ಕರ್ನಾಟಕ

ಫೋನ್​ನಲ್ಲಿ ಮಾಹಿತಿ ನೀಡಿ 2 ಲಕ್ಷ ಕಳೆದುಕೊಂಡಿದ್ದ ಪೊಲೀಸ್​ ಅಧಿಕಾರಿ!

Pinterest LinkedIn Tumblr


ಬೆಂಗಳೂರು: ಇತ್ತೀಚೆಗೆ ಸೈಬರ್​ ಕ್ರೈಮ್​ ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ ಆ ಬಗ್ಗೆ ಎಚ್ಚರ ವಹಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿದೆ ಎಂಬುದು ಸುಳ್ಳಲ್ಲ. ಏನಾದರೂ ಅಪರಾಧ ನಡೆದರೆ ಕಾಪಾಡಲು ಪೊಲೀಸ್​ ಇಲಾಖೆಯಿದೆ ಎಂದು ಸಮಾಧಾನಪಟ್ಟುಕೊಳ್ಳುತ್ತೇವೆ. ಆದರೆ, ಪೊಲೀಸರೇ ಯಾಮಾರುತ್ತಾರೆಂದರೆ ನಂಬಲು ಸ್ವಲ್ಪ ಕಷ್ಟವಾಗಬಹುದು. ಆದರೆ, ಇದು ನಿಜ.

ಕರ್ನಾಟಕದ ಹಿರಿಯ ಪೊಲೀಸ್​ ಅಧಿಕಾರಿಯೇ ಈ ಸೈಬರ್​ ಕ್ರೈಮ್​ ಸುಳಿಯೊಳಗೆ ಸಿಲುಕಿದ್ದಾರೆ ಎಂದರೆ ಆಶ್ಚರ್ಯಪಡಲೇಬೇಕು. ಆಂತರಿಕ ಭದ್ರತಾ ವಿಭಾಗದ (ಐಎಸ್​ಡಿ) ಮುಖ್ಯಸ್ಥ ಆಶಿತ್​ ಮೋಹನ್​ ಪ್ರಸಾದ್​ ಸೈಬರ್​ ಕ್ರೈಮ್ ಜಾಲದೊಳಗೆ ಸಿಲುಕಿ 2 ಲಕ್ಷ ಹಣ ಕಳೆದುಕೊಂಡಿದ್ದಾರೆ. ಇದರಿಂದ ಕರ್ನಾಟಕ ಪೊಲೀಸ್​ ಇಲಾಖೆ ಮುಜುಗರ ಅನುಭವಿಸುವಂತಾಗಿದೆ.

ಕಳೆದುಕೊಂಡಿದ್ದು ಸಣ್ಣ ಮೊತ್ತವಲ್ಲ:

ಎ.ಎಂ. ಪ್ರಸಾದ್ ಕರ್ನಾಟಕದ ಹಿರಿಯ ಪೊಲೀಸ್​ ಅಧಿಕಾರಿಗಳಲ್ಲೊಬ್ಬರು. ಇವರಿಗೆ ಅನಾಮಧೇಯ ನಂಬರ್​ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ಬ್ಯಾಂಕ್​ ಸಿಬ್ಬಂದಿ ಎಂದು ಹೇಳಿಕೊಂಡು ಡೆಬಿಟ್​ ಕಾರ್ಡ್​ನ ಮಾಹಿತಿ ಕೇಳಿದ್ದಾನೆ. ಅದನ್ನು ನಿಜ ಎಂದುಕೊಂಡು ಎ.ಎಂ.​ ಪ್ರಸಾದ್​ ಎಲ್ಲ ಮಾಹಿತಿಯನ್ನೂ ನೀಡಿದ್ದಾರೆ. ಹಾಗೆ, ಮಾಹಿತಿ ನೀಡಿದ ಒಂದು ಗಂಟೆಯೊಳಗೆ ಅವರ ಅಕೌಂಟ್​ನಿಂದ 2 ಲಕ್ಷ ರೂ. ಡ್ರಾ ಆಗಿದೆ ಎಂದು ಮೊಬೈಲ್​ಗೆ ಮೆಸೇಜ್​ ಬಂದಿದೆ.

ತಕ್ಷಣ ಆಶಿತ್​ ಮೋಹನ್​ ಪ್ರಸಾದ್ ಬ್ಯಾಂಕ್​ಗೆ ಕರೆ ಮಾಡಿ ಹಣ ಕಟ್​ ಆದ ಬಗ್ಗೆ ವಿವರಣೆ ಕೇಳಿದ್ದಾರೆ. ತಾವು ಯಾವುದೇ ಮಾಹಿತಿಯನ್ನೂ ಕೇಳಿಲ್ಲ. ಯಾವ ಮಾಹಿತಿಯನ್ನೂ ತಮ್ಮ ಬ್ಯಾಂಕಿನವರು ಫೋನ್​ ಮೂಲಕ ಕೇಳುವುದಿಲ್ಲ ಎಂದು ಹೇಳಿದ ನಂತರ ಅದು ವಾಸ್ತವದ ಅರಿವಾಗಿದೆ. ತಕ್ಷಣ ಸಿಐಡಿಯ ಸೈಬರ್​ ಕ್ರೈಮ್​ ಭಾಗಕ್ಕೆ ದೂರು ನೀಡಿರುವ ಪೊಲೀಸ್​ ಅಧಿಕಾರಿ ತನಿಖೆಗೆ ಆಗ್ರಹಿಸಿದ್ದಾರೆ.

ಅಧಿಕಾರಿ ಹೇಳಿದ್ದೇನು?:

ಈ ಬಗ್ಗೆ ನ್ಯೂಸ್​18ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಆಶಿತ್ ಮೋಹನ್​ ಪ್ರಸಾದ್​, ನಾನು ಯಾವುದೋ ಪ್ರಮುಖವಾದ ಕೆಲಸದಲ್ಲಿದ್ದಾಗ ಫೋನ್ ಕರೆ ಬಂದಿತು. ಕರೆ ಮಾಡಿದ ವ್ಯಕ್ತಿ ಡೆಬಿಟ್​ ಕಾರ್ಡ್​ ಗಡುವು ಮುಗಿಯುತ್ತ ಬಂದಿರುವುದರಿಂದ ಅದನ್ನು ರೀ ಆ್ಯಕ್ಟಿವ್​ ಮಾಡಲು ಮಾಹಿತಿ ನೀಡಬೇಕಾಗಿ ಕೇಳಿದರು. ನಾನು ಅವರಿಗೆ ಬೇಕಾದ ಎಲ್ಲ ಮಾಹಿತಿ ನೀಡಿದೆ. ನಾನು ಸ್ವಲ್ಪ ಜಾಗರೂಕತರೆ ವಹಿಸಿದ್ದರೆ ಹೀಗಾಗುತ್ತಿರಲಿಲ್ಲ ಎಂದಿದ್ದಾರೆ.

ಇದಕ್ಕೂ ಮೊದಲು 2015ರಲ್ಲಿ ಡಿಜಿಐಜಿಪಿ ಓಂಪ್ರಕಾಶ್​ ಕೂಡ ಇದೇರೀತಿ ತಮ್ಮ ಬ್ಯಾಂಕ್​ ಮಾಹಿತಿಯನ್ನು ನೀಡಿ 10 ಸಾವಿರ ರೂ. ಕಳೆದುಕೊಂಡಿದ್ದರು. ನಂತರ ಸೈಬರ್​ಕ್ರೈಮ್​ ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕರಣದಲ್ಲಿ ದೆಹಲಿ ಮೂಲದ ಅಶ್ರಫ್​ ಅಲಿ ಎಂಬಾತನನ್ನು ಬಂಧಿಸಲಾಗಿತ್ತು.

ದಿನದಿಂದ ದಿನಕ್ಕೆ ಸೈಬರ್​ ಕ್ರೈಮ್​ನಿಂದ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮೂಲಗಳ ಪ್ರಕಾರ ಈ ವರ್ಷ ಬೆಂಗಳೂರಿನ ಸೈಬರ್ ಕ್ರೈಮ್​ ಪೊಲೀಸ್​ ಠಾಣೆಯಲ್ಲಿ 3 ಸಾವಿರ ಪ್ರಕರಣಗಳು ನೋಂದಣಿಯಾಗಿವೆ.

Comments are closed.