ಕರ್ನಾಟಕ

ಶಾಸಕನಾದ ಮೇಲೆ ಮುಖ್ಯಮಂತ್ರಿಯಾಗುವ ಆಸೆ ಇರುತ್ತದೆ; ಕಾಂಗ್ರೆಸ್ ಸಚಿವ

Pinterest LinkedIn Tumblr


ದಾವಣಗೆರ: ಶಾಸಕರಾದ ಮೇಲೆ ಸಿಎಂ ಆಗಬೇಕೆಂಬ ಆಸೆ ಇರುತ್ತೆ. ನಮ್ಮ ಸಮುದಾಯದವರು ಸಿಎಂ ಆಗಬೇಕು. ನಮಗೂ ಆಸೆ ಇದೆ ಎಂದು ಮೈತ್ರಿ ಸರ್ಕಾರದ ಸಚಿವರೊಬ್ಬರು ತಮ್ಮ ಇಂಗಿತ ವ್ಯಕ್ತಪಡಿಸುವ ಮೂಲಕ ಹೊಸ ಬಾಂಬ್​ ಸಿಡಿಸಿದ್ಧಾರೆ.

ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಭಿನ್ನಾಭಿಪ್ರಾಯಗಳು ಎದ್ದಿದ್ದು, ಯಾವುದೂ ಸರಿಯಿಲ್ಲಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕಾಂಗ್ರೆಸ್​ನ ಕೆಲ ಶಾಸಕರು ಸಿದ್ದರಾಮಯ್ಯನವರೇ ನಮ್ಮ ಸಿಎಂ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ಇನ್ನೂ ಸಮ್ಮಿಶ್ರ ಸರ್ಕಾರದ ಸಿಎಂ ಆಗಿರುವ ಎಚ್​.ಡಿ.ಕುಮಾರಸ್ವಾಮಿ ‘ಕೈ’ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ಎಲ್ಲಾ ಬೆಳವಣಿಗೆಗೆಳ ನಡುವೆಯೇ ಕಾಂಗ್ರೆಸ್​ ಶಾಸಕ ಸತೀಶ್​ ಜಾರಕಿಹೊಳಿ ಸಿಎಂ ಆಗುವ ಹೊಸ ಇಂಗಿತ ವ್ಯಕ್ತಪಡಿಸಿರುವುದು ಮತ್ತಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ.

ಇಷ್ಟು ಸಾಲದೆಂಬಂತೆ ಸಿಎಂ ಸಿದ್ದರಾಮಯ್ಯ ಆಪ್ತರು ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ‘ಸಿದ್ದರಾಮಯ್ಯನವರೇ ನಮ್ಮ ಸಿಎಂ’ ಎಂದು ಅಭಿಯಾನ ಶುರುಮಾಡಿದ್ದರು. ಇದಾದ ಬಳಿಕ ಮೊನ್ನೆಯಷ್ಟೇ ಸಚಿವ ಸತೀಶ್​ ಜಾರಕಿಹೊಳಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ‘ನಮ್ಮ ಸಿಎಂ ಸತೀಶ್​ ಜಾರಕಿಹೊಳಿ’ ಎಂಬ ಅಭಿಯಾನವನ್ನು ಆರಂಭಿಸಿದ್ದರು.

ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಮಾತನಾಡಿ ಸಿಎಂ ಆಗಬೇಕೆಂಬ ಇಂಗಿತವನ್ನು ನೇರವಾಗಿಯೇ ವ್ಯಕ್ತಪಡಿಸಿದ್ದಾರೆ. ನಮಗೂ ಸಿಎಂ ಆಗುವ ಆಸೆ ಇದೆ. ಇದು ಒಂದು ಪ್ರಯತ್ನವಷ್ಟೆ. ನಮ್ಮ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದರು.

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಯಾಕಾಗಬಾರದೂ ಎಂದು ಪ್ರಶ್ನಿಸಿದ್ದರು. ಜೊತೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಅರ್ಹ ವ್ಯಕ್ತಿ ಎಂದು ಸಿದ್ದರಾಮಯ್ಯ ಅವರು ಬಿಂಬಿಸಿದ್ದರು.

20 ಶಾಸಕರು ದೂರ ಇಲ್ಲ, ಎಲ್ಲರೂ ಒಟ್ಟಿಗಿದ್ದಾರೆ. ರಮೇಶ್ ಜಾರಕಿಹೊಳಿ ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ. ರಮೇಶ್ ಬಂದ ಮೇಲೆ ಚರ್ಚೆ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್​ನಲ್ಲೇ ಇರ್ತಾರೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತೆ. ಮೋಡ ಇದ್ದಾಗ ಗುಡುಗು ಸಾಮಾನ್ಯ. ಅದನ್ನು ಸರಿ ಪಡಿಸಿಕೊಂಡು ಹೋಗ್ತೀವಿ ಎಂದು ಹೇಳಿದರು.

ಗಣೇಶ್ ಹಲ್ಲೆ ಕೇಸ್​ ಕಾನೂನು ಪ್ರಕಾರ ನಡೆಯುತ್ತೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.

Comments are closed.