ಕರ್ನಾಟಕ

ಸೋಲೊಪ್ಪಿಕೊಂಡ ರಮೇಶ್ ಜಾರಕಿಹೊಳಿ​; ಅತೃಪ್ತರಿಂದ ಕ್ಷಮೆಯಾಚನೆ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​ – ಜೆಡಿಎಸ್​ ಮೈತ್ರಿ ಸರ್ಕಾರವನ್ನು ಇನ್ನೇನು ಬಿಜೆಪಿ ಆಪರೇಷನ್​ ಕಮಲ ನಡೆಸಿ ಬೀಳಿಸಿಯೇ ಬಿಟ್ಟಿತು ಎಂಬ ಮಟ್ಟಕ್ಕೆ ಸುದ್ದಿಯಾಗಿದ್ದ ಘಟನೆಗೀಗ ಬಹುತೇಕ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ. ಸಚಿವ ಸ್ಥಾನ ಕಳೆದುಕೊಂಡು ಪೆಟ್ಟು ತಿಂದ ಹುಲಿಯಂತಾಗಿದ್ದ ರಮೇಶ್​ ಜಾರಕಿಹೊಳಿ ಕಾಂಗ್ರೆಸ್​ನ ಕೆಲ ಅತೃಪ್ತ ಶಾಸಕರನ್ನು ತಮ್ಮೊಡನೆ ಸೇರಿಸಿಕೊಂಡು ಬ್ಲಾಕ್​ಮೇಲ್​ ತಂತ್ರಕ್ಕೆ ಮುಂದಾಗಿದ್ದರು. ಪಕ್ಷದಲ್ಲಿ ತಮಗೆ ಉತ್ತಮ ಸ್ಥಾನಮಾನ ಬೇಕು ಎಂಬ ಕಾರಣಕ್ಕೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ನಂತರ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕರೆದಿದ್ದ ಶಾಸಕಾಂಗ ಸಭೆಗೂ ಗೈರಾಗಿದ್ದರು. ಆದರೀಗ ಸಿದ್ದರಾಮಯ್ಯ ಬಿಗಿ ಪಟ್ಟಿಗೆ ಸೋತಿರುವ ಅತೃಪ್ತರು ಕ್ಷಮೆ ಕೋರಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಅತೃಪ್ತ ಶಾಸಕರಾದ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಳ್ಳಿ, ನಾಗೇಂದ್ರ ಮತ್ತು ಉಮೇಶ್​ ಜಾಧವ್​ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದಕ್ಕೆ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ. ಆಪರೇಷನ್​ ಕಮಲ ಮತ್ತೆ ಮಕಾಡೆ ಮಲಗಿದ ನಂತರ ಪಕ್ಷದಿಂದ ಉಚ್ಛಾಟನೆಯಾಗುವ ಭಯದಿಂದ ನಾಲ್ಕೂ ಅತೃಪ್ತ ಶಾಸಕರು ಅನಿವಾರ್ಯವಾಗಿ ಸೋಲೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಿದ್ದರಾಮಯ್ಯ ನೀಡಿದ್ದ ಶೋಕಾಸ್​ ನೊಟೀಸ್​ಗೆ ಅತೃಪ್ತರಿಂದ ಉತ್ತರ ಬಂದಿದೆ.

ಪಕ್ಷ ತೊರೆಯಲ್ಲ:

ಬಂಡಾಯದ ಬಾವುಟವನ್ನು ಹಾರಿಸಿದ್ದ ಹಿರಿಯ ಕಾಂಗ್ರೆಸ್​ ನಾಯಕ ರಮೇಶ್​ ಜಾರಕಿಹೊಳಿ ನೊಟೀಸ್​ಗೆ ಪ್ರತಿಕ್ರಿಯಿಸಿದ್ದು, ಯಾವುದೇ ಸಂದರ್ಭದಲ್ಲೂ ಕಾಂಗ್ರೆಸ್​ ಪಕ್ಷವನ್ನು ತೊರೆಯುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಮಗನ ಮದುವೆ ಇರುವ ಹಿನ್ನೆಲೆಯಲ್ಲಿ ಪೂರ್ವ ನಿಯೋಜಿತ ಕೆಲಸಗಳಲ್ಲಿ ತೊಡಗಿದ್ದೆ, ಈ ಕಾರಣದಿಂದ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಜಾರಕಿಹೊಳಿ ಕಾರಣ ನೀಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಪ್ರತಿಕ್ರಿಯೆ:

ಗುರುವಾರ ನಡೆದ ಕಾಂಗ್ರೆಸ್​ – ಜೆಡಿಎಸ್​ ಸಮನ್ವಯ ಸಮಿತಿ ಸಭೆ ನಂತರ ಮಾತನಾಡಿದ ಸಿದ್ದರಾಮಯ್ಯ ರಮೇಶ್​ ಜಾರಕಿಹೊಳಿ, ನಾಗೇಂದ್ರ ಮತ್ತು ಮಹೇಶ್​ ಕುಮಟಳ್ಳಿ ಉತ್ತರ ನೀಡಿರುವುದಾಗಿ ತಿಳಿಸಿದರು. ಆದರೆ ಉಮೇಶ್​ ಜಾಧವ್​ ಮಾತ್ರ ಇನ್ನೂ ಉತ್ತರಿಸಿಲ್ಲ ಎಂದರು.

ಬಿಜೆಪಿ ಪಕ್ಷದ ಎಲ್ಲಾ ಶಾಸಕರು ಹರಿಯಾಣದ ಐಷಾರಾಮಿ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದರು. ಸತತ ಐದು ದಿನಗಳ ಕಾಲ ಅಲ್ಲೇ ಇದ್ದ ಶಾಸಕರಲ್ಲಿ ಸರ್ಕಾರ ಬೀಳಿಸಿದ ಭಾವವಿತ್ತು. ಅದರಂತೆ ಅತೃಪ್ತ ಶಾಸಕರು ಮುಂಬೈನಲ್ಲಿ ಉಳಿದಿದ್ದರು. ಇವೆಲ್ಲದರ ಬೆನ್ನಲ್ಲೇ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದು, ವ್ಹಿಪ್​ ಜಾರಿ ಮಾಡಿದ್ದರು.

ಆದರೆ ಅತೃಪ್ತ ಶಾಸಕರು ಸಭೆಗೆ ಹಾಜರಾಗಿರಲಿಲ್ಲ. ಅಂತೆಯೇ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದ ಪಕ್ಷೇತರ ಶಾಸಕರಾದ ಆರ್​. ಶಂಕರ್​ ಮತ್ತು ಎನ್​. ನಾಗೇಶ್ ಬೆಂಬಲ ಹಿಂಪಡೆದು ರಾಜ್ಯಪಾಲರಿಗೆ ಪತ್ರ ನೀಡಿದ್ದರು. ಆದರೆ ಅಂತಿಮವಾಗಿ ಆಪರೇಷನ್​ ಕಮಲ ಮತ್ತೆ ವಿಫಲವಾಗಿತ್ತು. ಇದನ್ನು ಮನಗಂಡಿರುವ ಅತೃಪ್ತ ಶಾಸಕರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ. ​

Comments are closed.