ಕರ್ನಾಟಕ

ಉಪಚುನಾವಣೆ: ಬಳ್ಳಾರಿಯಲ್ಲಿ ಯಡಿಯೂರಪ್ಪ ಅಬ್ಬರ

Pinterest LinkedIn Tumblr


ಬಳ್ಳಾರಿ: ಗಣಿನಾಡು ಲೋಕ ಕದನದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರಕ್ಕೆ ಡಿಕ್ಕಿ ಕೊಡುವಂತೆ ಇಂದು ಶನಿವಾರ ಸಂಡೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭರ್ಜರಿ ಪ್ರಚಾರ ಮಾಡಿದರು. ಇಲ್ಲಿಯವರೆಗೆ ಮಾಜಿ ಸಿಎಂ ಸಿದ್ರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡೇ ಆಗಮಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಬಿಜೆಪಿ ಅಭ್ಯರ್ಥಿ ಜೆ ಶಾಂತ ಪರ ಅಣ್ಣ ಶಾಸಕ ಬಿ ಶ್ರೀರಾಮುಲು ಮಾತ್ರ ಏಕಾಂಗಿಯಾಗಿ ಪ್ರಚಾರ ಮಾಡುತ್ತಿದ್ದರು. ಆದರಿಂದು ಯಡಿಯೂರಪ್ಪ ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸದ ಪ್ರಚಾರ ಸಭೆಯಲ್ಲಿ ಕೈ ನಾಯಕರ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.

ಯಡಿಯೂರಪ್ಪನವರು ಶಿವಮೊಗ್ಗ ಸೇರಿದಂತೆ ಉಳಿದ ಕಡೆ ಪ್ರಚಾರ ಮಾಡುತ್ತಿದ್ದರಿಂದ ಬಳ್ಳಾರಿಗೆ ಇಲ್ಲಿಯವರೆಗೆ ಬರಲಾಗಿದ್ದಿಲ್ಲ. ಒಂದು ದಿನಕ್ಕೆ ಮೊಟುಕುಗೊಳಿಸಿದ್ದ ಬಳ್ಳಾರಿ ಪ್ರವಾಸವನ್ನು ಯಡಿಯೂರಪ್ಪ ನಾಳೆಯೂ ಪ್ರಚಾರ ಮಾಡಲಿದ್ದಾರೆ. ಪ್ರಚಾರದ ಸಭೆಯಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಹಾಗೂ ಸಚಿವ ಡಿಕೆಶಿ ವಿರುದ್ಧ ಬಿಎಸ್​ವೈ ಹರಿಹಾಯ್ದರು.

“ಕಾಂಗ್ರೆಸ್​ನವರು ಬಾಳ ಹಗುರವಾಗಿ ಮಾತಾಡ್ತಿದ್ದಾರೆ. ಶ್ರೀರಾಮುಲು ಅವರಿಗೆ 420 ಅಂತೀರಾ ಸಿದ್ದರಾಮಯ್ಯ. ವಾಲ್ಮೀಕಿ ಜನಾಂಗ ನೀವು ರಾಮುಲು ಮತ್ತು ಶಾಂತಾ ಅವರನ್ನ ಬಿಟ್ಟುಕೊಡಲ್ಲ ಅಂತಾ ಶಪಥ ಮಾಡಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶನಿ, ರಾಹು, ಕೇತು ಸೋಲಿಸಿದವು ಅಂದ್ರಿ. ಅದೇ ಶನಿ, ರಾಹು, ಕೇತು ನಿಮ್ಮ ಜೊತೆಯೇ ಓಡಾಡ್ತಿದ್ದೀರಲ್ಲ. ನಾವೀಗಾಗ್ಲೇ ಶಿವಮೊಗ್ಗ ಗೆದ್ದಿದ್ದೇವೆ. ಉಪಚುನಾವಣೆಯ ನಂತರ ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ ನೋಡಲ್ಲ” ಎಂದು ಯಡಿಯೂರಪ್ಪ ಟೀಕಿಸಿದರು.

ಬಿಜೆಪಿಯನ್ನು ಗೆಲ್ಲಿಸಲೆಂದೇ ಡಿಕೆ ಶಿವಕುಮಾರ್ ಬಂದಿದ್ದಾರೆಂದು ಹೇಳಿದ ಯಡಿಯೂರಪ್ಪ, “ಶ್ರೀರಾಮುಲು ಅವರೇ ನೀವು ಡಿಕೆಶಿ ವಿರುದ್ದವಾಗಿ ಮಾತನಾಡಬೇಡಿ. ಶಾಂತಾ ಅವರನ್ನು ಗೆಲ್ಲಿಸಲೆಂದೇ ಬಂದಿದ್ದಾರೆ. ಶ್ರೀರಾಮುಲು ಅವರಿಗೆ ಕಾನೂನು ಗೊತ್ತಿಲ್ಲ ಅಂತೀರಾ? ಅವರಿಗೆ ಜನರ ಹೃದಯದ ಕಾನೂನು ಅರಿವಿದೆ. ಬಳ್ಳಾರಿ ಜಿಲ್ಲೆಗೆ ಕಾಂಗ್ರೆಸ್ ನವರು ಏನು ಮಾಡಿದ್ದೀರಿ ಅಂತಾ ಪಟ್ಟಿ ಕೊಡಿ” ಎಂದು ಸವಾಲು ಹಾಕಿದರು.

ಇನ್ನು, ಶ್ರೀರಾಮುಲು ಮಾತನಾಡಿ, “ಕಾಂಗ್ರೆಸ್​ನವರು ಅನ್​ಪಾರ್ಲಿಮೆಂಟ್ ಭಾಷೆಯನ್ನು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಭಾಷೆ ಬಳಸುವಾಗ ನಾಲಿಗೆ ಮೇಲೆ ಹಿಡಿತವಿರಲಿ. 371ಜೆ ಕಲಂ ಜಾರಿಗೆ ತರಲು ಉಪವಾಸ ಹೋರಾಟ ಮಾಡಿದ್ದೇನೆ. ದಾಖಲೆಯನ್ನು ತೆಗೆದುನೋಡಿ. ನನಗೆ 420 ಕೇಸ್ ಗೊತ್ತಿಲ್ಲ ನನಗೆ ಗೊತ್ತಿರೋದು ಅಂಬೇಡ್ಕರ್ ಬರೆದ ಸಂವಿಧಾನ ಮಾತ್ರ. ಡಿಕೆಶಿ ನೀವು ನಿನ್ನೆ ಮೊನ್ನೆ ರೊಕ್ಕ ನೋಡೀರಿ. ನಿನ್ನಂತಹ ನೂರು ಡಿಕೆಶಿ ಬಂದ್ರೂ ಬಳ್ಳಾರಿ ಜನತೆ ನಮ್ಮ ಪರವಾಗಿದ್ದಾರೆ. ನೀನೇನು ಅಷ್ಟು ದೊಡ್ಡ ಶ್ರೀಮಂತನೋ..? ನಿನಗಿಂತ ಮುಂಚೆಯೇ ಬಳ್ಳಾರಿ ಜನತೆ ರೊಕ್ಕ ನೋಡಿದ್ದಾರೆ. 6 ತಿಂಗಳಲ್ಲಿ ಎಷ್ಟು ಬಾರಿ ಬಳ್ಳಾರಿಗೆ ಬಂದಿದ್ದೀರಿ? ಮುಂದಿನ ಲೋಕಸಭಾ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತೆ” ಎಂದು ಭವಿಷ್ಯ ನುಡಿದರು.

ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ಸಿಟಿ ರವಿ, ವಿ. ಸೋಮಣ್ಣ ಕಾಂಗ್ರೆಸ್ ನಾಯಕರ ವಿರುದ್ಧ ಬಳ್ಳಾರಿಯಲ್ಲಿ ಪ್ರಚಾರದ ವೇಳೆ ವಾಗ್ದಾಳಿ ನಡೆಸಿದರು.

ಡಿಕೆಶಿಯಿಂದ ಲಿಂಗಾಯತ ಮುಖಂಡರ ಸಭೆ:
ಇತ್ತ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಗ್ರಪ್ಪ ಪರವಾಗಿ ಮಾಜಿ ಸಚಿವೆ ಉಮಾಶ್ರಿ ಬಳ್ಳಾರಿ ನಗರದಲ್ಲಿ ರೋಡ್ ಷೋ ನಡೆಸಿದರು. ಸಚಿವ ಯುಟಿ ಖಾದರ್, ಅಭ್ಯರ್ಥಿ ಉಗ್ರಪ್ಪ ಮತಯಾಚನೆ ಮಾಡಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಭರ್ಜರಿ ಡ್ಯಾನ್ಸ್ ಮಾಡಿದರು. ಇನ್ನು, ಟ್ರಬಲ್ ಶೂಟರ್ ಸಚಿವ ಡಿಕೆ ಶಿವಕುಮಾರ್ ಬಳ್ಳಾರಿ ಜಿಲ್ಲೆಯ ಲಿಂಗಾಯತ ಮತಗಳ ಸೆಳೆಯಲು ಆ ಸಮುದಾಯದ ಮುಖಂಡರ ಸಭೆ ಕರೆದಿದ್ದರು. ಸಿರಿಗೇರಿ ಪನ್ನರಾಜ್ ನಿವಾಸದಲ್ಲಿ ಜರುಗಿದ ವೀರಶೈವ ಲಿಂಗಾಯತ ಸಭೆಯಲ್ಲಿ ಎಂಎಲ್​ಸಿ ಅಲ್ಲಂ ವೀರಭದ್ರಪ್ಪ ಸೇರಿದಂತೆ ಲಿಂಗಾಯತ ಮುಖಂಡರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, “ಬಳ್ಳಾರಿಯ ಅಲ್ಲಂ ಕುಟುಂಬದ ನೆನಪಿನ ಗಡಗಿ ಚೆನ್ನಪ್ಪ ವೃತ್ತ ಹೊಡೆದುಹಾಕಲಾಯಿತು. ಆ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ರೆಡ್ಡಿ ಸಹೋದರರು, ಶ್ರೀರಾಮುಲು ಸಚಿವರಾಗಿದ್ದರು. ಗಡಗಿ ಚನ್ನಪ್ಪ ವೃತ್ತ ಯಾಕೆ ಒಡೆಯಲಾಯಿತು ಎಂದು ಬಿಎಸ್ ಯಡಿಯೂರಪ್ಪ ಒಮ್ಮೆಯೂ ಪ್ರಶ್ನೆ ಮಾಡಲೇ ಇಲ್ಲ. ಬಳ್ಳಾರಿಗೆ ಬಂದಿರುವ ಬಿಎಸ್​ವೈ ಇದಕ್ಕೆ ಉತ್ತರ ಕೊಟ್ಟು ಮತ ಕೇಳಬೇಕು. ಬಳ್ಳಾರಿ ಜಿಲ್ಲೆಗೆ ದೇಶದಲ್ಲಿ ಕಪ್ಪು ಚುಕ್ಕೆ ಬಂದಿದೆ” ಎಂದು ಲಿಂಗಾಯತ ಮತ ಸೆಳೆಯುವ ಬಾಂಬ್ ಹಾಕಿದ್ದಾರೆ.

ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಬಳ್ಳಾರಿಯಲ್ಲಿ ಕೈ ಕಮಲ ವಾಕ್ಸಮರ ಹೆಚ್ಚಾಗಿದೆ. ಸವಾಲಿಗೆ ಪ್ರತಿ ಸವಾಲು ಹಾಕುತ್ತ ಆರೋಪ-ಪ್ರತ್ಯಾರೋಪಗಳಲ್ಲಿ ನಾಯಕರು ಮುಳುಗಿದ್ದಾರೆ. ಸಾಕಷ್ಟು ಪ್ರತಿಷ್ಟೆಗೆ ಪಣವಾಗಿರುವ ಬಳ್ಳಾರಿ ಗಣಿ ಕದನ ಇನ್ನಷ್ಟು ತಾರಕ್ಕೇರುವ ಸಾಧ್ಯತೆಯೇ ಹೆಚ್ಚಿದೆ.

Comments are closed.