ಕರ್ನಾಟಕ

ತುಮಕೂರಿನಲ್ಲಿ ಪ್ರೇಮಿಗಳು ಓಡಿ ಹೋಗಲು ಸಹಾಯ ಮಾಡಿದ್ದಾರೆಂದು ಶಂಕಿಸಿ ಮಹಿಳೆಯ ಬರ್ಬರ ಹತ್ಯೆ!

Pinterest LinkedIn Tumblr

ತುಮಕೂರು: ಪ್ರೀತಿಗೆ ಬೆಂಬಲ ನೀಡಿ ಪ್ರೇಮಿಗಳು ಓಡಿ ಹೋಗಲು ಸಹಾಯ ಮಾಡಿದ್ದಾರೆಂದು ಶಂಕಿಸಿ ದಂಪತಿ ಮೇಲೆ ಹಲ್ಲೆ ನಡೆಸಿದ ಕಾರಣ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಕ್ಲ್ಲೆ ಕೊರಟಗೆರೆಯಲ್ಲಿ ನಡೆದಿದೆ.

ಕೊರಟಗೆರೆ ತಾಲೂಕಿನ ಆವಲಯನ ಪಾಳ್ಯದ ಭಾಗ್ಯಮ್ಮ (38) ಮೃತಪಟ್ಟ ಮಹಿಳೆ ಈಕೆಯ ಪತಿ ದ್ವಾರಕಾರಾಧ್ಯ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.ಘಟನೆಯಿಂದ ಸ್ಥಳೀಯ ಜನರು ಆತಂಕಗೊಂಡಿದ್ದು ಸಮಾಜದಲ್ಲಿ ಮಾನವೀಯತೆ ಸತ್ತೇ ಹೋಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಘಟನೆ ಹಿನ್ನೆಲೆ
ಮಂಡ್ಯದ ಕೃಷ್ಣಪ್ಪ ಹಾಗೂ ಆವಲಯನ ಪಾಳ್ಯದ ವರಲಕ್ಷ್ಮೀ ಎನ್ನುವವರು ಬಹುದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.ಇವರು ಕಳೆದ ಮಂಗಳವಾರ ಊರಿನಿಂದ ಓಡಿಹೋಗಿದ್ದಾರೆ. ಈ ಸಂಬಂಧ ಯುವತಿಯ ಪೋಷಕರು ಮಗಳ ನಾಪತ್ತೆ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಮ್ಮನ ಫೋನ್ ನಿಂದ ಯುವಕ ಕೃಷ್ಣಪ್ಪನಿಗೆ ಕರೆ ಹೋಗಿತ್ತು.ಇದರಿಂದ ಯುವತಿ ಹಾಗೂ ಹುಡುಗ ಪರಾರಿಯಾಗಲು ಭಾಗ್ಯಮ್ಮ ದಂಪತಿ ಸಹಕಾರ ನೀಡಿದ್ದಾರೆ ಎನ್ನುವ ಶಂಕೆ ಯುವತಿಯ ಪೋಷಕರಲ್ಲಿ ಮನೆ ಮಾಡಿದೆ.ಇದೇ ಅನುಮಾನದಿಂದ ಭಾನುವಾರ ಮಧ್ಯಾಹ್ನ ಎಸ್ಟೇಟ್‍ಗೆ ನುಗ್ಗಿ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ.ಈ ವೇಳೆ ರಾಡ್ ಬಳಸಿಮಾರಣಾಂತಿಕವಾಗಿ ಹೊಡೆಯಲಾಗಿದೆ. ಹಲ್ಲೆಯಿಂದ ಪ್ರಜ್ಞೆ ತಪ್ಪಿದ ಭಾಗ್ಯಮ್ಮನವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ, ಆಕೆ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.ಪತಿ ದ್ವಾರಕಾರಾಧ್ಯ ಸ್ಥಿತಿ ಚಿಂತಾಜನಕವಾಗಿದೆ.

ಆವಲಯನ ಪಾಳ್ಯದ ದೀಪಕ್ ಎಂಬುವವರ ತೋಟದಲ್ಲಿ ಭಾಗ್ಯಮ್ಮ ಹಾಗೂ ದ್ವಾರಕರಾಧ್ಯ ದಂಪತಿ ಕೆಲಸ ಮಾಡುತ್ತಿದ್ದರು.

ಘಟನೆ ಸಂಬಂಧ ಪೋಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.. ಕೊರಟಗೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.

Comments are closed.