ಕರ್ನಾಟಕ

ಜೀವನಾಂಶಕ್ಕೆ ಮದುವೆಯ ಸಾಕ್ಷ್ಯ ಕೊಡ ಬೇಕಿಲ್ಲ: ಸುಪ್ರೀಂ

Pinterest LinkedIn Tumblr


ಬೆಂಗಳೂರು: ಕೌಟುಂಬಿಕ ಪ್ರಕರಣಗಳಲ್ಲಿ ಅಪರಾಧ ದಂಡ ಸಂಹಿತೆ ಸೆಕ್ಷನ್‌ 125ರಡಿ ಪತ್ನಿಗೆ ಜೀವನಾಂಶ ನೀಡುವಾಗ ಮದುವೆ ಆಗಿದೆ ಎಂಬುದಕ್ಕೆ ಪಕ್ಕಾ ಸಾಕ್ಷ್ಯ ನೀಡುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಮೈಸೂರಿನ ಪ್ರಕರಣವೊಂದರಲ್ಲಿ ಮದುವೆಗೆ ಸಾಕ್ಷ್ಯ ಒದಗಿಸಿಲ್ಲವೆಂಬ ಕಾರಣಕ್ಕೆ ಜೀವನಾಂಶ ನೀಡಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿ, ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ.

ಕಮಲ ವರ್ಸಸ್‌ ಎಂ.ಆರ್‌.ಮೋಹನ್‌ ಕುಮಾರ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌, ಮೌಖಿಕ ಹಾಗೂ ದಾಖಲೆಯ ಸಾಕ್ಷ್ಯಗಳನ್ನು ಗಮನಿಸಿ ಕೌಟುಂಬಿಕ ನ್ಯಾಯಾಲಯ ಅವರ ನಡುವೆ ಮದುವೆ ನಡೆದಿದೆ ಎಂಬ ನಿರ್ಧಾರಕ್ಕೆ ಬಂದಿದೆ. ಮೇಲ್ಮನವಿ ಆಲಿಸುವ ಅಧಿಕಾರ ಹೊಂದಿರುವ ಹೈಕೋರ್ಟ್‌,ಸಾಕ್ಷ್ಯಗಳನ್ನು ಮರು ಮೌಲ್ಯಮಾಪನ ಮಾಡುವ ಹಾಗೂ ಕೌಟುಂಬಿಕ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾದ ಅಭಿಪ್ರಾಯಕ್ಕೆ ಬರುವ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಪ್ರಕರಣದಲ್ಲಿ ಕಮಲ ಹಾಗೂ ಮೋಹನ್‌ ಕುಮಾರ್‌ ನಡುವೆ ಗಂಡ-ಹೆಂಡತಿ ಸಂಬಂಧವಿತ್ತುಮತ್ತು ಅದರ ಪರಿಣಾಮ ಅವರಿಗೆ ಮಕ್ಕಳಾಗಿವೆ. ಹಾಗಾಗಿ ಕೌಟುಂಬಿಕ ನ್ಯಾಯಾಲಯ, ಪತ್ನಿಗೆ ಜೀವನಾಂಶ ನೀಡುವಂತೆ ಆದೇಶಿಸಿತ್ತು.ಆದರೆ ಮರುಪರಿಶೀಲನಾ ಅರ್ಜಿ ಆಲಿಸಿದ ಹೈಕೋರ್ಟ್‌, ‘ಮೋಹನ್‌ ಕುಮಾರ್‌ ಜೊತೆ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ನಡೆದಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಪತ್ನಿ ವಿಫಲವಾಗಿದ್ದಾಳೆ. ಹಾಗಾಗಿ ಆಕೆ ಕಾನೂನು ಬದ್ಧ ಪತ್ನಿ, ಆಕೆಗೆ ಜೀವನಾಂಶ ಪಡೆಯುವ ಹಕ್ಕಿಲ್ಲವೆಂದು’ ಆದೇಶ ನೀಡಿರುವುದನ್ನು ಒಪ್ಪಲು ಸಾಧ್ಯವೇ ಇಲ್ಲವೆಂದು ಸುಪ್ರೀಂಕೋರ್ಟ್‌ ಹೇಳಿದೆ.

”ಮಕ್ಕಳ ಶೈಕ್ಷಣಿಕ ದಾಖಲೆಗಳಲ್ಲಿ ತಂದೆ ಹೆಸರಿನ ಜಾಗದಲ್ಲಿ ಮೋಹನ್‌ ಕುಮಾರ್‌ ಹೆಸರಿದೆ. ಜೊತೆಗೆ ಮನೆ ಬಾಡಿಗೆ ನೀಡಿದವರು, ಆತನ ಸಹೋದ್ಯೋಗಿಗಳು ಕಮಲ ಮತ್ತು ಮೋಹನ್‌ ಗಂಡ-ಹೆಂಡತಿಯಂತಿದ್ದರೆಂದು ಸಾಕ್ಷ ್ಯ ನುಡಿದಿದ್ದಾರೆ. ಆದಾಗ್ಯೂ, ಹೈಕೋರ್ಟ್‌ ಜೀವನಾಂಶ ನೀಡಬೇಕೆನ್ನುವ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಮಾಡಿರುವುದು ಸಮಂಜಸವಲ್ಲ,” ಎಂದು ಆದೇಶ ನೀಡಿದೆ.

ಚನ್‌ಮುನಿಯಾ ಮತ್ತು ವಿರೇಂದ್ರ ಕುಮಾರ್‌ ಸಿಂಗ್‌ ಕುಶ್ವಾ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 125ರಲ್ಲಿ ‘ಹೆಂಡತಿ ಅಥವಾ ಪತ್ನಿ’ಎಂಬ ಪದಕ್ಕೆ ನೀಡಿರುವ ವ್ಯಾಖ್ಯಾನವನ್ನು ನ್ಯಾಯಪೀಠ ಉಲ್ಲೇಖಿಸಿದೆ. ”ಪತ್ನಿ ಎಂದರೆ ಕಾನೂನು ಬದ್ಧವಾಗಿ ವಿವಾಹವಾಗಿರುವ ಮಹಿಳೆ ಮಾತ್ರವಲ್ಲ, ಪುರುಷ ಹಾಗೂ ಮಹಿಳೆ ದೀರ್ಘಕಾಲ ಜೊತೆ ಬಾಳ್ವೆ ನಡೆಸಿದರೂ ಸಹ ಜೀವನಾಂಶ ವಿಚಾರ ಬಂದಾಗ ಆಕೆಯನ್ನು ಪತ್ನಿ ಎಂದು ಪರಿಗಣಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಮದುವೆಗೆ ಪಕ್ಕಾ ದಾಖಲೆ ಕೇಳಿದರೆ, ಸೆಕ್ಷನ್‌ 125ರ ಉದ್ದೇಶವೇ ಸಫಲವಾಗುವುದಿಲ್ಲ . ಹಾಗಾಗಿ ನ್ಯಾಯಾಲಯಗಳು ಸಂವಿಧಾನದಲ್ಲಿ ಅಡಕವಾಗಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆ ಎತ್ತಿಹಿಡಿಯಬೇಕು,ದಾಖಲೆ ಇಲ್ಲವೆಂದು ಜೀವನಾಂಶ ನೀಡದಿರುವುದು ಸರಿಯಲ್ಲ,” ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ವಿವರ

1998ರ ಜು.18ರಂದು ಶ್ರೀರಂಗಪಟ್ಟಣದ ಕರಿಘಟ್ಟ ದೇವಾಲಯದ ಬಳಿ ಕಮಲ ಮತ್ತು ಎಂ.ಆರ್‌.ಮೋಹನ್‌ಕುಮಾರ್‌ ನಡುವೆ ಮದುವೆಯಾಗಿತ್ತು. ನಂತರ ಪತ್ನಿ 2001ರಲ್ಲಿ ಪುತ್ರಿ ಹಾಗೂ ಪುತ್ರನಿಗೆ ಜನ್ಮ ನೀಡಿದ್ದರು. ಸ್ವರಸ್ವತಿಪುರಂ ಬಾಡಿಗೆ ಮನೆಯಲ್ಲಿ ಅವರು ನೆಲೆಸಿದ್ದರು. 2005ರಲ್ಲಿ ಮೋಹನ್‌ ಕುಮಾರ್‌ ತನ್ನ ಸಹೋದ್ಯೋಗಿ ಅರ್ಚನಾ ಎಂಬುವರನ್ನು 2ನೇ ವಿವಾಹವಾದರು.ಆನಂತರ ಮೊದಲ ಪತ್ನಿ ಹಾಗೂ ಮಕ್ಕಳನ್ನು ಆತ ನಿರ್ಲಕ್ಷ್ಯಸುತ್ತಾ ಬಂದ. ಸ್ವಲ್ಪ ದಿನ ನೋಡಿದ ಪತ್ನಿ ಪೊಲೀಸರಿಗೆ ದೂರು ನೀಡಿದರು. ಆಗ ಪೊಲೀಸರು ನಿರ್ದೇಶನದ ಮೇರೆಗೆ ಮೋಹನ್‌ ಕುಮಾರ್‌, ಕಮಲರಿಗೆ ತಿಂಗಳಿಗೆ 3ಸಾವಿರ ರೂ. ಜೀವನಾಂಶ ನೀಡುತ್ತಿದ್ದರು. ನಂತರ ಕಮಲ ಚಾಮುಂಡಿಪುರಂಗೆ ಸ್ಥಳಾಂತರಗೊಂಡರು. ಆಗಲೂ ಪತಿ ಆಕೆ ಮತ್ತು ಮಕ್ಕಳ ಬಗ್ಗೆ ಯಾವುದೇ ನಿಗಾ ಇಡುತ್ತಿರಲಿಲ್ಲ. ಜೀವನಾಂಶ ನೀಡುವುದನ್ನೂ ನಿಲ್ಲಿಸಿದ್ದರು.

ನಂತರ ಕಮಲ ಬೇರೆ ದಾರಿ ಇಲ್ಲದೆ, ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು. ಆಗ ಮಕ್ಕಳ ಶಾಲಾ ದಾಖಲೆಗಳಲ್ಲಿ ತಂದೆ ಹೆಸರಿನ ಜಾಗದಲ್ಲಿ ಮೋಹನ್‌ಕುಮಾರ್‌ ಹೆಸರಿತ್ತು. ಜೊತೆಗೆ ಮನೆ ಬಾಡಿಗೆ ನೀಡಿದ್ದ ಮಾಲೀಕರು ಮತ್ತು ಮೋಹನ್‌ ಸಹೋದ್ಯೋಗಿಗಳೇ, ಮೋಹನ್‌ ಮತ್ತು ಕಮಲ ಗಂಡ-ಹೆಂಡತಿಯಂತೆ ಬಾಳ್ವೆ ನಡೆಸುತ್ತಿದ್ದರೆಂದು ಹೇಳಿದ್ದರು. ಈ ಸಾಕ್ಷ್ಯಗಳನ್ನು ಗಮನಿಸಿದ್ದ ಕೌಟುಂಬಿಕ ನ್ಯಾಯಾಲಯ, 2008ರಲ್ಲಿ ಪ್ರತಿ ತಿಂಗಳು 2500 ರೂ. ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದ ಪತಿ, ಮದುವೆ ಆಗಿರುವುದಕ್ಕೆ ಯಾವುದೇ ಗುರುತರ ಸಾಕ್ಷ್ಯವಿಲ್ಲ, ಹಾಗಾಗಿ ಜೀವನಾಂಶ ನೀಡಲಾಗದು ಎಂದು ವಾದಿಸಿದ್ದರು. ಹೈಕೋರ್ಟ್‌ ಆ ವಾದ ಪುರಸ್ಕರಿಸಿತ್ತು. ಆದರೆ ಸುಪ್ರೀಂಕೋರ್ಟ್‌ ಈಗ ಪತಿರಾಯನಿಗೆ, 2009ರಿಂದ ಇಲ್ಲಿಯವರೆಗೆ ಬಾಕಿ ಸೇರಿಸಿ ಜೀವನಾಂಶ ನೀಡುವಂತೆ ಆದೇಶಿಸುವ ಮೂಲಕ ದೊಡ್ಡ ಆಘಾತ ನೀಡಿದೆ.

ತೀರ್ಪಿನ ವಿಶೇಷತೆ
ಸುಪ್ರೀಂಕೋರ್ಟ್‌ ಇಬ್ಬರು ಮಹಿಳಾ ನ್ಯಾಯಮೂರ್ತಿಗಳೇ ಈ ತೀರ್ಪು ನೀಡಿರುವುದು ಮತ್ತೊಂದು ವಿಶೇಷತೆ. ಪ್ರಕರಣದ ವಾದ-ಪ್ರತಿವಾದ ಆಲಿಸಿ, ಹಿಂದಿನ ತೀರ್ಪುಗಳನ್ನು ಅವಲೋಕಿಸಿ ನ್ಯಾಯಮೂರ್ತಿಗಳಾದ ಆರ್‌.ಬಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ತೀವ್ರ ಪರಿಣಾಮ ಬೀರುವಂತಹ ತೀರ್ಪು ಕೊಟ್ಟಿದ್ದಾರೆ.

*ಪುರುಷ-ಮಹಿಳೆ ದೀರ್ಘಕಾಲ ಬಾಳ್ವೆ ನಡೆಸಿದರೂ ಜೀವನಾಂಶಕ್ಕೆ ಪರಿಗಣನೆ
*ಮದುವೆಗೆ ಪಕ್ಕಾ ದಾಖಲೆ ಕೇಳಿದರೆ ಸೆಕ್ಷನ್‌ 125ರ ಉದ್ದೇಶವೇ ವಿಫಲ

ಇಷ್ಟು ಸಾಕ್ಷ್ಯ ಸಾಕು
ಮಕ್ಕಳ ಶಾಲಾ ದಾಖಲೆಗಳಲ್ಲಿ ತಂದೆ ಹೆಸರು
ಮನೆ ಬಾಡಿಗೆ ನೀಡಿದ್ದ ಮಾಲೀಕರ ಹೇಳಿಕೆ
ಸಹೋದ್ಯೋಗಿಗಳು ನೀಡುವ ಸಾಕ್ಷ್ಯ.

ಮದುವೆಗೆ ಸಾಕ್ಷ್ಯ ಒದಗಿಸಿಲ್ಲವೆಂದು ಜೀವನಾಂಶ ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶ ರದ್ದು

ಕೌಟುಂಬಿಕ ಕೋರ್ಟ್‌
ಮೌಖಿಕ ಹಾಗೂ ದಾಖಲೆಯ ಸಾಕ್ಷ್ಯಗಳ ಪ್ರಕಾರ ಮೋಹನ್‌ ಮತ್ತು ಕಮಲ ಗಂಡ-ಹೆಂಡತಿಯಂತೆ ಬಾಳ್ವೆ ನಡೆಸುತ್ತಿದ್ದಾರೆ. ಮನೆ ಮಾಲೀಕರು ಮತ್ತು ಮೋಹನ್‌ ಮಿತ್ರರ ಸಾಕ್ಷಿಯೂ ಇದೆ. ತಿಂಗಳಿಗೆ 2500ಜೀವನಾಂಶ ನೀಡಲು ಆದೇಶ.

ಹೈಕೋರ್ಟ್‌ ಹೇಳಿದ್ದೇನೆ
ಮದುವೆ ಆಗಿರುವುದಕ್ಕೆ ಯಾವುದೇ ಗುರುತರ ಸಾಕ್ಷ್ಯವಿಲ್ಲ. ಜೀವನಾಂಶ ನೀಡುವುದಿಲ್ಲ ಎಂಬ ಅರ್ಜಿದಾರರ ವಾದ ಸರಿ ಇದೆ.

Comments are closed.