ಕರ್ನಾಟಕ

ಶಬರಿಮಲೆ: ಕೋರ್ಟ್ ತೀರ್ಪಿನ ವಿರುದ್ಧ ಪಾದಯಾತ್ರೆಯಲ್ಲಿ ಬೆಂಗಳೂರಿನ ಆರೆಸ್ಸೆಸ್‌ ನಾಯಕರ ಪಾತ್ರ

Pinterest LinkedIn Tumblr


ಬೆಂಗಳೂರು: ಶಬರಿಮಲೆ ದೇಗುಲಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶದ ಕುರಿತ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಪಾದಯಾತ್ರೆ ಸಂಘಟಿಸಿದವರಲ್ಲಿ ಬೆಂಗಳೂರಿನ ಆರೆಸ್ಸೆಸ್‌ ನಾಯಕರೊಬ್ಬರ ಪಾತ್ರವಿದೆ ಎಂದು ಹೇಳಲಾಗುತ್ತಿದೆ.

‘ಕೇರಳದಲ್ಲಿ ಸಂಘ ಮತ್ತು ಬಿಜೆಪಿ ನೇತೃತ್ವದ ಹಿಂದೂ ಪುನರುತ್ಥಾನವನ್ನು ಇಂದು ನೀವು ಕಾಣುತ್ತಿದ್ದರೆ, ಅದು ಕಳೆದ 5 ವರ್ಷಗಳಿಂದ ಈ ಕಾರ್ಯಕರ್ತರು ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನಗಳಿಂದ! #ಜನಸುರಕ್ಷಾಯಾತ್ರಾದಿಂದ #ಸೇವ್‌ಶಬರಿಮಲ ಹೋರಾಟದ ವರೆಗೆ ಎಲ್ಲವೂ ವ್ಯವಸ್ಥಿತ ಮತ್ತು ಶಿಸ್ತುಬದ್ಧ ಪಾದಯಾತ್ರೆ. ಬಿಜೆಪಿಯ ಸಂತೋಷ್‌ ಜಿ ಅವರಿಗೆ ಆದರಪೂರ್ವಕ ಪ್ರಣಾಮಗಳು’ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯಲ್ಲಿ ಸಂತೋಷ್‌ಜಿ ಎಂದೇ ಜನಪ್ರಿಯರಾಗಿರುವ ಬಿಎಲ್ ಸಂತೋಷ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ 10 ವರ್ಷಗಳ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರು ಅತ್ಯಂತ ಸಕ್ರಿಯವಾಗಿ ರಾಜಕೀಯದಲ್ಲಿದ್ದರು. ಬಿಎಸ್‌ ‘ಯಡಿಯೂರಪ್ಪ ವಿರೋಧಿ ಬಣ’ದ ನಾಯಕರೆಂದೂ ಗುರುತಿಸಿಕೊಂಡಿದ್ದರು. ಕೇರಳದಲ್ಲಿ ಎಡರಂಗ ಸರಕಾರದ ವಿರುದ್ಧ ಜನಡೆದ ಜನಸುರಕ್ಷಾ ಯಾತ್ರೆಯ ಮುಂಚೂಣಿಯಲ್ಲಿದ್ದವರೂ ಅವರೇ.

ಶಬರಿಮಲೆ ದೇಗುಲದ ಬಾಗಿಲು ಭಕ್ತರಿಗಾಗಿ ಮುಂದಿನ ತಿಂಗಳು ಮತ್ತೆ ತೆರೆಯುತ್ತದೆ. ‘ಗೆಲುವು ಸಣ್ಣದಾದರೂ ಮಹತ್ವದ್ದಾಗಿದೆ. ಇದು ಯಾವುದೇ ಆದೇಶದ ವಿರುದ್ಧವಲ್ಲ, ಬದಲಾಗಿ ಪ್ರಜಾಪ್ರಭುತ್ವವೆಂಬುದು ನ್ಯಾಯಾಂಗವೆಂಬ ಒಂದೇ ಸ್ತಂಭದ ಮೇಲೆ ನಿಂತಿರುವುದಲ್ಲ. ನಂಬಿಕೆ, ಸಂಪ್ರದಾಯಗಳು, ಸಂಸ್ಕೃತಿ ಕೂಡ ಪ್ರಜಾಪ್ರಭುತ್ವದ ದೃಢತೆಗೆ ಅಗತ್ಯವಾದವುಗಳು. ಸಮಾಜ, ನಾಯಕತ್ವ, ಸಂಸ್ಕೃತಿ, ವ್ಯವಸ್ಥೆಯ ಜತೆಗೆ ನ್ಯಾಯಾಂಗ ಕೂಡ ಪ್ರಜಾಪ್ರಭುತ್ವಕ್ಕೆ ಬೇಕು. ಆದರೆ ನ್ಯಾಯಾಂಗ ಒಂದೇ ಅಲ್ಲ. ಲಕ್ಷಾಂತರ ಜನರ ಭಾವನೆಗಳನ್ನು ಸುಪ್ರೀಂ ಕೋರ್ಟ್ ಅರ್ಥ ಮಾಡಿಕೊಂಡು ಈಗ ಉಂಟಾಗಿರುವ ಗೊಂದಲಗಳನ್ನು ಸರಿದೂಗಿಸುತ್ತದೆ ಎಂದು ನಾವು ಭರವಸೆ ಹೊಂದಿದ್ದೇವೆ. ಇದರಲ್ಲಿ ಯಾವುದೇ ಅಹಂಭಾವ ಇಲ್ಲ…’ ಎಂದು ಸಂತೋಷ್ ಟ್ವೀಟ್ ಮಾಡಿದ್ದಾರೆ.

Comments are closed.