ಬೆಂಗಳೂರು: ಆಂಬಿಡೆಂಟ್ ಚಿಟ್ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ. ಅವರು ಹೇಳಿದ್ದೇನು ಎಂಬುದರ ಮಾಹಿತಿ ಇಲ್ಲಿದೆ.
ಡಿ.ಜೆ. ಹಳ್ಳಿಯಲ್ಲಿ ಆಂಬಿಡೆಂಟ್ ಹೆಸರಿನ ಸಂಸ್ಥೆ ತಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ನೀಡುವುದಾಗಿ ಹೇಳಿಕೊಂಡಿತ್ತು. ಸಾಕಷ್ಟು ಕಡೆಯಿಂದ ಹಣ ಈ ಸಂಸ್ಥೆಗೆ ಹರಿದು ಬಂದಿತ್ತು. ಈ ವೇಳೆ ಕೆಲವರಿಗೆ ಹಣ ವಾಪಾಸ್ಸು ಸಿಕ್ಕಿದೆ. ಆಗ ಅವರು ಮತ್ತೆ ಹೆಚ್ಚಿನ ಹಣ ಹೂಡಿಕೆ ಮಾಡಿದ್ದಾರೆ. ಆದರೆ ಕೆಲವರು ಹಣ ವಾಪಸ್ಸು ಸಿಗಲಿಲ್ಲ ಎಂದು ದೂರು ದಾಖಲು ಮಾಡಿದ್ದರು. ಈ ಕಾರಣಕ್ಕೆ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು.
ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮತ್ತು ಡಿಸಿಪಿ ಗಿರೀಶ್ ಈ ಪ್ರಕರಣಕ್ಕೆ ಚುರುಕು ಮುಟ್ಟಿಸಿದ್ದರು. ಈ ಮಧ್ಯೆ ಆ್ಯಂಬಿಡೆಂಟ್ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ನಾವು ಸಹಕಾರ ನೀಡುವುದಾಗಿ ಆಮಿಷವೊಡ್ಡಿ ಜನಾರ್ಧನ್ ರೆಡ್ಡಿ ಹಣ ಪಡೆದಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನು ಬೆನ್ನು ಹತ್ತಿದಾಗ ಒಂದಷ್ಟು ಮಾಹಿತಿ ಲಭ್ಯವಾಗಿತ್ತು.
ಆಂಬಿಡೆಂಟ್ ಸಂಸ್ಥೆಯ ಮುಖ್ಯಸ್ಥ ಫರೀದ್, ಅಂಬಿಕಾ ಆಭರಣದಂಗಡಿ ಮಾಲೀಕ ರಮೇಶ್ ಕೊಟಾರಿ ಅವರಿಗೆ 18 ಕೋಟಿ ರೂ. ವರ್ಗಾವಣೆ ಮಾಡಿದ್ದ. ಈ ಹಣ ಪಡೆದ ರಮೇಶ್ ಬಳ್ಳಾರಿ ಮೂಲದ ರಾಜ್ಮಹಲ್ ಚಿನ್ನಾಭರಣ ಅಂಗಡಿಗೆ ಬರೋಬ್ಬರಿ 57 ಕೆ.ಜಿ ಚಿನ್ನದ ಗಟ್ಟಿ ನೀಡಿದ್ದ. ರಾಜ್ಮಹಲ್ ಚಿನ್ನಾಭರಣ ಅಂಗಡಿ ಮಾಲೀಕ ಜನಾರ್ದನ್ ರೆಡ್ಡಿ ಆಪ್ತ ಆಲಿಖಾನ್ಗೆ ಈ ಚಿನ್ನದ ಗಟ್ಟಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿ ಮುಂದಿನ ಮಾಹಿತಿ ನೀಡುತ್ತೇವೆ ಎಂದು ಟಿ. ಸುನೀಲ್ ಕುಮಾರ್ ತಿಳಿಸಿದರು.
ಜನಾರ್ದನ್ ರೆಡ್ಡಿ ಅವರನ್ನು ಬಂಧಿಸುವ ಅಗತ್ಯಬಿದ್ದರೆ ನಾವು ಅವರನ್ನು ಬಂಧಿಸುತ್ತೇವೆ. ಈ ಪ್ರಕರಣಕ್ಕೆ ಅಗತ್ಯವಿರುವ ಮಾಹಿತಿ ಕಲೆ ಹಾಕುತ್ತಿದ್ದೇವೆ. ಆಂಬಿಡೆಂಟ್ ಸಂಸ್ಥೆ ಮೇಲೆ ನಡೆದ ಇಡಿ ದಾಳಿ ವೇಳೆ ಏನೆಲ್ಲ ಆಗಿತ್ತು ಎಂಬುದರ ಕುರಿತೂ ತನಿಖೆ ನಡೆಸುತ್ತೇವೆ. ನಂತರ ಆ ಬಗ್ಗೆ ಮಾಹಿತಿ ನೀಡುತ್ತೇವೆ, ಎಂದು ಸುನೀಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏನಿದು ಪ್ರಕರಣ: ಆಂಬಿಡೆಂಟ್ ಹೆಸರಿನ ಚಿಟ್ಫಂಡ್ ಸಂಸ್ಥೆಯಲ್ಲಿ ನೂರಾರು ಕೋಟಿ ಅಕ್ರಮ ನಡೆದಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಆಂಬಿಡೆಂಟ್ ಮೇಲೆ ದಾಳಿ ನಡೆಸಿತ್ತು. ಈ ಪ್ರಕರಣ ಮುಚ್ಚಿ ಹಾಕಲು ಜನಾರ್ದನ್ ರೆಡ್ಡಿ ಸಹಾಯ ಮಾಡುವುದಾಗಿ ಸಂಸ್ಥೆಯ ಮುಖ್ಯಸ್ಥ ಫರೀದ್ಗೆ ಆಶ್ವಾಸನೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಹಣ ನೀಡುವುದಾಗಿ ಫರೀದ್ ಹೇಳಿದ್ದಾರೆ ಎನ್ನಲಾಗಿದೆ. ಈಗ ಜನಾರ್ದನ್ ಆಪ್ತ ಕಾರ್ಯದರ್ಶಿ ಆಲಿಖಾನ್ಗೆ ಫರೀದ್ 57 ಕೆ.ಜಿ. ಚಿನ್ನ ನೀಡಿರುವುದು ಸಾಕಷ್ಟು ಅನುಮಾನ ಸೃಷ್ಟಿಸಿದೆ. ಈ ಸಂಬಂಧ ಜನಾರ್ದನ್ರನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
Comments are closed.