ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹುಬ್ಲೋಟ್ ವಾಚ್ ಕೊಟ್ಟ ಆರೋಪ ಎದುರಿಸುತ್ತಿದ್ದ ಪಿಡಬ್ಲ್ಯುಡಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಎಲ್.ರಘು ವಿರುದ್ಧ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯ ಸರಕಾರ ಅನುಮತಿ (ಪ್ರಾಸಿಕ್ಯೂಷನ್ ಸ್ಯಾಂಕ್ಷನ್) ನೀಡಿದೆ.
ಲೋಕಾಯುಕ್ತ ಪೊಲೀಸರು 2012ರ ನವೆಂಬರ್‌ನಲ್ಲಿ ಇವರ ಮನೆಗಳ ಮೇಲೆ ದಾಳಿ ನಡೆಸಿದ್ದಾಗ ಆದಾಯಕ್ಕೂ ಮೀರಿ 1.90 ಕೋಟಿ ರೂ. ಆಸ್ತಿ ಹೊಂದಿರುವುದು ಕಂಡು ಬಂದಿತ್ತು. ಅಧಿಕಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು 2014ರಲ್ಲಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಎಲ್.ರಘು ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ಸಿಕ್ಕಿರಲಿಲ್ಲ. ಲೋಕೋಪಯೋಗಿ ಇಲಾಖೆಯಿಂದ ರಘು ಅವರು ಬಿಡಿಎಗೂ ವರ್ಗಾವಣೆಗೊಂಡಿದ್ದರು.
ಎಲ್.ರಘು ಅವರನ್ನು ಸಿದ್ದರಾಮಯ್ಯ ರಕ್ಷಣೆ ಮಾಡುತ್ತಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ಆರೋಪ ಮಾಡಿದ್ದರು.
ಕೈ ಗಡಿಯಾರವನ್ನು ದುಬೈನ ಸ್ನೇಹಿತ ಉಡುಗೊರೆ ನೀಡಿದ್ದಾರೆಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು. ಹುಬ್ಲೋಟ್ ವಾಚ್ ಕುರಿತು ಸಲ್ಲಿಕೆಯಾಗಿದ್ದ ದೂರನ್ನು ಭ್ರಷ್ಟಾಚಾರ ನಿಗ್ರಹ ದಳ ಮುಕ್ತಾಯಗೊಳಿಸಿ ದೂರುದಾರರಿಗೆ ಹಿಂಬರಹ ನೀಡಿತ್ತು.
Comments are closed.