ಕರ್ನಾಟಕ

ಲಿಂಗೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ಸಿದ್ದಗಂಗಾ ಶ್ರೀಗಳು!

Pinterest LinkedIn Tumblr


ತುಮಕೂರು: ತ್ರೀವಿಧ ದಾಸೋಹದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ.

ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೇ ಜಾಸ್ತಿ ಮಮತೆ. ಬದುಕಿನ ಹೆಚ್ಚಿನ ಕ್ಷಣಗಳನ್ನು ಶ್ರೀಗಳು ಮಕ್ಕಳ ಜೊತೆ ಕಳೆದಿದ್ದರು. ಹೀಗಾಗಿ ತಾವು ಮೃತಪಟ್ಟ ಸುದ್ದಿಯನ್ನು ಮಕ್ಕಳು ಮಧ್ಯಾಹ್ನದ ಭೋಜನ ಸ್ವೀಕರಿಸಿದ ನಂತರ ಪ್ರಕಟಿಸಬೇಕು ಎಂದು ಶ್ರೀಗಳು ಮೊದಲೇ ಮಠದ ಸಿಬ್ಬಂದಿಗೆ ತಿಳಿಸಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

ಶ್ರೀಗಳ ಆಶಯದಂತೆ ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದರೂ ಅಧಿಕೃತವಾಗಿ ಮೃತಪಟ್ಟ ಸುದ್ದಿಯನ್ನು ಪ್ರಕಟಿಸಲಿಲ್ಲ. ಮಧ್ಯಾಹ್ನ ವಿದ್ಯಾರ್ಥಿಗಳ ಭೋಜನವನ್ನು ಸ್ವೀಕರಿಸಿದ ಬಳಿಕ ಮಧ್ಯಾಹ್ನ 1.50ಕ್ಕೆ ಅಧಿಕೃತವಾಗಿ ಶ್ರೀಗಳು ಲಿಂಗೈಕ್ಯರಾದ ಸುದ್ದಿಯನ್ನು ಪ್ರಕಟಿಸಲಾಯಿತು.

ನಿನ್ನೆಯವರೆಗೂ ಭಕ್ತರು ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಿಕಿಯ ಮೂಲಕ ದರ್ಶನ ಪಡೆದು ಹೋಗುತ್ತಿದ್ದರು. ಇಂದು ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಕಳೆದ ದಿನ ಆಯುರ್ವೇದಿಕ್ ಚಿಕಿತ್ಸೆ ನೀಡಲಾಗಿತ್ತು.

ಕೆಲ ದಿನಗಳ ಹಿಂದೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿ, ಅವರ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.

Comments are closed.