
ಗದಗ: ಆ ಅವಳಿ ನಗರದಲ್ಲಿ ಈಗ ನೀರಿಗೆ ಬರವಿಲ್ಲ. ಆದರೆ ನಲ್ಲಿಯಲ್ಲಿ ಬಂದ ನೀರು ನೋಡಿ ಜನರು ಭಯ ಪಡುವಂತಾಗಿದೆ. ಕುಡಿಯೋದು ಇರಲಿ, ಈ ನೀರಲ್ಲಿ ಜನರು ಸ್ನಾನ ಮಾಡಲು ಹೆದರುತ್ತಿದ್ದಾರೆ. ಇದೇ ನೀರಿನಲ್ಲಿ ಸ್ನಾನ ಮಾಡಿದರೆ ಅಲರ್ಜಿ ಗ್ಯಾರಂಜಿ. ಜನರಿಗೆ ಶುದ್ಧ ಕುಡಿಯುವ ನೀರು ಕೊಟ್ಟು ನೆಮ್ಮದಿಗೆ ಕಾರಣವಾಗಬೇಕಿದ್ದ ನಗರಸಭೆ ಇಲ್ಲಿ ಕೈಚೆಲ್ಲಿ ಕುಳಿತಿದೆ.
ಇಂಥ ಕಲುಷಿತ ನೀರು ಪೂರೈಕೆ ಆಗಿದ್ದು, ಗದಗ ನಗರದ ವೀರನಾರಾಯಣ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ. ನಗರದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ನಗರಸಭೆ ವಾರದಲ್ಲಿ ಮೂರರಿಂಧ ನಾಲ್ಕು ಬಾರಿ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತದೆ. ಆದರೆ ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರು ಕಲುಷಿತವಾಗಿ ಬರ್ತಿವೆ. ಈ ಬಗ್ಗೆ ಈಗಾಗಲೇ ಸ್ಥಳೀಯ ಮಹಿಳೆಯರು, ನಿವಾಸಿಗಳು ನಗರಸಭೆಗೆ ಮನವಿ ಕೂಡ ನೀಡಿದ್ದಾರೆ. ಆದರೆ ನಗರಸಭೆ ಆಡಳಿತ ಕ್ಯಾರೇ ಅಂತಿಲ್ಲ. ಈವರೆಗೂ ನಗರಸಭೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಇಲ್ಲಿನ ನಿವಾಸಿಗಳ ಪಾಲಿಗೆ ಕುಡಿಯಲು ಕಲ್ಮಷ ನೀರೇ ಗತಿಯಾಗಿದೆ. ಈ ನೀರನ್ನು ಕುಡಿಯೋದು ಇರಲಿ ಸ್ನಾನ ಮಾಡಿದ್ರೆ ಅಲರ್ಜಿಯಿಂದ ಮೈಯಲ್ಲಿ ಗುಳ್ಳೆ, ತುರಿಕೆ, ಕೆಮ್ಮು, ಜ್ವರ ಹೀಗೆ ಹಲವಾರು ರೋಗಗಳು ಬರುತ್ತಿವೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಇಲ್ಲಿನ ಹಾಳದಿಬ್ಬ ನಿವಾಸಿಗಳು ನೀರಿಗಾಗಿ ಪಡಬಾರದ ಕಷ್ಟ ಪಡುವಂತಾಗಿದೆ.
ಇನ್ನು ಹಲವಾರು ಬಾರಿ ನಗರಸಭೆಗೆ ಮಾಹಿತಿ ನಿಡಿದರೂ ಸಹ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇತ್ತ ಕಡೆ ಗಮನ ಹರಿಸುತ್ತಿಲ್ಲ ಮತ್ತು ನಮಗೆ ಸರಿಯಾಗಿ ನೀರು ಸಹ ಬಿಡುತ್ತಿಲ್ಲ.ಈ ಅಶುದ್ಧ ನೀರಿನಿಂದ ಕಾಯಿಲೆಯ ಭಯ ಸ್ಥಳೀಯರಿಗೆ ಆವರಿಸಿದೆ. ಹೀಗಾಗಿ ಸ್ಥಳೀಯರು ನಗಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ನಗರಸಭೆಯ ಅಧಿಕಾರಿಗಳು ಎಚ್ಚೆತ್ತು ನಮ್ಮ ಸಮಸ್ಯೆಯನ್ನು ಬಗೆಹರಿಸಿ, ಇಲ್ಲವಾದಲ್ಲಿ ನಗರಸಭೆ ಹಾಗೂ ಜಿಲ್ಲಾಡಳಿತ ಭವನದ ಎದರು ಉಗ್ರವಾದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈಗಲಾದರೂ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕು
Comments are closed.