲ್ಲ ಎಂದು ಗಲಾಟೆಯಾದ ಮರುದಿನದಿಂದಲೂ ಹೇಳಿಕೆ ನೀಡುತ್ತಿದ್ದ ಗಣೇಶ್​ ಅವರ ಮಾತಿಗೆ ಈ ವಿಡಿಯೋ ಸಾಕ್ಷಿಯಾಗಿದೆ ಎನ್ನಲಾಗಿದೆ.

Comments are closed.