ಕರ್ನಾಟಕ

ಚಾರ್ಮಾಡಿ ಘಾಟಿಯ ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ಹೆಚ್ಚಿದ ಕಾಡ್ಗಿಚ್ಚು

Pinterest LinkedIn Tumblr


ಮೂಡಿಗೆರೆ: ಚಾರ್ಮಾಡಿ ಘಾಟಿಯ ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿಲ್ಲ. 3 ದಿನಗಳಿಂದ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕಾಡನ್ನು ವ್ಯಾಪಿಸುತ್ತಿದೆ.

ಮಂಗಳವಾರ ಸಂಜೆಯಿಂದ ಸೋಮನಕಾಡು ಪ್ರಪಾತದ ಕೆಲವು ಭಾಗ ಹಾಗೂ ಜೇನುಕಲ್ಲು ಸಮೀಪ ಎತ್ತರದ ಗುಡ್ಡದತ್ತ ಬೆಂಕಿ ವ್ಯಾಪಿಸಿದೆ. ಅರಣ್ಯ ಇಲಾಖೆಯ “ಮಲಯ ಮಾರುತ’ ಅತಿಥಿಗೃಹದ ಎಡಭಾಗದ ಗುಡ್ಡದಲ್ಲಿ ಕಿ.ಮೀ. ಗಟ್ಟಲೆ ಅರಣ್ಯ ಸುಟ್ಟು ಅನೇಕ ಸಸ್ಯ, ಉರಗ ಹಾಗೂ ಸಣ್ಣಪುಟ್ಟ ಪ್ರಾಣಿಗಳು ಮೃತಪಟ್ಟಿದೆ ಎನ್ನಲಾಗಿದೆ.

ರಾತ್ರಿ ವೇಳೆ ಘಾಟಿಯ ರಸ್ತೆಯಿಂದ ಬೆಂಕಿಯ ಜ್ವಾಲೆಗಳು ಕಾಣುತ್ತಿದ್ದು, ದಟ್ಟಾರಣ್ಯವೇ ಬೆಂಕಿಗೆ ಆಹುತಿಯಾಗುವ ಆತಂಕ ಎದುರಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ಕೈಗೊಂಡಿದ್ದರೂ ಪ್ರಯೋಜನವಾಗಿಲ್ಲ. ಕಾಡ್ಗಿಚ್ಚು ಬೇರೆ ಬೇರೆ ಪ್ರದೇಶಕ್ಕೆ ವ್ಯಾಪಿಸುತ್ತಿದೆ. ಘಾಟಿನಲ್ಲಿ ಕಾಡ್ಗಿಚ್ಚು ಹೆಚ್ಚುತ್ತಿರುವುದರಿಂದ ನಂದಿಸಲು ಹೆಲಿಕಾಪ್ಟರ್‌ ಬಳಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಚಾರ್ಮಾಡಿ ಘಾಟಿಯ ಗುಡ್ಡವು ಬಲು ಎತ್ತರದಲ್ಲಿದ್ದು ಅಲ್ಲಿ ಕಾರ್ಯಾಚರಣೆ ಕೈಗೊಳ್ಳುವುದು ಕಷ್ಟ. ಹೀಗಾಗಿ ಬೆಂಕಿ ನಂದಿಸಲು ಹೆಲಿಕಾಪ್ಟರ್‌ನಿಂದ ನೀರು ಸಿಂಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Comments are closed.