ಕರ್ನಾಟಕ

57 ಕೆ.ಜಿ ಚಿನ್ನದ ಗಟ್ಟಿ ವ್ಯವಹಾರ; ತಲೆಮರೆಸಿಕೊಂಡಿರುವ ಜನಾರ್ಧನ ರೆಡ್ಡಿ, ಆಲಿಖಾನ್‌ ಪತ್ತೆಗಾಗಿ ನಾಲ್ಕು ವಿಶೇಷ ತಂಡ

Pinterest LinkedIn Tumblr

ಬೆಂಗಳೂರು: ಅಮಾನ್ಯೀಕರಣಗೊಂಡ ನೋಟು ವರ್ಗಾವಣೆ ಹಾಗೂ 57 ಕೆ.ಜಿ ಚಿನ್ನದ ಗಟ್ಟಿ ಖರೀದಿಸಿರುವ ಪ್ರಕರಣದ ವ್ಯವಹಾರದಲ್ಲಿ ಭಾಗಿಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಆಲಿಖಾನ್ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಪ್ರಕರಣದಲ್ಲಿ ಮಾಜಿ ಸಚಿವ ಸಚಿವ ಗಾಲಿ ಜನಾರ್ಧನ ರೆಡ್ಡಿ ವಿಚಾರಣೆ ನಡೆಸಬೇಕಿದೆ. ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಸುನೀಲ್ ಕುಮಾರ್‌ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವ ಜನಾರ್ದನ ರೆಡ್ಡಿ ಮತ್ತು ಆಲಿಖಾನ್‌ಗಾಗಿ ಪತ್ತೆಗಾಗಿ ಮಂಜುನಾಥ್ ಚೌಧರಿ ಅವರ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಆಯುಕ್ತ ತಿಳಿಸಿದ್ದಾರೆ.

ಅಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ಈ ವರ್ಷದ ಆರಂಭದಲ್ಲಿ ಅಂಬಿಡೆಂಟ್ ಕಚೇರಿ ಮೇಲೆ ದಾಳಿ ನಡೆಸಿತ್ತು.ತನ್ನನ್ನು ಜಾರಿ ನಿರ್ದೇಶನಾಲಯ ಕೇಸ್ ನಿಂದ ಬಚಾವ್ ಮಾಡುವಂತೆ ಅಂಬಿಡೆಂಟ್ ಕಂಪನಿ ಮಾಲೀಕ ಫರೀದ್, ಪರಿಚಿತ ಬಿಲ್ಡರ್ ಬ್ರಜೇಶ್ ಮೂಲಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯನ್ನು ಭೇಟಿ ಮಾಡಿಸಿದ್ದ.

ಭೇಟಿ ವೇಳೆ ಇ.ಡಿ ಕೇಸ್ ಡೀಲ್ ಕುದುರಿಸಲು ಒಪ್ಪಂದ ಆಗಿದ್ದು, ಅದಕ್ಕಾಗಿ ಫರೀದ್ ತನ್ನ ಕಂಪನಿಯ ಖಾತೆಯಿಂದ ಬೆಂಗಳೂರಿನ ಆಭರಣ ಮಳಿಗೆ ಮಾಲೀಕನೊಬ್ಬನಿಗೆ 18 ಕೋಟಿ ರೂ‌. ವರ್ಗಾಯಿಸಿದ್ದ. ಆತ, ಬಳ್ಳಾರಿಯ ಆಭರಣ ಮಾಲೀಕ ರಮೇಶನಿಗೆ 18 ಕೋಟಿ ರೂ. ಹಣವನ್ನು ಬ್ಯಾಂಕ್ ಖಾತೆ ಮೂಲಕ ವರ್ಗಾಯಿಸಿದ್ದ. ಅಲ್ಲಿ ಹಣಕ್ಕೆ ಬದಲಾಗಿ 57 ಕೆ.ಜಿ ಚಿನ್ನವನ್ನು ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಗೆ ನೀಡಿದ್ದ ಎಂಬ ಆರೋಪ ಇದೆ. ಹಣ ವರ್ಗಾವಣೆ ಆಗಿರುವುದಕ್ಕೆ ದಾಖಲೆ ಇದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಏನಿದು ಪ್ರಕರಣ?
ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ ಅಹಮದ್ ಫರೀದ್ ಎಂಬ ಆರೋಪಿ ಸಾರ್ವಜನಿಕರಿಗೆ 4 ತಿಂಗಳ ಅವಧಿಗೆ ಶೇ.40ರಿಂದ ಶೇ.50 ಬಡ್ಡಿ ಹಣ ನೀಡುವುದಾಗಿ ನಂಬಿಸಿ ವಂಚಿಸಿರುತ್ತಾನೆ. 600 ಕೋಟಿ ರೂ.ಗೂ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು ಸುಮಾರು 15 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾನೆ. ಈ ಸಂಬಂಧ ಡಿ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ಈ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸ್ ವಿಶೇಷ ತಂಡ ಆರೋಪಿ ಸೈಯದ್ ಅಹಮದ್ ಫರೀದ್‌ರನ್ನು ಬಂಧಿಸಿತ್ತು. ವಿಚಾರಣೆಯಲ್ಲಿ ಸಾರ್ವಜನಿಕರಿಂದ ಕೋಟ್ಯಾಂತರ ರೂ. ಹಣ ಸಂಗ್ರಹಿಸಿ ಹಲವಾರು ಜನರ ಬಳಿ ಹೂಡಿಕೆ ಮಾಡಿರುವ ಹಾಗೂ ಅಕ್ರಮ ಹಣಕಾಸಿನ ವ್ಯವಹಾರದಲ್ಲಿ ತೊಡಗಿಕೊಂಡಿರುವುದು ಗೊತ್ತಾಗಿ ಜಾರಿ ನಿರ್ದೇಶನಾಯಲದಿಂದ (ಇ.ಡಿ) ದಾಳಿ ನಡೆದು ವ್ಯವಹಾರವನ್ನು ಸ್ಥಗಿತಗೊಳಿಸಲಾಗಿತ್ತು.

ಇ.ಡಿಯಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಸಹಾಯ ಕೋರಿ ಜನಾರ್ದನ ರೆಡ್ಡಿ ಮತ್ತವರ ಆಪ್ತ ಆಲಿಖಾನ್ ಜತೆಗೆ ಸಭೆ ನಡೆಸಿ ಇದಕ್ಕಾಗಿ 20 ಕೋಟಿ ರೂ. ಹಣವನ್ನು ನೀಡುವುದಾಗಿ ಮಾತುಕತೆ ಮಾಡಿರುತ್ತಾರೆ. 20 ಕೋಟಿ ರೂ. ಹಣವನ್ನು ಚಿನ್ನದ ರೂಪದಲ್ಲಿ ನೀಡುವಂತೆ ಜನಾರ್ದನ ರೆಡ್ಡಿ ಷರತ್ತು ವಿಧಿಸಿದ್ದರು.

ಜನಾರ್ದನ ರೆಡ್ಡಿ ಆಪ್ತನಿಗೆ ಪರಿಚಯವಿದ್ದ ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜ್ಯುವೆಲ್ಲರ್ಸ್‍ನ ರಮೇಶ್ ಎಂಬುವವರ ಮೂಲಕ ಸೈಯದ್ ಅಹಮ್ಮದ್ ಫರೀದ್ ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾರ್ಪೊರೇಷನ್‍ನ ರಮೇಶ್ ಕೊಠಾರಿ ಬಳಿ 18 ಕೋಟಿ ರೂ. ಮೊತ್ತದ 57 ಕೆ.ಜಿ ಖರೀದಿ ಖರೀದಿಸಿ ಜನಾರ್ದನ ರೆಡ್ಡಿಗೆ ತಲುಪಿಸಿರುವ ಅಂಶ ತನಿಖೆಯಲ್ಲಿ ಗೊತ್ತಾಗಿದೆ. ಬಳ್ಳಾರಿಯ ರಾಜ್‌ಮಹಲ್ ಫ್ಯಾನ್ಸಿ ಜುವೆಲ್ಲರ್‌ನ ರಮೆಶ್‌ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Comments are closed.