ಕರ್ನಾಟಕ

ಉಗ್ರರ ದಾಳಿಗೆ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು

Pinterest LinkedIn Tumblr


ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ರಾಜ್ಯದ ಯೋಧರೊಬ್ಬರು ವೀರಮರಣವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಗುಡಿಗೆರೆ ಕಾಲೋನಿಯ ಗುರು.ಎಚ್. (33) ಹುತಾತ್ಮ ಯೋಧ.

ಗುರು ಅವರು ಸಿಆರ್‌ಪಿಎಫ್‌ ನ 82ನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದು, 2011ರಲ್ಲಿ ಸಿಆರ್‌ಪಿಎಫ್‌ ಗೆ ಸೇರ್ಪಡೆಯಾಗಿದ್ದರು. ಜಾರ್ಖಂಡ್‍ ನಲ್ಲಿ 94ನೇ ಬೆಟಾಲಿಯನ್ ನಲ್ಲಿದ್ದ ಗುರು ಬಳಿಕ ಶ್ರೀನಗರದಲ್ಲಿ ಸೇವೆ ಸಲ್ಲಿಸಲು ನಿಯೋಜನೆಗೊಂಡಿದ್ದರು.

ಹುತಾತ್ಮ ಯೋಧ ಗುರು ಯಾರು?: ಗುಡಿಗೆರೆ ಕಾಲೋನಿಯ ಹೊನ್ನಯ್ಯ ಹಾಗೂ ಚಿಕ್ಕೋಳಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯ ಪುತ್ರ ಗುರು. ಇವರಿಗೆ ಇಬ್ಬರು ತಮ್ಮಂದಿರಿದ್ದು ಮಧು ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದು, ಆನಂದ್ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಗುರು ಅವರ ಅಪ್ಪ ಅಮ್ಮ ಕೆಎಂ ದೊಡ್ಡಿಯಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ದುಡಿಯುತ್ತಿದ್ದರು.

ಒಂದು ವರ್ಷ ಹಿಂದೆ ಗೃಹ ಪ್ರವೇಶ ಮಾಡಿಕೊಂಡಿದ್ದ ಗುರು ಅವರಿಗೆ 10 ತಿಂಗಳ ಹಿಂದೆ ಮದುವೆಯಾಗಿತ್ತು. ಸ್ವಂತ ಮಾವನ ಮಗಳಾದ, ಹಲಗೂರು ಬಳಿಯ ಸಾಸಲಾಪುರ ಗ್ರಾಮದವರಾದ ಕಲಾವತಿಯನ್ನು ವಿವಾಹವಾಗಿದ್ದರು. 15 ದಿನದ ಹಿಂದೆ ರಜೆಗೆಂದು ಬಂದಿದ್ದ ಗುರು ಅವರು ಫೆಬ್ರವರಿ 10ರಂದು ಗುಡಿಗೆರೆ ಕಾಲೋನಿಯಿಂದ ರಜೆ ಮುಗಿಸಿಕೊಂಡು ಹೊರಟಿದ್ದರು. ಹೀಗೆ ಹೊರಟಿದ್ದ ಗುರು ಗುರುವಾರವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಕರ್ತವ್ಯಕ್ಕೆ ವಾಪಸ್ ಬರುತ್ತಿದ್ದಂತೆಯೇ ಮಾರಣಹೋಮದಲ್ಲಿ ಸಾವನ್ನಪ್ಪಿದ್ದು ವಿಧಿ ವಿಪರ್ಯಾಸ. ಗುರು ಸಾವಿನ ಸುದ್ದಿ ಕೇಳಿ ಗುಡಿಗೆರೆ ಕಾಲೋನಿಯ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇಲ್ಲೇ ಬಂದ್ಬಿಡು ಅಂದಿದ್ದರಂತೆ ತಾಯಿ!: ಮೊನ್ನೆ ಫೆಬ್ರವರಿ 10ರಂದು ರಜೆ ಮುಗಿಸಿ ವಾಪಸ್ ತೆರಳುವ ಮುನ್ನ ಗುರು ತಾಯಿ ಚಿಕ್ಕೋಳಮ್ಮ, ಏನಕ್ಕೆ ಹೋಗ್ತೀಯಾ..? ಈ ಕೆಲಸ ಬಿಟ್ಟು ಬಿಡು, ಇಲ್ಲೇ ಇರು ಎಂದು ಗುರುವಿಗೆ ಕಿವಿ ಮಾತು ಹೇಳಿದ್ದರಂತೆ. ಆದರೆ ಇದಕ್ಕೆ ಗುರು, ನಾನು ದೇಶ ಸೇವೆ ಮಾಡಬೇಕು. ನನ್ನಂತ ತುಂಬಾ ಜನರು ಯೋಧರಿದ್ದಾರೆ. ನಾವು ಕೋಟ್ಯಂತರ ಜನರ ರಕ್ಷಣೆ ಮಾಡಬೇಕು. ನಾನು ಕೆಲಸ ಬಿಡಲ್ಲ ಎಂದು ಹೇಳಿದ್ದರಂತೆ. ಪುತ್ರನ ಸಾವಿನ ವಿಷಯ ತಿಳಿದು ತಂದೆ ಹೊನ್ನಯ್ಯ ಅಸ್ವಸ್ಥರಾಗಿದ್ದಾರೆ. ಸದ್ಯ ಗುರು ಪತ್ನಿ ಕಲಾವತಿ ತವರು ಮನೆಯಲ್ಲಿದ್ದು, ಸಂಬಂಧಿಕರ ಜೊತೆ ಗುಡಿಗೆರೆ ಕಾಲೋನಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ವಿವರ: ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದ. ಈ ದಾಳಿಯಲ್ಲಿ ಇದುವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೇನಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಶುಕ್ರವಾರ ಬೆಳಗ್ಗೆ ಕೇಂದ್ರ ಸಚಿವ ಸಂಪುಟದ ತುರ್ತು ಸಭೆ ನಡೆಯಲಿದೆ. ಇದರ ಬೆನ್ನಲ್ಲೇ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪುಲ್ವಾಮಾಗೆ ಭೇಟಿ ನೀಡಲಿದ್ದಾರೆ.

Comments are closed.