ಕರ್ನಾಟಕ

ಸಿದ್ದಗಂಗಾ ಶ್ರೀಗಳ ಕೊನೆ ಆಸೆ ಕೇಳಿದರೆ ಕಣ್ಣಂಚಲ್ಲಿ ನೀರು ಬರುತ್ತದೆ!

Pinterest LinkedIn Tumblr


‘ನಡೆದಾಡುವ ದೇವರು’ ಎಂದೇ ಕರೆಸಿಕೊಳ್ಳುತ್ತಿದ್ದ ಸಿದ್ದಗಂಗಾ ಶ್ರೀಗಳು ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ. 111 ವರ್ಷ ಸಾರ್ಥಕ ಬದುಕು ನಡೆಸಿದ ಅವರು ಇಂದಿಗೂ ಮಹಾನ್​ ಶಕ್ತಿ. ಶ್ರೀಗಳಿಗೆ ಮಕ್ಕಳೆಂದರೆ ಎಲ್ಲಿಲ್ಲದ ಅಪಾರ ಪ್ರೀತಿ. ತಮ್ಮ ಕೊನೆಗಾಲದಲ್ಲಿಯೂ ಮಕ್ಕಳ ಮೇಲೆ ಅದೆಷ್ಟು ಪ್ರೀತಿ ಇತ್ತು ಎಂಬುದನ್ನು ತೋರಿಸಿದ್ದಾರೆ. ಅವರ ಕೊನೆಯ ಆಸೆ ಕೇಳಿದರೆ, ಕಲ್ಲು ಹೃದಯದವರಿಗೂ ಕಣ್ಣಂಚಿನಲ್ಲಿ ನೀರು ಬರುವುದು ಸತ್ಯ.

ಕಾಯಕ ಯೋಗಿ ಸಿದ್ದಗಂಗಾ ಶ್ರೀಗಳು ಸಾಯುವ ಮುನ್ನ ಕೊನೆಯ ಆಸೆ ಹೇಳಿಕೊಂಡಿದ್ದರು. ಅವರ ಕೊನೆಯ ಆಸೆ ಕೇಳಿದರೆ ಮೈ ಜುಮ್ಮೆನ್ನುತ್ತದೆ. ಹೌದು, ಶ್ರೀಗಳು ಕಿರಿಯ ಶ್ರೀಗಳೊಂದಿಗೆ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರಂತೆ. ಆ ಆಸೆ ಏನು ಅಂತ ಕೇಳಿದರೆ ನಿಜಕ್ಕೂ ಕಣ್ಣು ಒದ್ದೆಯಾಗುತ್ತದೆ.

‘ನಾನು ಯಾವಾಗ ಸತ್ತರೂ ಸರಿಯೇ, ಮಕ್ಕಳು ಮಧ್ಯಾಹ್ನದ ದಾಸೋಹವನ್ನು ಸ್ವೀಕರಿಸಿದ ನಂತರವಷ್ಟೇ ವಿಷಯ ತಿಳಿಸಬೇಕು’ ಎಂದು ಹೇಳಿದ್ದರಂತೆ. ಅದಕ್ಕಾಗಿಯೇ ಸ್ವಾಮಿಗಳು 11.44 ಕ್ಕೆ ನಿಧನರಾಗಿದ್ದರೂ ಕೂಡ ಮಧ್ಯಾಹ್ನದವರೆಗೆ ವಿಷಯ ತಿಳಿಸಲಿಲ್ಲ. ಮಕ್ಕಳು ಮಧ್ಯಾಹ್ನದ ದಾಸೋಹವನ್ನು ಸ್ವೀಕರಿಸಿದ ಬಳಿಕವಷ್ಟೇ ಶ್ರೀಗಳು ಶಿವೈಕ್ಯರಾದ ವಿಷಯವನ್ನು ತಿಳಿಸಿದ್ದಾರೆ.

ಈ ಒಂದು ಸಂಗತಿ ಸಿದ್ದಗಂಗಾ ಶ್ರೀಗಳಿಗೆ ಮಕ್ಕಳ ಮೇಲೆ ಅದೆಂತಹ ಅಮೋಘ ಪ್ರೀತಿ, ವಾತ್ಸಲ್ಯ, ಮಮಕಾರ ಇತ್ತು ಎಂಬುದನ್ನು ತೋರಿಸುತ್ತದೆ. ಮಕ್ಕಳಿಗೂ ಶ್ರೀಗಳೆಂದರೆ ತುಂಬಾ ಭಕ್ತಿ, ಅಭಿಮಾನ. ಸಿದ್ದಗಂಗಾ ಶ್ರೀಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಕ್ಕಳು ತಮ್ಮ ತಾಯಿ ಕಳೆದುಕೊಂಡಷ್ಟೇ ದುಃಖಿತರಾಗಿದ್ದರು. ‘ಸ್ವಾಮಿ ಸ್ವಾಮಿ’ ಎಂದು ಕಣ್ಣೀರಿಡುತ್ತಿದ್ದರು. ಮುಗ್ದ ಮಕ್ಕಳ ಮೊಗದಲ್ಲಿ ಶ್ರೀಗಳನ್ನು ಕಳೆದುಕೊಂಡ ನೋವು ತುಂಬಿತ್ತು.

ಆ ಶಕ್ತಿಯ ಪಾದ ಮುಟ್ಟಿದರೆ ಸಾಕು, ನಮಗೆ ಕೋಟಿ ಜನ್ಮದ ಪುಣ್ಯ ಸಿಗುತ್ತೆ ಎನ್ನುತ್ತಿದ್ದರು ಕೋಟಿ ಕೋಟಿ ಭಕ್ತರು. ತಮ್ಮ ಅಮೋಘ ದಾಸೋಹ ಸಂಪದದಿಂದ ದೀನತೆಯ ಮುಜುಗರವಿಲ್ಲದೆ, ಸ್ವಾಭಿಮಾನಕ್ಕೆ ಊನವಾಗದಂತೆ ನೂರಾರು ವರ್ಷಗಳಿಂದ ಲಕ್ಷಾಂತರ ಜನರ ಹಸಿವನ್ನು ಹಿಂಗಿಸಿದ ಅದ್ಭುತ ದೈವ ಸಿದ್ದಗಂಗಾ ಶ್ರೀಗಳು. ವಿದ್ಯೆಯ ಬೆಳಕನ್ನು ಹಚ್ಚಿ, ಹಣತೆಗಳನ್ನು ಬೆಳಗಿಸಲು ಅನುವು ಮಾಡಿಕೊಟ್ಟವರು ಶತಾಯುಷಿ ಸಿದ್ಧಗಂಗಾ ಶ್ರೀಗಳು.

ಅಂಧಕಾರವನ್ನು ತೊಡೆದು ಹಾಕಲು ಪಣತೊಟ್ಟ ಅವರು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ‘ಅಕ್ಷರ ದಾಸೋಹಿ’ ಆದರು. ಹಸಿದ ಲಕ್ಷಾಂತರ ಹೊಟ್ಟೆಗಳಿಗೆ ಅನ್ನ ಹಾಕಿ ‘ಅನ್ನ ದಾಸೋಹಿ’ ಎನಿಸಿಕೊಂಡರು. ಲಕ್ಷಾಂತರ ಜನರ ಬದುಕಿಗೆ ಸೂರು ಕಲ್ಪಿಸಿ ‘ತ್ರಿವಿಧ ದಾಸೋಹಿ’ ಎಂದೇ ಖ್ಯಾತರಾಗಿದ್ದರು. ಬಸವಣ್ಣನ ತತ್ವ ಅನುಸರಿಸುತ್ತಿದ್ದ ಅವರು ಶಿವನ ಪರಮ ಆರಾಧಕರಾಗಿದ್ದರು. ನಿಸ್ವಾರ್ಥ ಮನೋಭಾವದ ಶತಮಾನದ ಸಂತ ಮಾತೃ ಹೃದಯಿಯೂ ಹೌದು.

Comments are closed.