ಕರ್ನಾಟಕ

ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಉತ್ತಮ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಉತ್ತಮ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಕೆಲವು ದಿನಗಳ ಹಿಂದೆ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಮಳೆಗೆ ಅಡ್ಡಿ ಉಂಟಾಗಿತ್ತು. ಆದರೆ, ಮತ್ತೆ ಹಿಂಗಾರು ಮಾರುತಗಳು ಚುರುಕುಗೊಂಡಿವೆ. ಹಾಗಾಗಿ, ರಾಜ್ಯದಲ್ಲಿ ಮುಂದಿನ ಮೂರು ದಿನಗಳವರೆಗೆ ಉತ್ತಮ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದ್ದು, ಉಳಿದಂತೆ ರಾಜ್ಯದಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಹಾಗೂ ವಿಜ್ಞಾನಿ ಚನ್ನಬಸಪ್ಪ ಎಸ್‌. ಪಾಟೀಲ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳ ಕೆಲವೆಡೆ ಬಿರುಗಾಳಿ ಸಹಿತ ಮಳೆಯಾಗುವ ಲಕ್ಷಣಗಳಿದ್ದು, ಕಡಲ ತೀರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಇನ್ನು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಭಾರಿ ಮಳೆಗೆ ತತ್ತರ
ರಾಜ್ಯದಲ್ಲಿ ಕೆಲವು ದಿನಗಳಿಂದ ಪುನಃ ಆರಂಭವಾಗಿರುವ ಮಳೆ ಬುಧವಾರವೂ ಸುರಿದಿದೆ. ಬೆಂಗಳೂರು, ಮಂಡ್ಯ, ಕಲಬುರಗಿಯಲ್ಲಿ ಕೆಲ ಕಾಲ ಧಾರಾಕಾರ ಮಳೆಯಾದರೆ, ಚಾಮರಾಜನಗರ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಮೈಸೂರು, ಚಿಕ್ಕಮಗಳೂರು, ಬಳ್ಳಾರಿ, ಗದಗ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ಮಂಡ್ಯ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿ ಕೆಲವು ಕಡೆ ಮನೆಗಳಿಗೆ ಮತ್ತು ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಮಂಗ​ಳ​ವಾರ ರಾತ್ರಿ 8 ಗಂಟೆಗೆ ಆರಂಭ​ವಾದ ಮಳೆ ಸತತ ಮೂರು ಗಂಟೆ​ಗಳ ಕಾಲ ಸುರಿದಿದೆ. ಧಾರಾ​ಕಾರ ಮಳೆಗೆ ನಗ​ರದ ಪ್ರಮುಖ ರಸ್ತೆ​ಗಳು ಜಲಾ​ವೃ​ತ​ಗೊಂಡಿದ್ದವು. ವಿವಿಧೆಡೆ ಹೊಲಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಮಳವಳ್ಳಿ ತಾಲೂಕಿನ ರಾವಣಿ ಗ್ರಾಮದ ಲಕ್ಷ್ಮೇ ನಂಜುಂಡಸ್ವಾಮಿಯವರಿಗೆ ಸೇರಿದ ಮನೆ ಕುಸಿದಿದ್ದು ಮನೆಯಲ್ಲಿದ್ದ ಇಬ್ಬರಿಗೆ ಚಿಕ್ಕಪುಟ್ಟಗಾಯಗಳಾಗಿವೆ. ಕಳೆದ 4 ತಿಂಗಳಿಂದ ಜೋರಾಗಿ ಮಳೆ ಸುರಿದದ್ದೇ ಕಂಡಿರದ ಕಲಬುರಗಿ ಮಹಾನಗರಕ್ಕೆ ಮಂಗಳವಾರ ರಾತ್ರಿ ಏಕಾಏಕಿ ಧಾರಾಕಾರ ಮಳೆ ಸುರಿದಿದೆ.

Comments are closed.