ಕರ್ನಾಟಕ

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಜಗಳಕ್ಕೆ ಇಳಿದು ಕೊಲೆಗೈದ

Pinterest LinkedIn Tumblr


ಕೋಲಾರ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಜಗಳಕ್ಕೆ ಇಳಿದು ಬಳಿಕ ಎಲ್ಲರೊಂದಿಗೆ ಅಸಭ್ಯವಾಗಿ ವರ್ತಿಸಿ ಬಾರ್ ನಲ್ಲಿದ್ದ ಓರ್ವನನ್ನು ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಟೇಕಲ್ ಗ್ರಾಮದಲ್ಲಿ ನಡೆದಿದೆ.

ಮಾಲೂರು ತಾಲೂಕಿನ ಶೆಟ್ಟಿಹಳ್ಳಿಯ ಚಂದ್ರಪ್ಪ (35) ಮೃತ ದುರ್ದೈವಿ. ಬನಹಳ್ಳಿಯ ನಿವಾಸಿ ಅಶ್ವಥ್ ಕೊಲೆಗೈದ ಆರೋಪಿ. ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ವಿಡಿಯೋದಲ್ಲಿ ಏನಿದೆ?:
ಎಂ.ಎಸ್.ಆನಂದ್ ಎಂಬವರಿಗೆ ಸೇರಿದ ಟೇಕಲ್ ಗ್ರಾಮದ ಶ್ರೀನಿವಾಸ ಬಾರ್ ಅಂಡ್ ರೆಸ್ಟೋರೆಂಟ್ ಕೌಂಟರ್ ಗೆ ಎಂದಿನಂತೆ ಇಂದು ಮಧ್ಯಾಹ್ನ ಮದ್ಯ ಸೇವಿಸಲು ಜನರು ಬಂದಿದ್ದರು. ಚಂದ್ರಪ್ಪ, ತಿಮ್ಮರಾಯಪ್ಪ ಸೇರಿದಂತೆ ಅನೇಕರು ಬಾರ್ ನ ಒಂದು ರೂಮ್‍ನಲ್ಲಿ ಕುಳಿತು ಕುಡಿಯುತ್ತಿದ್ದರು. ಈ ವೇಳೆ ಇಲ್ಲಿಗೆ ಬಂದ ಅಶ್ವಥ್ ತಿಮ್ಮರಾಯಪ್ಪ ಅವರ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಬೀಯರ್ ಬಾಟಲ್‍ನಿಂದ ಹಲ್ಲೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಬೀಯರ್ ಬಾಟಲ್ ಗುರಿಯಿಂದ ತಿಮ್ಮರಾಯಪ್ಪ ತಪ್ಪಿಸಿಕೊಂಡು ಭಾರೀ ಅನಾಹುತದಿಂದ ಪಾರಾದರು.

ಅಷ್ಟಕ್ಕೆ ಜಗಳ ನಿಲ್ಲಿಸದ ಅಶ್ವತ್ ಚಂದ್ರಪ್ಪನನ್ನು ಎಳೆದುಕೊಂಡು ಬಾರ್ ಕೌಂಟರ್ ಬಳಿಗೆ ಹೋಗಿದ್ದಾನೆ. ಈ ವೇಳೆ ಹಲ್ಲೆ ಮಾಡಿ, ಹಿಂದಕ್ಕೆ ನೂಕಿದ್ದಾನೆ. ಚಂದ್ರಪ್ಪ ಹಿಂದಕ್ಕೆ ಬಿದ್ದ ಪರಿಣಾಮ ತಲೆಗೆ ಬಲವಾಗಿ ಹೊಡೆತ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಕುರಿತು ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಶ್ವಥ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Comments are closed.