ಕರ್ನಾಟಕ

ಎರಡನೇ ದಿನಕ್ಕೆ ಕಾಲಿಟ್ಟ ಭಾರತ್ ಬಂದ್; ಕಲ್ಲು ತೂರಾಟದ ಹಿನ್ನಲೆಯಲ್ಲಿ ಹಲವೆಡೆ ಬಿಎಂಟಿಸಿ ಬಸ್ ಸ್ಥಗಿತ!

Pinterest LinkedIn Tumblr

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ 2ನೇ ದಿನಕ್ಕೆ ಕಾಲಿಟ್ಟಿದ್ದು, ಹತ್ತಾರು ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಿದ ಪರಿಣಾಮ ಬಿಎಂಟಿಸಿ ಬಸ್ ಸಂಚಾರ ದಿಢೀರ್ ಸ್ಥಗಿತವಾಗಿದೆ.

ನಿನ್ನೆ ಆರಂಭವಾದ 2 ದಿನಗಳ ಬಂದ್ ವೇಳೆ ಈ ವರಗೊ ಒಟ್ಟು 40 ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದು, ಬಿಎಂಟಿಸಿ ಬಸ್ ಸಂಚಾರ ಬೆಂಗಳೂರಿನ ಹಲವೆಡೆ ದಿಢೀರ್ ಸ್ಥಗಿತಗೊಂಡಿದೆ. ಅಂತೆಯೇ ಮೆಜೆಸ್ಟಿಕ್ ನಲ್ಲಿ ಬಸ್ ಸಂಚಾರ ಬಹುತೇಕ ಸ್ಥಗಿತವಾಗಿದ್ದು, ಸಿಟಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬೆಳಗ್ಗೆ ಸಂಚಾರ ಸಾಮಾನ್ಯವಾಗಿತ್ತಾದರೂ ಬಸ್ ಗಳ ಮೇಲಿನ ಕಲ್ಲು ತೂರಾಟ ಸುದ್ದಿಗಳು ಪ್ರಸಾರವಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿನ ಬಸ್ ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಮೆಜೆಸ್ಟಿಕ್ ನಿಂದ ಬಸ್ ಗಳ ಸಂಚಾರ ವಿರಳವಾದ ಕಾರಣ ಆಟೋ, ಓಲಾ, ಉಬರ್ ಕ್ಯಾಬ್ ಗಳ ಸೇವಾದರದಲ್ಲಿ ಗಣನೀಯ ದರ ಏರಿಕೆ ಕಂಡುಬಂದಿದೆ. ಬಂದ್ ನ ಲಾಭ ಪಡೆಯಲು ಆಟೋ ಚಾಲಕರು ಮುಂದಾಗಿದ್ದು, ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.

ಇನ್ನು ಕೆಂಗೇರಿ ಬಸ್ ಡಿಪೋಗೆ ಬಸ್ ಗಳು ವಾಪಸ್ ಆಗುತ್ತಿದ್ದು, ಕಳೆದ ಕೆಲ ಗಂಟೆಗಳಲ್ಲೇ ಬೆಂಗಳೂರಿನ ವಿವಿಧೆಡೆ ಬಸ್ ಗಳ ಸಂಚಾರ ಸ್ಥಗಿತವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನು ಯಶವಂತಪುರ ಎಪಿಎಂಸಿ, ಕಲಾಸಿಪಾಳ್ಯ ಮಾರುಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಸಾಗಿದೆ.

ರಾಯಚೂರು, ಬಳ್ಳಾರಿ ಹೊರತುಪಡಿಸಿ ಶಾಲಾ-ಕಾಲೇಜುಗಳಿಗಿಲ್ಲ ರಜೆ. ಎಂದಿನಂತೆ ಎಲ್ಲ ಶಾಲಾ-ಕಾಲೇಜುಗಳು ತೆರೆಯಲಿದ್ದು, ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.

Comments are closed.