ಕರ್ನಾಟಕ

ಪ್ರಧಾನಿ ಹುದ್ದೆಯನ್ನೇ ಬಿಟ್ಟುಬಂದ ಕುಟುಂಬ ನಮ್ಮದು, ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಕೊಂಡು ಕೂರ್ತೀನಾ?: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಪ್ರಧಾನಿ ಸ್ಥಾನವನ್ನೇ ಲೆಕ್ಕಕ್ಕಿಡದೆ ಬಿಟ್ಟುಬಂದ ಕುಟುಂಬ ನಮ್ಮದು. ಅಂತದ್ದರಲ್ಲಿ ನಾನು ಸಿಎಂ ಸ್ಥಾನಕ್ಕೆ ಅಂಟಿಕೊಂಡು ಕೂರ್ತಿನಾ.? ಎಂದು ಹೇಳುವ ಮೂಲಕ ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಜನರಿಗೆ ಮೋಸ ಮಾಡಿ ನಾನು ಸಿಎಂ ಸ್ಥಾನದಲ್ಲಿ ಕೂರ್ತಿನಾ.? ಮತ್ತೆ ಅಧಿಕಾರಕ್ಕೆ ಅಂಟಿಕೊಂಡಿಲ್ಲ. ನಾನೇನಾದ್ರೂ ಇನ್ನೂ ಈ ಮೈತ್ರಿ ಸರ್ಕಾರದಲ್ಲಿ ಮುಂದುವರೆದಿದ್ದೇನೆ ಎಂದರೆ ಅದು ನಿಮಗಾಗಿ ಮಾತ್ರ ಎಂದು ಭಾವುಕರಾದರು.

ಕೆಲವರು ಪದೇ ಪದೇ ಚರ್ಚೆ ಮಾಡುತ್ತಾರೆ. ಎಷ್ಟು ದಿನ ಅಂತಾ ಸಹಿಸಿಕೊಳ್ಳಲು ಸಾಧ್ಯ. ಅಧಿಕಾರ ಏನು ಶಾಶ್ವತವೇ..? ಆ ಕಾರಣಕ್ಕಾಗಿಯೇ ಈ ರೀತಿ ಕೆಲಸ ಮಾಡೋದಕ್ಕಿಂತ ಅಧಿಕಾರ ಬಿಡಲು ಸಿದ್ದ ಎಂದಿದ್ದೇನೆ ಎಂದು ಹೇಳಿದರು.

ನಾನು ಸೂಕ್ಷ್ಮ ವ್ಯಕ್ತಿ. ಸಿಎಂ ಆದ ಬಳಿಕ ಪಕ್ಷದ ಕಚೇರಿಯಲ್ಲಿ ಮೊದಲ ದಿನ ಮಾತನಾಡುವಾಗ ಕಣ್ಣೀರು ಹಾಕಿದೆ. ಇವತ್ತಿಗೂ ನನ್ನ ಮನಸ್ಸಿನಲ್ಲಿ ನೋವಿದೆ. ಆ ನೋವನ್ನು ಸಹಿಸಿಕೊಂಡು ನಾಡಿನ ಜನರಿಗೆ ಒಳ್ಳೆಯದನ್ನು ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಕನಿಷ್ಠ 10 ಸ್ಥಾನ ಕೊಟ್ಟರೆ, ಈ ರಾಜ್ಯವನ್ನು ಅಭಿವೃದ್ದಿಯಲ್ಲಿ ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇನೆ. 900 ಕೋಟಿ ಭಿಕ್ಷೆ ಕೊಟ್ಟಿದ್ದಾರಲ್ಲ, ಕೇಂದ್ರ ಸರ್ಕಾರ ಬದಲಾದರೆ, ದೇವೇಗೌಡರ ನೇತೃತ್ವದಲ್ಲಿ ಹೆಚ್ಚಿನ ನೆರವು ರಾಜ್ಯಕ್ಕೆ ಬರಲಿದೆ ಎಂದರು.

ಕಾರ್ಯಕರ್ತರ ಮೇಲೆ ಬೇಸರ:

ಒಂದು ವರ್ಗಾವಣೆ ಕೆಲಸವೂ ಆಗುತ್ತಿಲ್ಲ ಎಂದು ಕಾರ್ಯಕರ್ತರು ವಾಟ್ಸಪ್ ಸಂದೇಶ ಹರಿಬಿಟ್ಟಿದ್ದಾರೆ. ನಾಡಿಗೆ ಒಳ್ಳೆ ಕೆಲಸ ಮಾಡಬೇಕೋ ಅಥವಾ ನಿಮ್ಮ ವರ್ಗಾವಣೆ ಆದರೆ ಸಾಕೋ. ಇದನ್ನು ಜನರೇ ಹೇಳಬೇಕು. ನನ್ನ ಪರಿಸ್ಥಿತಿ ನಿಮಗೆ ಅರ್ಥ ಆಗುತ್ತಿಲ್ಲ. ನಾನು ವರ್ಗಾವಣೆ ದಂಧೆ ಮಾಡಬೇಕಾ..? ವರ್ಗಾವಣೆ ಹೆಸರಲ್ಲಿ ನೀವು ಹಣ ಮಾಡ್ತಾ ಕುಳಿತರೆ ನನ್ನ ಸ್ಥಿತಿ ಏನಾಗಬಹುದು..? ಎಂದು ಕಾರ್ಯಕರ್ತರಿಗೆ ಪ್ರಶ್ನಿಸಿದ್ದಾರೆ.

ಸಾಲಮನ್ನಾದ ಬಗ್ಗೆ ಇನ್ನೂ ಅನುಮಾನವೇ?

ರೈತರ ಸಾಲಮನ್ನಾದ ಬಗ್ಗೆ ಇನ್ನೂ ಅನುಮಾನವೇ? ಎಂದು ಕೇಳಿದ ಅವರು, 25 ರವರೆಗೆ 2.5 ಲಕ್ಷ ರೈತ ಕುಟುಂಬಗಳಿಗೆ ಸಾಲಮನ್ನಾ ಆದೇಶ ಹೋಗಿದೆ. ಸಿದ್ದರಾಮಯ್ಯ ಅವರು ಮಾಡಿದ ಸಾಲಮನ್ನಾ ಹಣ ಬಾಕಿ ಇತ್ತು. 3 ಸಾವಿರ 8 ನೂರು ಕೋಟಿ ಹಣ ಚುಕ್ತಾ ಮಾಡಿದ್ದೇನೆ. ಫೆ.8 ರಂದು ಬಜೆಟ್ ನಲ್ಲಿ 44 ಲಕ್ಷ ರೈತರ ಸಾಲಮನ್ನಾ ಆಗುತ್ತೆ. ಸಾಲಮನ್ನಾದ ವಿವರವನ್ನು ಪ್ರತಿ ರೈತನ ಮನೆಗೆ ತಲುಪಿಸುತ್ತೇನೆ ಎಂದು ಹೇಳಿದರು.

ಮಿತ್ರ ಪಕ್ಷದವರು ನನ್ನ ಮೇಲೆ ಒತ್ತಡ ತಂದು ನಿಗಮ ಮಂಡಳಿ ನೇಮಕ ಮಾಡಿಸಿಕೊಂಡಿದ್ದಾರೆ. ಜೆಡಿಎಸ್​​ನಲ್ಲಿಯೂ ನೇಮಕ ಆಗಬೇಕಿದೆ, ಸದ್ಯದಲ್ಲೇ ಮಾಡುತ್ತೇವೆ. ನಿಗಮ ಮಂಡಳಿ ನೇಮಕ ಮಾಡದೆ ಹಣ ಉಳಿಸಬೇಕು ಎಂದು ಎಂದುಕೊಂಡಿದ್ದೆ. ಆದರೆ ಈಗ ಹಾಗೆ ಮಾಡಲು ಸಾಧ್ಯವಿಲ್ಲ ಎಂದರು.

ಹಿಂದಿನ ಸರ್ಕಾರದ ಪಶು ಭಾಗ್ಯ ಯೋಜನೆ ಟೀಕಿಸಿದ ಸಿಎಂ, ಈಗಲೇ ಹಾಲು ಖರೀದಿ ಮಾಡಲು ಆಗುತ್ತಿಲ್ಲ. 1200 ಕೋಟಿ ಸಬ್ಸಿಡಿ ಬೇರೆ ಕೊಡಬೇಕು. ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಚ್ಚಿನ ಹಾಲು ಕುಡಿಯಲು ಕೊಡ್ತಾ ಇದ್ದೀವಿ. ಈಗ ಮತ್ತೆ ಪಶು ಭಾಗ್ಯ ಕೊಡಿ ಎಂದು ಶಾಸಕರು ಕೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

Comments are closed.