ಕರ್ನಾಟಕ

ಮೋದಿ ಹೊಗಳಿದ ಎಸ್​.ಎಂ. ಕೃಷ್ಣ; ನಿಮ್ಮನ್ನು ಗೇಲಿ ಮಾಡಿದ್ದು ಯಾರು ಗೊತ್ತಾ? ಎಂದ ಕಾಂಗ್ರೆಸ್

Pinterest LinkedIn Tumblr


ಬೆಂಗಳೂರು: ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಧಾನಿ ಮೋದಿಯಂತಹ ನಾಯಕರ ಅಗತ್ಯವಿದೆ. ರಾಹುಲ್ ಗಾಂಧಿ ಅಂದಿನ ಪ್ರಧಾನಿ ಮನಮೋಹನ್​ ಸಿಂಗ್​ಗಿಂತ ಹೆಚ್ಚಿನ ಅಧಿಕಾರ ಹೊಂದಿದ್ದರು. ಅವರಿಂದಲೇ ನಾನು ಕಾಂಗ್ರೆಸ್​ ಬಿಟ್ಟು ಹೊರಬಂದೆ ಎಂದು ನಿನ್ನೆ ಮಂಡ್ಯದಲ್ಲಿ ಕೇಂದ್ರದ ಮಾಜಿ ಸಚಿವ ಎಸ್​.ಎಂ. ಕೃಷ್ಣ ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಆ ಹೇಳಿಕೆಗೆ ಟ್ವಿಟ್ಟರ್​ನಲ್ಲಿ ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್​, ಕಾಂಗ್ರೆಸ್​ನಿಂದ ಎಲ್ಲಾ ಅಧಿಕಾರವನ್ನೂ ಅನುಭವಿಸಿ ‘ಕೈ’ಗೆ ಕೈಕೊಟ್ಟ ಎಸ್​.ಎಂ. ಕೃಷ್ಣ ಅವರೇ… ವೈಫಲ್ಯದ ನಾಯಕರಾಗಿರುವ ಭ್ರಷ್ಟಾಚಾರಿ ಮೋದಿಯನ್ನು ಹೊಗಳಿ, ಭರವಸೆಯ ಭವಿಷ್ಯದ ನಾಯಕ ರಾಹುಲ್ ಗಾಂಧಿಯನ್ನು ತೆಗಳುತ್ತಿರುವುದು ವಿಷಾದನೀಯ. ಬಿಜೆಪಿಯ ಪ್ರಭಾವದಿಂದ ನಿಮ್ಮ ಮಾತುಗಳು ಅಸತ್ಯ, ಅಸಂಬದ್ಧ ಮತ್ತು ನಕಾರಾತ್ಮಕವಾಗಿವೆ. ಈ ಹಿಂದೆ ಇದೇ ಮೋದಿ ನಿಮ್ಮನ್ನು ಗೇಲಿ ಮಾಡಿದ್ದನ್ನು ನೀವು ಮರೆತಿದ್ದೀರಿ ಎಂದು ಅನಿಸುತ್ತದೆ. ನಿಮ್ಮ ಬಗ್ಗೆ ಮೋದಿಯವರು ಆಡಿರುವ ನುಡಿಮುತ್ತುಗಳು ಇಲ್ಲವೆ ನೋಡಿ ಎಂದು ವಿಡಿಯೋವೊಂದನ್ನು ಶೇರ್​ ಮಾಡುವ ಮೂಲಕ ಎಸ್​.ಎಂ. ಕೃಷ್ಣ ಅವರನ್ನು ಟ್ವಿಟ್ಟರ್​ನಲ್ಲಿ ಕಾಂಗ್ರೆಸ್​ ನಾಯಕರು ಹಾಸ್ಯ ಮಾಡಿದ್ದಾರೆ.

ಎಲ್ಲಾ ಅಧಿಕಾರ ಅನುಭವಿಸಿ ‘ಕೈ’ಗೆ ಕೈಕೊಟ್ಟ ಎಸ್ಎಂಕೃಷ್ಣ ಅವರೇ,
ವೈಫಲ್ಯದ ನಾಯಕ ಭ್ರಷ್ಟಾಚಾರಿ ಮೋದಿಯನ್ನು ಹೊಗಳಿ, ಭರವಸೆಯ ಭವಿಷ್ಯದ ನಾಯಕ ರಾಹುಲ್ ಗಾಂಧಿಯನ್ನು ತೆಗಳುತ್ತಿರುವುದು ವಿಷಾದನೀಯ.

ಬಿಜೆಪಿಯ ಪ್ರಭಾವದಿಂದ ನಿಮ್ಮಮಾತುಗಳು ಅಸತ್ಯ, ಅಸಂಬದ್ಧ ಮತ್ತು ನಕಾರಾತ್ಮಕವಾಗಿವೆ.

ಎಸ್​.ಎಂ. ಕೃಷ್ಣ ಹೇಳಿದ್ದೇನು?:

ದೇಶದಲ್ಲಿ ಭ್ರಷ್ಟಾಚಾರಮುಕ್ತ, ಪಾರದರ್ಶಕ ಆಡಳಿತ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಂತಹ ನಾಯಕರ ಅಗತ್ಯವಿದೆ. ಮೋದಿಯವರು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ಗಡಿಭಾಗದಲ್ಲಿ ಶಾಂತಿ ಕಾಪಾಡುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ 5 ವರ್ಷಗಳಲ್ಲಿ ಮೋದಿಯವರು ಜನತೆಗೆ ನೀಡಿದ ಆಡಳಿತವನ್ನು ಸರಿಯಾಗಿ ಮನದಟ್ಟು ಮಾಡಲು ಪಕ್ಷದ ಕಾರ್ಯಕರ್ತರಿಗೆ ಇದು ಸರಿಯಾದ ಸಮಯ ಎಂದು ಮಂಡ್ಯದಲ್ಲಿ ಎಸ್​.ಎಂ. ಕೃಷ್ಣ ಹೇಳಿದ್ದರು.

ಇದೇವೇಳೆ, ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಕುರಿತಾಗಿಯೂ ಮಾತನಾಡಿದ್ದ ಅವರು,
ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಯಾವುದೇ ಅಧಿಕಾರವಿರಲಿಲ್ಲ. ಅದರಿಂದಾಗಿ 2ಜಿ, ಕಾಮನ್ ವೆಲ್ತ್, ಕಲ್ಲಿದ್ದಲು ಹಗರಣಗಳು ನಡೆದವು. ಮನಮೋಹನ್ ಸಿಂಗ್ ಅವರಿಗಿಂತರಾಹುಲ್ ಗಾಂಧಿ ಹೆಚ್ಚಿನ ಅಧಿಕಾರ ಹೊಂದಿದ್ದರು. ಇದರಿಂದಾಗಿ ಭ್ರಷ್ಟಾಚಾರ ನಡೆಯಿತು. ಸಂಪುಟದಲ್ಲಿ 80 ವರ್ಷಕ್ಕಿಂತ ಮೇಲಿನವರ ಅಗತ್ಯವಿಲ್ಲ ಎಂದು ರಾಹುಲ್ ಗಾಂಧಿ ನಿರ್ಧರಿಸಿದ್ದರಿಂದ ನಾನು ಸಂಪುಟದಿಂದ ಹೊರಬಂದೆ. ಪ್ರಧಾನಿಯಾಗಿ ಮನಮೋಹನ್ ಸಿಂಗ್ ಗಮನಕ್ಕೆ ಬಾರದೆಯೇ ಸರ್ಕಾರದಲ್ಲಿ ಹಲವು ನಿರ್ಧಾರಗಳನ್ನು ರಾಹುಲ್ ಗಾಂಧಿ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದರು.

Comments are closed.