ಕರ್ನಾಟಕ

ನನ್ನನ್ನೂ ಸೇನೆಗೆ ಸೇರಿಸಿಕೊಳ್ಳಿ, ಉಗ್ರರ ಚೆಂಡಾಡುತ್ತೇನೆ: ಯೋಧ ಗುರುವಿನ ಪತ್ನಿ ಕಲಾವತಿ

Pinterest LinkedIn Tumblr

ಮಂಡ್ಯ: ಪುಲ್ವಾಮಾ ಉಗ್ರಗಾಮಿ ದಾಳಿಯಲ್ಲಿ ಹುತಾತ್ಮರಾದ ಜಿಲ್ಲೆಯ ಗುಡಿಗೆರೆ ಗ್ರಾಮದ ಯೋಧ ಗುರುವಿನ ಪತ್ನಿ ಕಲಾವತಿ ನಾಲ್ಕು ತಿಂಗಳ ಗರ್ಭವತಿ.

ಈ ವಿಷಯ ನಿನ್ನೆ ಗುರುವಿನ ತಾಯಿ ಚಿಕ್ಕೋಳಮ್ಮ ಅವರಿಂದಲೇ ತಿಳಿದುಬಂತು. ಹುತಾತ್ಮ ಗುರುವಿನ ಅಂತ್ಯಸಂಸ್ಕಾರಕ್ಕೆ ಮುನ್ನ ಮಾಧ್ಯಮ ಪ್ರತಿನಿಧಿಗಳು ಅವರನ್ನು ಮಾತನಾಡಿಸಿದ ಸಂದರ್ಭದಲ್ಲಿ, ನನ್ನ ಮಗ ಕರ್ತವ್ಯದಲ್ಲಿರುವಾಗ ಮೃತಪಟ್ಟಿದ್ದರೆ ನಾನಿಂದು ಇಷ್ಟು ಅಳುತ್ತಿರಲಿಲ್ಲ. ಊರಿನಿಂದ ರಜೆ ಮುಗಿಸಿಕೊಂಡು ಹೋಗುವಾಗಲೇ ಪಾಪಿಗಳು ಕೊಂದು ಹಾಕಿದ್ದಾರೆ. ಆತ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾನೆ, ಆ ಬಗ್ಗೆ ನನಗೆ ಹೆಮ್ಮೆಯಿದೆ ಎಂದರು.

ನನ್ನ ಸೊಸೆಗೆ ಮಗ ಹುಟ್ಟಿದರೆ ಅವನನ್ನು ಕೂಡ ಸೇನೆಗೆ ಕಳುಹಿಸುತ್ತೇನೆ, ನನ್ನ ಇನ್ನೊಬ್ಬ ಕಿರಿಯ ಮಗನನ್ನು ಕೂಡ ದೇಶಸೇವೆಗೆ ಕಳುಹಿಸಲು ನಾನು ಉತ್ಸುಕಳಾಗಿದ್ದೇನೆ ಎಂದು ಚಿಕ್ಕೋಳಮ್ಮ ದುಃಖದ ನಡುವೆಯೂ ಹೇಳಿದ್ದು ಎಂಥವರ ಮನಮಿಡಿಯುವಂತಿತ್ತು.

ಇನ್ನೊಂದೆಡೆ ಇಂದು ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಲಾವತಿ, ನನ್ನನ್ನೂ ಸೇನೆಗೆ ಸೇರಿಸಿಕೊಳ್ಳಿ. ಉಗ್ರರ ಚೆಂಡಾಡುತ್ತೇನೆ. ನನ್ನ ಪತಿ ಅರ್ಧಕ್ಕೆ ಬಿಟ್ಟು ಹೋಗಿರುವ ಕೆಲಸವನ್ನು ಪೂರೈಸುತ್ತೇನೆ. ನನ್ನ ಪತಿಯ ಆಸೆಗಳನ್ನು ಈಡೇರಿಸುತ್ತೇನೆ.

ಗುರು ಅವರ ಪತ್ನಿ ಅನ್ನೋದಕ್ಕೆ ನಿಜಕ್ಕೂ ಹೆಮ್ಮೆ ಎನಿಸಿದೆ. ದೇಶದ ಸೇವೆ ಮಾಡುವಾಗ ತನ್ನ ಪತಿ ದೇವರನ್ನು ಆ ದೇವರು ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಅವರ ಈಗ ಅರ್ಧ ಕೆಲಸ ಮಾಡಿದ್ದಾರೆ. ನಾನು ಉಳಿದ ಕೆಲಸವನ್ನು ಮಾಡಲು ಸಜ್ಜಾಗಿದ್ದೇನೆ. ಸೇನೆಗೆ ನಾನೂ ಸೇರಬೇಕು ಎನಿಸಿದೆ ಎಂದರು.

ಬಹುತೇಕ ಪ್ರತಿದಿನವೂ ತನ್ನ ಪತಿ ಕರೆ ಮಾಡುತ್ತಿದ್ದರು. ಆದರೆ ದಾಳಿ ನಡೆದ ದಿನ ಸ್ವಲ್ಪ ಬ್ಯುಸಿಯಾಗಿದ್ದರು. ಹಾಗಾಗಿ ನಂತರ ಕರೆ ಮಾಡುವುದಾಗಿ ಹೇಳಿದ್ದರು. ಆದರೆ ಈ ಕರೆ ಬರಲೇ ಇಲ್ಲ. ನಾನು ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದರು. ಇನ್ನೂ 10 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಗುರು ಸದಾ ನನ್ನೊಂದಿಗೆ ಚರ್ಚಿಸುತ್ತಿದ್ದರು ಎಂದು ಕಲಾವತಿ ತಿಳಿಸಿದರು.

Comments are closed.