ಕರ್ನಾಟಕ

ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಹಾಡಹಗಲೇ ಹೊಡದಾಡಿಕೊಂಡ ಎರಡು ಕುಟುಂಬಗಳು!

Pinterest LinkedIn Tumblr


ಯಾದಗಿರಿ: ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಎರಡು ಕುಟುಂಬಗಳು ಹಾಡಹಗಲೇ ಸಿನಿಮೀಯ ರೀತಿ ಹೊಡೆದಾಡಿಕೊಂಡ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ನಡೆದಿದ್ದು, ಗಲಾಟೆಯಲ್ಲಿ 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಡಗೇರಾ ತಾಲೂಕಿನ ಹೊರಟೂರು ಗ್ರಾಮದ ಹೊನಗುಡಿ ಕುಟುಂದ ಮರಿಯಪ್ಪ, ಯಲ್ಲಪ್ಪ, ದೇವಪ್ಪ, ತಿಪ್ಪಣ್ಣ ಗಂಭೀರವಾಗಿ ಗಾಯಗೊಂಡವರು. ಹಲ್ಲೆ ಮಾಡಿದ ಚಂದಪ್ಪ ಪೂಜಾರಿ ಹಾಗೂ ಹನಮಂತ ಪೂಜಾರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆಗಿದ್ದೇನು?:
ಹೊರಟೂರು ಗ್ರಾಮದ ಪೂಜಾರಿ ಹಾಗೂ ಹೊನಗುಡಿ ಕುಟುಂಬದ ಮಧ್ಯೆ ಹಿಂದಿನಿಂದಲೂ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಗುತ್ತಿತ್ತು. ಆದರೆ ಇಂದು ಮಾಳಪ್ಪ ಹೊನಗುಡಿ ಎಂಬ ಯುವಕ ಪೂಜಾರಿಯವರ ಮನೆಯ ಮುಂದೆ ಕುಳಿತು ಹುಡುಗಿಯರನ್ನು ಚುಡಾಯಿಸಿದ್ದಾನೆ. ಇದರಿಂದ ಕೋಪಗೊಂಡ ಪೂಜಾರಿ ಕುಟುಂಬಸ್ಥರು ಮಾಳಪ್ಪನಿಗೆ ಥಳಿಸಿದ್ದಾರೆ. ಈ ವೇಳೆ ಎರಡೂ ಕುಟುಂಬಗಳ ಮಧ್ಯೆ ಗಲಾಟೆಯಾಗಿದ್ದು, ಸ್ಥಳೀಯರು ಬಂದು ಜಗಳ ಬಿಡಿಸಿದ್ದಾರೆ.

ಜಗಳವಾದ ಬಳಿಕ ಸುಮಾರು 4 ಗಂಟೆಗೆ ಹೊನಗುಡಿ ಕುಟುಂಬಸ್ಥರು ಹಾಲಗೇರಾದ ಯಲ್ಲಮ್ಮ ದೇವಿಯ ಜಾತ್ರೆಗೆ ಹೋಗಿದ್ದರು. ಇದನ್ನು ತಿಳಿದ ಚಂದಪ್ಪ ಪೂಜಾರಿ ಹಾಗೂ ಅವರ ಕುಟುಂಬದವರು ದೊಣ್ಣೆ ಹಿಡಿದುಕೊಂಡು ಹಾಲಗೇರಾದ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ದೇವಸ್ಥಾನದ ಮುಂದೆ ಸಿಕ್ಕ ಪೂಜಾರಿ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ವಡಗೇರಾ ಠಾಣೆ ಪೊಲೀಸರು, ಚಂದಪ್ಪ ಪೂಜಾರಿ ಹಾಗೂ ಹನಮಂತ ಪೂಜಾರಿಯನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಸಂಬಂಧ ವಡಗೇರಾ ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆ ಆರಂಭಿಸಿದ್ದಾರೆ.

Comments are closed.