ಕರ್ನಾಟಕ

ರಮೇಶ್ ಜಾರಕಿಹೊಳಿಗೆ ಬೆಂಬಲಿಗರಿಂದಲೇ ಶಾಕ್?

Pinterest LinkedIn Tumblr


ಬೆಂಗಳೂರು: ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ವ್ಯಕ್ತವಾಗುತ್ತಿರುವ ಬಂಡಾಯ ಹೊಸ ವರ್ಷಕ್ಕೆ ಹೊಸ ತೀವ್ರತೆ ಪಡೆದುಕೊಳ್ಳುತ್ತಿದೆ. ಸಂಪುಟ ಪುನಾರಚನೆಯ ನಂತರ ಅಸಮಾಧಾನಿತ ಶಾಸಕರ ಗುರಿ ಸ್ಪಷ್ಟವಾಗುತ್ತಿದೆ. ರಮೇಶ್ ಜಾರಕಿಹೊಳಿ ಈ ಸರಕಾರವನ್ನು ಉರುಳಿಸುವ ಅಂಚಿಗೆ ಬಂದಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಸರಕಾರಕ್ಕೆ ಶಾಕ್ ಕೊಡಲು ರಮೇಶ್ ಸರ್ವಸಜ್ಜಿತರಾಗಿದ್ದಾರೆ. ಅತ್ತ, ಇವೆಲ್ಲಾ ಆಟವನ್ನೂ ನಿರೀಕ್ಷಿಸಿರುವ ಕಾಂಗ್ರೆಸ್ ಪಾಳಯ ಕೂಡ ತಕ್ಕ ತಿರುಗೇಟು ಕೊಡಲು ಪ್ರತಿರಣತಂತ್ರ ರೂಪಿಸಿ ಕಾಯುತ್ತಿದೆ. ಒಟ್ಟಿನಲ್ಲಿ ಹೊಸ ವರ್ಷದಿಂದ ಹೊಸ ರಾಜಕೀಯ ಆಟ ನಡೆಯಲಿದೆ.

ಸಂಪುಟದಿಂದ ಕೈಬಿಟ್ಟು ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಅವರಿಗೆ 19 ಇತರ ಶಾಸಕರು ಬೆಂಬಲ ನೀಡಿದ್ದಾರೆ. ಗಾಯಗೊಂಡ ಈ ಹುಲಿಗೆ ಕೇಸರಿ ಬಾವುಟ ಬೀಸಿಬೀಸಿ ಕರೆಯುತ್ತಿದೆ. ನ್ಯೂಸ್18 ಕನ್ನಡಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಮಹಾರಾಷ್ಟ್ರದ ಕಂದಾಯ ಸಚಿವರಾದ ಚಂದ್ರಕಾಂತ್ ಬಚ್ಚೂ ಪಾಟೀಲ್ ಅವರೊಂದಿಗೆ ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿದ್ದಾರೆ. ರಮೇಶ್ ಜಾರಕಿಹೊಳಿಯಂತೆ ಚಂದ್ರಕಾಂತ್ ಕೂಡ ವಾಲ್ಮೀಕಿ ಜನಾಂಗಕ್ಕೆ ಸೇರಿದವರು. ಬಚ್ಚೂ ಪಾಟೀಲ್ ಅವರು ರಮೇಶ್ ಜಾರಕಿಹೊಳಿ ಅವರನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಭೇಟಿ ಮಾಡಿಸಿದರು. ಆಗ ರಮೇಶ್ ಜಾರಕಿಹೊಳಿ ಬಂಡಾಯದ ಆಟಕ್ಕೆ ಫಡ್ನವಿಸ್ ಗ್ರೀನ್ ಸಿಗ್ನಲ್ ಕೊಟ್ಟರೆನ್ನಲಾಗಿದೆ. ಫಡ್ನವಿಸ್ ಒಪ್ಪಿಗೆ ದೊರೆತ ಬಳಿಕ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಹಾಗೂ ಪಿಯೂಶ್ ಗೋಯಲ್ ಇಬ್ಬರೂ ಕೂಡ ಜಾರಕಿಹೊಳಿ ಜೊತೆ ಫೋನ್​ನಲ್ಲೇ ಮಾತನಾಡಿ ಎಲ್ಲವನ್ನೂ ಚರ್ಚಿಸಿದ್ದಾರೆ.

ಅತೃಪ್ತನಿಗೆ ಅತೃಪ್ತರಿಂದಲೇ ಶಾಕ್..?
ಬಿಜೆಪಿಯ ವರಿಷ್ಠರಿಂದ ಅಭಯ ದೊರೆತ ನಿರಾಳತೆಯಲ್ಲಿದ್ದ ರಮೇಶ್ ಜಾರಕಿಹೊಳಿಗೆ ತಮ್ಮ ಬೆಂಬಲಿಗರಿಂದಲೇ ಶಾಕ್ ಕಾದಿತ್ತಂತೆ. ತಮ್ಮೆಲ್ಲಾ ಬೆಂಬಲಿಗರೊಂದಿಗೆ ರಾಜೀನಾಮೆ ಕೊಟ್ಟು ಸರಕಾರ ಬೀಳಿಸಲು ಸ್ಕೆಚ್ ಹಾಕಿದ್ದ ರಮೇಶ್​ಗೆ ತಲೆ ಮೇಲೆ ಕೈಹೊತ್ತು ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ. 19 ಶಾಸಕರ ಪೈಕಿ 15 ಮಂದಿಯು ರಾಜೀನಾಮೆ ಕೊಡಲು ಸದ್ಯಕ್ಕೆ ತಯಾರಿಲ್ಲ. ರಮೇಶ್ ಜಾರಕಿಹೊಳಿ ಜೊತೆ ಯಾವುದೇ ಕ್ಷಣಕ್ಕೂ ಹೆಜ್ಜೆ ಹಾಕಲು ಸಿದ್ಧವಿರುವುದು ಕೇವಲ 4 ಮಂದಿ ಮಾತ್ರವಂತೆ.

ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಅಥಣಿ ಶಾಸಕ ಮಹೇಶ್ ಕಮಟಳ್ಳಿ ಅವರು ಮಾತ್ರ ರಮೇಶ್ ಜಾರಕಿಹೊಳಿ ಸೂಚಿಸಿದಂತೆ ನಡೆಯಲು ಬದ್ಧವಾಗಿದ್ದಾರೆನ್ನಲಾಗಿದೆ. ಇನ್ನುಳಿದ 15 ಶಾಸಕರು ಸಂಕ್ರಾಂತಿ ಹಬ್ಬದವರೆಗೆ ವಾಯಿದೆ ಕೇಳುತ್ತಿದ್ದಾರೆ.

ತಮಿಳುನಾಡು ಮಾದರಿ ತಿರುಗೇಟಿಗೆ ಕೈ ಸಜ್ಜು:
ರಮೇಶ್ ಜಾರಕಿಹೊಳಿ ಅವರ ಬಂಡಾಯದ ಆಟವನ್ನು ನಿರೀಕ್ಷಿಸಿರುವ ಕಾಂಗ್ರೆಸ್ ಪಕ್ಷವು ಅದಕ್ಕೆ ತಕ್ಕ ಪ್ಲಾನ್ ಮಾಡಿದೆ. ಒಂದು ವೇಳೆ ಜಾರಕಿಹೊಳಿ ಟೀಮ್ ರಾಜೀನಾಮೆಗೆ ಮುಂದಾದರೆ ತಮಿಳುನಾಡಿನ ಎಐಎಡಿಎಂಕೆ ಬಂಡಾಯ ಶಾಸಕರಿಗೆ ಮಾಡಿದಂತೆ ವಜಾ ಮಾಡಲು ಕಾಂಗ್ರೆಸ್ ಸಿದ್ಧವಾಗಿದೆ. ಅಲ್ಲದೇ, ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ಕೈ ಮಾಡಲು ಸಜ್ಜಾಗಿರುವ ಕಾಂಗ್ರೆಸ್ ಪಕ್ಷ ಈಗಾಗಲೇ ನಾಲ್ವರು ಬಿಜೆಪಿ ಶಾಸಕರಿಗೆ ಸಚಿವ ಸ್ಥಾನದ ಆಸೆ ನೀಡಿ ಸೆಳೆಯಲು ಪ್ರಯತ್ನಿಸಿದೆ. ಸಂಪುಟದ ಕೆಲ ಸಚಿವರು ಬಿಜೆಪಿಯ ಶಾಸಕರಿಗೆ ತಮ್ಮ ಸ್ಥಾನ ತ್ಯಾಗ ಮಾಡಲು ಸಿದ್ಧವಾಗಿದ್ದಾರಂತೆ.

ಈ ಆಟ ಪ್ರತ್ಯಾಟದಲ್ಲಿ ಸೋಲೋರು ಯಾರು? ಗೆಲ್ಲೋರು ಯಾರು? ಎಂಬುದು ಹೊಸ ವರ್ಷಕ್ಕೆ ಕುತೂಹಲ ಮೂಡಿಸಿದೆ.

Comments are closed.