ಕರ್ನಾಟಕ

ಲೋಕಸಭಾ ಚುನಾವಣೆ: ಮೈಸೂರಿನಲ್ಲಿ ಪ್ರತಾಪ್ ಸಿಂಹನ ವಿರುದ್ದ ಮೈತ್ರಿ ಪಕ್ಷಗಳಿಂದ ಯಾರು ಸ್ಪರ್ಧಿ

Pinterest LinkedIn Tumblr


ಸಾಂಸ್ಕೃತಿಕ ರಾಜಧಾನಿ ಮೈಸೂರು ಲೋಕಸಭಾ ಕ್ಷೇತ್ರ ಹಲವು ಕಾರಣಗಳಿಗೆ ವೈಶಿಷ್ಟತೆ ಪಡೆದುಕೊಂಡಿದೆ. ರಾಜ್ಯ ರಾಜಕೀಯದಲ್ಲಿ ಘಟಾನುಘಟಿ ನಾಯಕರನ್ನು ನೀಡಿದ ಹೆಗ್ಗಳಿಕೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಎಂಬ ಕಾರಣಕ್ಕೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಪ್ರತಿಷ್ಠಿತ ಕಣವಾಗಿದೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿ ಆಯ್ಕೆ ಸ್ಪಷ್ಟವಾಗಿದ್ದು, ದೋಸ್ತಿ ಪಕ್ಷಗಳಾದ ಕಾಂಗ್ರೆಸ್​-ಜೆಡಿಎಸ್​ನಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಇನ್ನು ನಿಖರವಾಗಿಲ್ಲ.

ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪ್​ ಸಿಂಹ ಅಭ್ಯರ್ಥಿಯಾಗುವುದು ಈಗಾಗಲೇ ಬಹುತೇಕ ಖಚಿತವಾಗಿದೆ. ಆದರೆ, ದೋಸ್ತಿಗಳಲ್ಲಿ ಮೈಸೂರು ಕ್ಷೇತ್ರ ಕಾಂಗ್ರೆಸ್​ ಪಾಲಾದರೆ ಸಿ.ಎಚ್​.ವಿಜಯಶಂಕರ್​ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಬಿಜೆಪಿಯಲ್ಲಿದ್ದ ಕುರುಬ ಸಮುದಾಯದ ಪ್ರಬಲ ನಾಯಕ ಸಿ.ಎಚ್.ವಿಜಯಶಂಕರ್ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಟಿಕೆಟ್​ ನೀಡದೆ, ಹಾಸನದಿಂದ ನೀಡಲಾಯಿತು. ಅಲ್ಲಿ ದೇವೇಗೌಡರ ವಿರುದ್ಧ ಸೋತರು. ನಂತರ ಪರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್​ ಬಯಸಿದ ವಿಜಯಶಂಕರ್ ಅವರಿಗೆ ಬಿಜೆಪಿ ಟಿಕೆಟ್​ ನಿರಾಕರಿಸಿತು. ಇದರಿಂದ ಬೇಸರಗೊಂಡ ಅವರು ಬಿಜೆಪಿ ತೊರೆದು, ಕಾಂಗ್ರೆಸ್​ ಸೇರ್ಪಡೆಗೊಂಡಿದ್ದರು. ಒಂದು ವೇಳೆ ಕಾಂಗ್ರೆಸ್​ ಅಭ್ಯರ್ಥಿಗೆ ಈ ಕ್ಷೇತ್ರ ಬಿಟ್ಟುಕೊಟ್ಟರೆ ವಿಜಯಶಂಕರ್ ಸ್ಪರ್ಧೆ ಮಾಡಲಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಮೈಸೂರು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 14,23,727 ಮತದಾರರು ಇದ್ದರೆ, ಕೊಡಗು ಜಿಲ್ಲೆಯ ಎರಡು ವಿಧಾನಸಭಾ (ಮಡಿಕೇರಿ ಮತ್ತು ವಿರಾಜಪೇಟೆ) ಕ್ಷೇತ್ರಗಳ ಮತದಾರರ ಸಂಖ್ಯೆ ಒಟ್ಟು 4,34,256. ಎರಡು ಜಿಲ್ಲೆಗಳು ಸೇರಿ 2019 ಚುನಾವಣೆಯ ಮತದಾರರ ಸಂಖ್ಯೆ ಒಟ್ಟು 18,57,983.

ಮೈಸೂರು ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಈವರೆಗೂ ಒಬ್ಬನೇ ಒಬ್ಬ ಜೆಡಿಎಸ್​ ಅಭ್ಯರ್ಥಿ ಆರಿಸಿಬಂದಿಲ್ಲ. ಈ ಕಾರಣಕ್ಕೆ ಮೈಸೂರು ಕ್ಷೇತ್ರವನ್ನು ತಮಗೆ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್​ ಪಟ್ಟು ಹಿಡಿದಿದೆ. ಆದರೆ, ಮೈಸೂರು ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ಇಲ್ಲಿ ಪ್ರಸ್ತುತ ಮೂವರು ಜೆಡಿಎಸ್​ ಶಾಸಕರು ಗೆದ್ದಿದ್ದಾರೆ. ಹೀಗಾಗಿ ಈ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಬೇಕು ಎಂಬುದು ದೇವೇಗೌಡರ ವಾದವಾಗಿದೆ. ಒಂದು ವೇಳೆ ಜೆಡಿಎಸ್​ಗೆ ಈ ಕ್ಷೇತ್ರ ಬಿಟ್ಟುಕೊಟ್ಟರೆ ದೇವೇಗೌಡ ಅವರೇ ಸ್ಪರ್ಧಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದು ಕಡೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ಮಗ ಜಿ.ಟಿ.ಹರೀಶ್​ ಗೌಡ, ಮೈಸೂರು ವಿವಿ ಮಾಜಿ ಕುಲಪತಿ ಪ್ರೊ.ಕೆ.ಎಸ್​.ರಂಗಪ್ಪ ಅವರ ಹೆಸರು ಚಲಾವಣೆಯಲ್ಲಿದೆ. ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್​ ಕೂಡ ಟಿಕೆಟ್​ ಆಕಾಂಕ್ಷಿಯಾಗಿದ್ದು, ಅವರಿಗೆ ಟಿಕೆಟ್​ ಸಿಗುವುದು ಕಷ್ಟಸಾಧ್ಯವಾಗಿದೆ.

ಪ್ರವಾಸೋದ್ಯಮ ಮತ್ತು ಕೃಷಿ ಮೈಸೂರು ಹಾಗೂ ಕೊಡಗು ಜಿಲ್ಲೆಯ ಆದಾಯದ ಮೂಲ. ಕೊಡಗಿನಲ್ಲಿ ಕಾಫಿ ಸೇರಿದಂತೆ ಇತರೆ ಬೆಳೆ ಬೆಳೆದರೆ. ಮೈಸೂರಿನಲ್ಲಿ ಭತ್ತ, ತಂಬಾಕು, ಕಬ್ಬು ಹಾಗೂ ರಾಗಿ ಬೆಳೆಯುತ್ತಾರೆ. ಅದನ್ನು ಹೊರೆತುಪಡಿಸಿ ವ್ಯಾಪಾರ ವಹಿವಾಟು ಎರಡು ಜಿಲ್ಲೆಯಲ್ಲಿ ಸಾಮಾನ್ಯವಾಗಿಯೇ ಇದೆ. ಲೋಕಸಭಾ ಕ್ಷೇತ್ರದ ಎರಡು ಜಿಲ್ಲೆಗಳಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಾಗಿಯೇ ಇದೆ. ಎರಡು ಜಿಲ್ಲೆಗಳಲ್ಲಿ ಬರೋಬ್ಬರಿ ಶೇ. 70 ಮಂದಿ ಅಕ್ಷರಸ್ಥರಾಗಿದ್ದಾರೆ.

ಸದ್ಯದ ಮತದಾರ ಮನಸ್ಥಿತಿಯನ್ನ ಗಮನಿಸಿದರೆ ಕೊಡಗಿನಲ್ಲಿ ಬಿಜೆಪಿ ಮೆಲುಗೈ ಸಾಧಿಸುವ ಲಕ್ಷಣಗಳಿವೆ. ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಜೊತೆ ಕಾಂಗ್ರೆಸ್‌-ಜೆಡಿಎಸ್‌ ಪರಿಣಾಮ ಬೀರಿದೆ. ಮೈಸೂರಿನಲ್ಲಿ ಬಿಜೆಪಿ ಫೈಟ್‌ ಮಾಡುವ ಅಗತ್ಯ ಇದೆ. ಎರಡು ಪಕ್ಷಗಳು ಒಂದೇ ಅಭ್ಯರ್ಥಿ ಹಾಕಿ ಬಿಜೆಪಿ ಎದುರಿಸಿದರೆ ಬಿಜೆಪಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಈ ಮೊದಲು ದ್ವಿಸದಸ್ಯ ಕ್ಷೇತ್ರವಾಗಿದ್ದ ಮೈಸೂರು 1962ರಲ್ಲಿ ಚಾಮರಾಜನಗರವನ್ನು ಬೇರ್ಪಡಿಸಲಾಯಿತು. ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ನಡೆದ ಎರಡು ಚುನಾವಣೆಯಲ್ಲಿ ಕಿಸಾನ್​ ಮಜ್ದೂರ್​ ಪ್ರಜಾ ಪಾರ್ಟಿಯ ಎಂ.ಎಸ್​.ಗುರುಪಾದಸ್ವಾಮಿ ಗೆಲುವು ಪಡೆದಿದ್ದರು. ನಂತರ 1996ರವರೆಗೆ ಕಾಂಗ್ರೆಸ್​ ಇಲ್ಲಿ ಏಕಚಕ್ರಾಧಿಪತ್ಯ ಸಾಧಿಸಿತ್ತು. 1998ರ ಚುನಾವಣೆಯಲ್ಲಿ ಸಿ.ಎಚ್.ವಿಜಯಶಂಕರ್ ಗೆಲ್ಲುವ ಮೂಲಕ ಇಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದರು. ನಂತರ 2004ರ ಚುನಾವಣೆಯಲ್ಲೂ ಗೆಲುವು ಪಡೆದರು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್​ ಸಿಂಹ, ಕಾಂಗ್ರೆಸ್​ ಅಭ್ಯರ್ಥಿ ಎಚ್.ವಿಶ್ವನಾಥ್​ ಅವರನ್ನು 30 ಸಾವಿರ ಮತಗಳ ಅಂತರದಿಂದ ಮಣಿಸಿದ್ದರು.

ಕಳೆದ 6 ಲೋಕಸಭಾ ಚುನಾವಣೆಗಳಲ್ಲಿ ಗೆದ್ದವರು, ಸೋತವರು

ವರ್ಷ ಗೆದ್ದವರು (ಪಕ್ಷ) ಸೋತವರು (ಪಕ್ಷ)

2014 ಪ್ರತಾಪ್​ ಸಿಂಹ – ಬಿಜೆಪಿ ಎಚ್.ವಿಶ್ವನಾಥ್ – ಕಾಂಗ್ರೆಸ್​

2009 ಎಚ್​.ವಿಶ್ವನಾಥ್​ – ಕಾಂಗ್ರೆಸ್​ ಸಿ.ಎಚ್​.ವಿಜಯಶಂಕರ್ – ಬಿಜೆಪಿ

2004 ಸಿ.ಎಚ್. ​​ವಿಜಯಶಂಕರ್ – ಬಿಜೆಪಿ ಎ.ಎಸ್ ಗುರುಸ್ವಾಮಿ – ಜೆಡಿಎಸ್​

1999 ಶ್ರಿಕಂಠದತ್ತ ನರಸಿಂಹರಾಜ ಒಡೆಯರ್‌ – ಕಾಂಗ್ರೆಸ್‌ ಸಿ.ಎಚ್.ವಿಜಯಶಂಕರ್

1998 ಸಿ.ಎಚ್. ​​ವಿಜಯಶಂಕರ್ – ಬಿಜೆಪಿ ಎಸ್‌.ಚಿಕ್ಕಮಾದು – ಕಾಂಗ್ರೆಸ್

1996 ಶ್ರಿಕಂಠದತ್ತ ನರಸಿಂಹರಾಜ ಒಡೆಯರ್‌ ಜಿ.ಟಿ.ದೇವೇಗೌಡ – ಜನತಾದಳ

ಒಂದು ಬಾರಿಯೂ ಗೆಲ್ಲದ ಜೆಡಿಎಸ್​ ಅಭ್ಯರ್ಥಿ!

ಮೈಸೂರು ಲೋಕಸಭಾ ಕ್ಷೇತ್ರದಿಂದ ಆರಿಸಿಹೋದ ಯಾವೊಬ್ಬ ಸಂಸದರು ಈವರೆಗೂ ಕೇಂದ್ರದಲ್ಲಿ ಮಂತ್ರಿಯಾಗಿಲ್ಲ. ಎಂ.ಎಸ್​.ಗುರುಪಾದಸ್ವಾಮಿ ಹಾಗೂ ಎಂ.ರಾಜಶೇಖರಮೂರ್ತಿ ಅವರು ಮಂತ್ರಿಗಳಾದರೂ ಅವರು ರಾಜ್ಯಸಭಾ ಸದಸ್ಯರಾಗಿದ್ದರು.

ನಿರೀಕ್ಷಿತ ಅಭ್ಯರ್ಥಿಗಳು?

ಕಾಂಗ್ರೆಸ್​ನಿಂದ ಸಿ.ಎಚ್.ವಿಜಯಶಂಕರ್ ಸ್ಪರ್ಧಿಯಾಗಲಿದ್ದಾರೆ. ಇದರ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡ ವಾಸು ಅವರು ತಾವು ಕೂಡ ಟಿಕೆಟ್​ ಆಕಾಂಕ್ಷಿ ಎಂದು ಹೇಳಿದ್ದಾರೆ. ಬಿಜೆಪಿಯಿಂದ ಪ್ರತಾಪ್​ ಸಿಂಹ ಬಹುತೇಕ ಖಚಿತ ಎಂದು ಹೇಳಲಾಗುತ್ತಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಬೇಕಿದ್ದ ಬಿ.ಎಸ್​.ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರನ್ನು ಈ ಬಾರಿಯ ಲೋಕಸಭಾ ಚುನಾವಣೆಗೆ ನಿಲ್ಲಿಸಿ ಎಂಬ ಕೂಗು ವರುಣಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಂದ ಕೇಳಿಬರುತ್ತಿದೆ. ಇನ್ನು ಜೆಡಿಎಸ್​ನಿಂದ ಎಚ್.ಡಿ.ದೇವೇಗೌಡ, ಪ್ರೊ.ಕೆ.ಎಸ್.ರಂಗಪ್ಪ, ಜಿ.ಟಿ.ಹರೀಶ್​ಗೌಡ ಹಾಗೂ ಎಚ್.ವಿಶ್ವನಾಥ್​ ಸ್ಪರ್ಧಿಸುವ ಸಾಧ್ಯತೆ ಇದೆ.

ಜಾತಿವಾರು ವಿವರ
ಒಕ್ಕಲಿಗರು 4.50 ಲಕ್ಷ
ಕುರುಬ 2.50 ಲಕ್ಷ
ಲಿಂಗಾಯತ 2.25 ಲಕ್ಷ
ಎಸ್​ಸಿ 2.25 ಲಕ್ಷ
ಹಿಂದುಳಿದ ವರ್ಗ 2.50 ಲಕ್ಷ
ನಾಯಕ 1.45 ಲಕ್ಷ
ಮುಸ್ಲಿಂ 1.25 ಲಕ್ಷ
ಕೊಡವರು 1 ಲಕ್ಷ
ಬ್ರಾಹ್ಮಣ 90 ಸಾವಿರ
ಇತರೆ 1.50 ಲಕ್ಷ

ದೋಸ್ತಿ ಅಭ್ಯರ್ಥಿ ಗೆಲುವಿಗೆ ಹೆಚ್ಚು ಅವಕಾಶ?

ಹಾಲಿ ಬಿಜೆಪಿ ಅಭ್ಯರ್ಥಿ ಸಂಸದರಾಗಿ ಇದ್ದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಜೊತೆಯಾಗಿ ಸ್ಪರ್ಧೆ ಮಾಡಲಿರುವುದರಿಂದ ಬಿಜೆಪಿ ಗೆಲುವು ಕಷ್ಟ ಎನ್ನಲಾಗುತ್ತಿದೆ. ಕಳೆದ ಚುನಾವಣೆಯ ಅಂಕಿ-ಅಂಶಗಳನ್ನು ನೋಡುವುದಾದರೆ ಬಿಜೆಪಿ ಅಭ್ಯರ್ಥಿ 5,03,908 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್​ ಅಭ್ಯರ್ಥಿ 4,72,300 ಮತಗಳನ್ನು ಪಡೆದಿದ್ದರು. ಇವರಿಬ್ಬರ ನಡುವಿನ ಅಂತರ ಕೇವಲ 31,608 ಮತಗಳು. ಇನ್ನು ಜೆಡಿಎಸ್​ ಅಭ್ಯರ್ಥಿ 1,38,587 ಮತಗಳನ್ನು ಪಡೆದಿದ್ದರು. ಈಗ ಕಾಂಗ್ರೆಸ್​ ಮತ್ತು ಜೆಡಿಎಸ್​ ಮತಗಳು ಒಟ್ಟಾದರೆ ದೋಸ್ತಿ ಅಭ್ಯರ್ಥಿ ಗೆಲುವು ಕಷ್ಟಸಾಧ್ಯವೇನಲ್ಲ. ಅಲ್ಲದೇ, ಕಾಂಗ್ರೆಸ್​ ಮತ್ತು ಜೆಡಿಎಸ್​ನ ಸಂಪ್ರದಾಯ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Comments are closed.