ಕರ್ನಾಟಕ

ಲಿಂಗಾಯತ ಹೋರಾಟದ ಕುರಿತು ಡಿಕೆಶಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಎಂಬಿ ಪಾಟೀಲ್ ಹೇಳಿದ್ದೇನು..?

Pinterest LinkedIn Tumblr

ವಿಜಯಪುರ: ಲಿಂಗಾಯತ ಧರ್ಮದ ಪ್ರತ್ಯೇಕ ಸ್ಥಾನಮಾನದಿಂದಾಗಿ ಕಾಂಗ್ರೆಸ್‍ಗೆ ಚುನಾವಣೆಯಲ್ಲಿ ಸೋಲಾಗಿದೆ ಎನ್ನುವುದು ತಪ್ಪು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

‘ಪ್ರತ್ಯೇಕ ಧರ್ಮ ಹೋರಾಟದಿಂದಾಗಿ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಇದಕ್ಕಾಗಿ ಸಮುದಾಯದ ಕ್ಷಮೆ ಕೇಳುತ್ತೇನೆ’ ಎಂದು ನಿನ್ನೆ ಸಚಿವ ಡಿ.ಕೆ.ಶಿವಕುಮಾರ್ ಬಾಳೆಹೊನ್ನೂರಿನಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತಂತೆ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಗರಂ ಆಗಿರುವ ಎಂಬಿ ಪಾಟೀಲ್, ‘ರಾಜಕಾರಣವೇ ಬೇರೆ, ಧರ್ಮವೇ ಬೇರೆ. ಲಿಂಗಾಯತ ಸಮುದಾಯದ ಹೋರಾಟದಿಂದಾಗಿ ಕಾಂಗ್ರೆಸ್‍ಗೆ ಹಿನ್ನಡೆಯಾಯಿತು ಎಂಬುದು ಸರಿಯಲ್ಲ. ದಕ್ಷಿಣ ಕರ್ನಾಟಕ ಭಾಗದಲ್ಲಿ ಹೋರಾಟ ಹೆಚ್ಚು ಪರಿಣಾಮ ಬೀರಲಿಲ್ಲ. ಹಾಗಿದ್ದರೆ ಡಿ.ಕೆ.ಶಿವಕುಮಾರ್ ಅವರು ತಮ್ಮ ಭಾಗದಲ್ಲಿ ಎಷ್ಟು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿಕೊಂಡಿದ್ದಾರೆ’ ಎಂದು ಎಂ.ಬಿ.ಪಾಟೀಲ್ ಪ್ರಶ್ನೆ ಮಾಡಿದರು.

ಧರ್ಮದ ವಿಚಾರದಲ್ಲಿ ಸರ್ಕಾರದ ಹಸ್ತ ಕ್ಷೇಪ ಬರುವುದಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಯಾವುದೇ ಪಕ್ಷಕ್ಕೆ ಹಾನಿಯಾಗಿಲ್ಲ. ಧರ್ಮದ ಹೆಸರಲ್ಲಿ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಚುನಾವಣೆ ಸೋಲು ಪಕ್ಷದ ನಾಲ್ತು ಗೋಡೆ ನಡುವೆ ಚರ್ಚಿಸಬೇಕಾದ ವಿಷಯ. ಇದರ ಬಗ್ಗೆ ಬಹಿರಂಗ ಚರ್ಚೆ ಸರಿಯಲ್ಲ. ಡಿಕೆಶಿ ಅವರ ಮಾರ್ಗ ಸರಿಯಲ್ಲ. ಡಿಕೆಶಿ ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಆದರೆ ಇಂತಹ ವಿಚಾರಗಳನ್ನು ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಬೇಕಿತ್ತು. ಬಹಿರಂಗ ಚರ್ಚೆ ಸರಿಯಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ನಮ್ಮ ಅಸ್ಮಿತೆ, ಬಸವಣ್ಣನವರನ್ನು ಗೌರವಿಸುವ ನಾವು ಕೆಂಪೇಗೌಡರನ್ನೂ ಅದೇ ರೀತಿ ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

Comments are closed.