ಕರ್ನಾಟಕ

ತೊಂದರೆ ಆಗಿದ್ದರೆ ಶ್ರುತಿ ಹರಿಹರನ್ ನಮ್ಮ ಬಳಿ ಬರಬೇಕಿತ್ತು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಹೊಗೆಯಾಡುತ್ತಿರುವ #MeToo ಸಾಕಷ್ಟು ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ದಕ್ಷಿಣ ಭಾರತೀಯ ಸ್ಟಾರ್ ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿರುವ ಕಿರುಕುಳದ ಆರೋಪ ಪ್ರಕರಣ ಇದೀಗ ಚಂದನವನದಲ್ಲಿ ಜೋರು ಸದ್ದು ಮಾಡುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ವಿಚಾರದಲ್ಲಿ ಮೊದಲ ಬಾರಿಗೆ ಸ್ಪಂದಿಸಿದೆ.

ಶೃತಿ ಹರಿಹರನ್ ಮತ್ತು ಸಂಜನಾ ಗಲ್ರಾಣಿ ಅವರು ತಮಗಾಗಿರುವ ಅನ್ಯಾಯದ ಬಗ್ಗೆ ತಮ್ಮ ಬಳಿ ದೂರು ಕೊಡುವುದನ್ನು ಬಿಟ್ಟು ಕೋರ್ಟ್ ಹಾಗೂ ಬಹಿರಂಗ ವೇದಿಕೆಗೆ ಹೋಗಿದ್ದಕ್ಕೆ ವಾಣಿಜ್ಯ ಮಂಡಳಿ ಬೇಸರಗೊಂಡಿದೆ. ಇವತ್ತು ವಾಣಿಜ್ಯ ಮಂಡಳಿಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಚಿನ್ನೇಗೌಡರು, ನಟಿಯರು ವಾಣಿಜ್ಯ ಮಂಡಳಿಗೆ ನೇರವಾಗಿ ಬಂದು ಅಹವಾಲು ಸಲ್ಲಿಸಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತು. ಸುಮ್ಮನೆ ಕೋರ್ಟ್​ಗೆ ಹೋಗಿದ್ದಾರೆ ಎಂದು ವಿಷಾದಿಸಿದರು. ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಅವರಂತೂ ನಟ ಚೇತನ್ ಹಾಗೂ ಶ್ರುತಿ ಹರಿಹರನ್ ಅವರ ವಿರುದ್ಧ ಖಾರವಾಗಿಯೇ ಪ್ರತಿಕ್ರಿಯಿಸಿದರು. ನಟಿಯರ ಆರೋಪಗಳನ್ನು ಹೆಚ್ಚೂಕಡಿಮೆ ನಿರಾಕರಿಸಿದರು.

ಈ ಹಿಂದೆ ರ್ಯಾಪಿಡ್ ರಶ್ಮಿ ವಿಚಾರವನ್ನ ವಾಣಿಜ್ಯ ಮಂಡಳಿಯಲ್ಲೇ ಬಗೆಹರಿಸಿದ್ದೆವು. ಈಗ ಶ್ರುತಿ ಹರಿಹರನ್ ಅವರು ಏಕಾಏಕಿ ಮಾಧ್ಯಮದ ಮುಂದೆ ಹೋಗಿದ್ದು ಆಶ್ಚರ್ಯವಾಯಿತು. ಶ್ರುತಿ ಅವರ ಆ ಘಟನೆ ನಡೆದಿರುವುದು ವರ್ಷಗಳ ಹಿಂದೆಯೇ. ಆಗಲೇ ಅವರು ಹೇಳಬಹುದಿತ್ತು. ಈಗ ಅದನ್ನು ಹೇಳುತ್ತಿರುವುದು ಗೊಂದಲ ಸೃಷ್ಟಿಸುತ್ತಿದೆ ಎಂದು ಸಾ.ರಾ. ಗೋವಿಂದು ಅಭಿಪ್ರಾಯಪಟ್ಟರು.

ಅರ್ಜುನ್ ಸರ್ಜಾ ಅವರನ್ನು ಚಿಕ್ಕವಯಸ್ಸಿನಿಂದಲೇ ನೋಡಿಕೊಂಡು ಬಂದಿದ್ದೇನೆ. ಅಂತಹ ಸಜ್ಜನಿಕೆಯ ವ್ಯಕ್ತಿಯ ಮೇಲೆ ಶ್ರುತಿ ಹರಿಹರನ್ ಆರೋಪ ಮಾಡುತ್ತಿರುವುದು ಸರಿಯಲ್ಲ. ತನ್ನ ಮೇಲೆ ಲೈಂಗಿಕ ಕಿರುಕುಳವಾಗಿದ್ದಕ್ಕೆ ಆಧಾರ ಕೊಡುತ್ತೇನೆ ಎಂದಿದ್ದ ಶ್ರುತಿ ನಂತರದಲ್ಲಿ ನ್ಯಾಯಾಲಯಕ್ಕೆ ಆ ಆಧಾರ ಕೊಡುವುದಾಗಿ ಹೇಳಿ ಜಾರಿಕೊಂಡಿದ್ದಾರೆ ಎಂದು ಸಾ.ರಾ. ಗೋವಿಂದು ಕುಟುಕಿದರು.

ಸಂಜನಾ ಗಲ್ರಾಣಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಗೋವಿಂದು, “12 ವರ್ಷದ ಹಿಂದಿನ ವಿಷಯವನ್ನು ಈಗ ಹೇಳುತ್ತಿದ್ದಾರೆ. ದಂಡುಪಾಳ್ಯದಲ್ಲಿ ಅವರ ಪಾತ್ರ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಸಿನಿಮಾದಲ್ಲಿ ಒಂದು ರೇಪ್ ಸೀನ್ ಆಗಿರಬಹುದು, ರೋಮ್ಯಾನ್ಸ್ ಸೀನ್ ಆಗಿರಬಹುದು ಮೈಮುಟ್ಟಲೇ ಬೇಕಾಗುತ್ತದೆ. ಡಾ. ರಾಜಕುಮಾರ್ ಅವರು 70 ನಾಯಕಿಯರೊಂದಿಗೆ ಅಭಿನಯಿಸಿದ್ದಾರೆ. ಕೆಲ ದೃಶ್ಯಗಳಲ್ಲಿ ಹಲವು ಟೇಕ್ ತೆಗೆದುಕೊಂಡಿದ್ದಾರೆ. ಅವರ ವಿರುದ್ಧ ಯಾವುದೇ ಆರೋಪ ಬಂದಿರಲಿಲ್ಲ. ಇಂತಹ ದೃಶ್ಯಗಳೀಗೆ ಒಪ್ಪಿಗೆ ಇದ್ದರೆ ನಟಿಯರು ಬರಲಿ, ಇಲ್ಲದಿದ್ದರೆ ಚಿತ್ರರಂಗಕ್ಕೆ ಬರಲೇಬೇಡಿ. ಒಪ್ಪಿಕೊಂಡ ಮೇಲೆ ಇಂತಹ ಆರೋಪ ಸರಿಯಲ್ಲ,“ ಎಂದು ವ್ಯಗ್ರರಾದರು.

ಶ್ರುತಿ ಹರಿಹರನ್ ಪರವಾಗಿ ನಿಂತಿರುವ ಆ ದಿನಗಳು ನಟ ಚೇತನ್ ಅವರನ್ನೂ ಸಾರಾ ಗೋವಿಂದು ತರಾಟೆಗೆ ತೆಗೆದುಕೊಂಡರು. ಚೇತನ್​ಗೆ 70 ವರ್ಷದ ಇತಿಹಾಸದ ಬಗ್ಗೆ ಮಾತನಾಡುವಷ್ಟು ಅನುಭವವಿಲ್ಲ. ತನ್ನ ಬಗ್ಗೆ ಮಾತನಾಡುವ ಹಕ್ಕು ಇಲ್ಲ. ಅವರ ವಿರುದ್ಧ ಅರೆಬೆತ್ತಲೆ ಹುಡುಗಿಯರೊಂದಿಗೆ ಕುಡಿದ ಆರೋಪ ಈಗಲೂ ಪೊಲೀಸ್ ಠಾಣೆಯಲ್ಲಿದೆ ಎಂದು ಸಾ.ರಾ. ಗೋವಿಂದು ಟೀಕಿಸಿದರು.

ಇಬ್ಬರೂ ಕೂಡ ಕೋರ್ಟ್​ಗೆ ಹೋಗ್ತೀವಿ ಅಂದ್ರೆ ಅಲ್ಲೇ ಬಗೆಹರಿಸಿಕೊಳ್ಳಿ ಎಂದು ನಾವವರಿಗೆ ಹೇಳುತ್ತೇವೆ ಅಷ್ಟೇ. ರಾಜೇಶ್ ದೂರು ಕೊಟ್ಟಿರುವ ಆಧಾರದ ಮೇಲೆ ಅವರನ್ನು ಸಂಧಾನ ಸಭೆಗೆ ಕರೆಯುವ ಪ್ರಯತ್ನ ಮಾಡುತ್ತೇವೆ. ಶ್ರುತಿ ಅವರನ್ನೂ ಕರೆದು ಮಾತನಾಡುವ ಪ್ರಯತ್ನ ಮಾಡುತ್ತೇವೆ ಎಂದು ಸಾ.ರಾ. ಗೋವಿಂದು ಹೇಳಿದರು.

ಕರ್ನಾಟಕದ ವಾಣಿಜ್ಯ ಚಲನಚಿತ್ರ ಮಂಡಳಿಯ ಅಧ್ಯಕ್ಷ ಚಿನ್ನೇಗೌಡರೂ ಇದೇ ಮಾತನ್ನು ಹೇಳಿದರು. ಏನೇ ಸಮಸ್ಯೆ ಇದ್ದರೂ ಮಂಡಳಿ ಬಳಿಗೇ ಬಂದಿದ್ದರೆ ಬಗೆಹರಿಸಬಹುದಿತ್ತು. ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈಗ ನಮ್ಮ ಕೈಯಲ್ಲಿ ಆಗಿದ್ದನ್ನು ಮಾಡುತ್ತೇವೆ. ಅರ್ಜುನ್ ಸರ್ಜಾ ಮಾವ ರಾಜೇಶ್ ಕೊಟ್ಟಿರುವ ದೂರಿನ ಕುರಿತು ಮಂಡಳಿ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿದ್ದೇವೆ. ಚಿತ್ರರಂಗದ ಎಲ್ಲಾ ವಿಭಾಗದ ಹಿರಿಯರಿರುವ ಸಂಧಾನ ಸಮಿತಿಯನ್ನ ಆದಷ್ಟು ಬೇಗ ರಚಿಸಿ, ಶ್ರುತಿ ಮತ್ತು ಅರ್ಜುನ್ ಅವರನ್ನು ಕರೆಯಲಾಗುವುದು ಎಂದು ಚಿನ್ನೇಗೌಡರು ತಿಳಿಸಿದರು.

ಸಮಿತಿ ರಚನೆಯಾಗಿ ಸಮಸ್ಯೆ ಬಗೆಹರಿದದ್ದೇ ಆದರೆ ಸ್ಯಾಂಡಲ್ವುಡ್​ನ ಮೀ ಟೂ ಅಭಿಯಾನಕ್ಕೆ ಒಂದು ಲಾಜಿಕ್ ಎಂಡ್ ಸಿಕ್ಕಂತಾಗುತ್ತದೆ.

Comments are closed.