ಕರ್ನಾಟಕ

ಲೋಕಸಭಾ ಚುನಾವಣೆ 2019: ಮೋದಿ ಪರ ದಕ್ಷಿಣ ಭಾರತದಲ್ಲಿ 3 ಲಕ್ಷ ಕಿ.ಮೀ. ಕರ್ನಾಟಕದಲ್ಲಿ 2.5 ಸಾವಿರ ಕಿ.ಮೀ. ತಿರುಗಾಟ

Pinterest LinkedIn Tumblr


ಬೆಂಗಳೂರು: ಚುನಾವಣೆ ಪ್ರಚಾರದ ವಿಷಯದಲ್ಲಿ ಬಿಜೆಪಿ ಎಂದಿಗೂ ಹಿಂದೆ ಬಿದ್ದಿದ್ದೆ ಇಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿ ಬಳಸಿಕೊಂಡು, ಬಿಜೆಪಿ ಭರ್ಜರಿ ಗೆಲುವಿನ ನಗೆ ಬೀರಿತ್ತು. ಆದಾದ ನಂತರದ ದಿನಗಳಿಂದಲೂ ಒಂದಿಲ್ಲೊಂದು ವಿಭಿನ್ನ ರೀತಿಯ ಪ್ರಚಾರ ತಂತ್ರಗಳನ್ನು ಅನುಸರಿಸಿ, ಅದರಲ್ಲಿ ಯಶಸ್ವಿ ಸಾಧಿಸಿಕೊಂಡು ಬರುತ್ತಿದೆ. ಇದೀಗ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಭರ್ಜರಿ ತಯಾರಿಯನ್ನೇ ನಡೆಸಿದೆ.

ಹಾಗೆ ನೋಡಿದರೆ, ಉತ್ತರ ಭಾರತದಲ್ಲಿ ಬಿಜೆಪಿಗಿರುವ ಪ್ರಭಾವ ದಕ್ಷಿಣ ಭಾರತದಲ್ಲಿಇಲ್ಲ. ಈ ಭಾಗದ ಜನರನ್ನು ಬಿಜೆಪಿಯತ್ತ ಸೆಳೆದುಕೊಳ್ಳಲು ಪಕ್ಷದ ಮುಖಂಡರು ದಕ್ಷಿಣ ಭಾರತದತ್ತ ಹೆಚ್ಚು ಗಮನ ಹರಿಸಿದ್ದಾರೆ. ಅದಕ್ಕಾಗಿಯೇ ಮೋದಿ ಹಾಗೂ ಪಕ್ಷದ ಪರ ಪ್ರಚಾರ ಕೈಗೊಳ್ಳಲು ದಕ್ಷಿಣ ಭಾರತದಲ್ಲಿ ಮೂರು ಲಕ್ಷ ಕಿ.ಮೀ. ಸಂಚಾರ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಈ ಮೂರು ಲಕ್ಷ ಕಿ.ಮೀ.ನಲ್ಲಿ ಕರ್ನಾಟಕದಲ್ಲಿ 2.5 ಸಾವಿರ ಕಿ.ಮೀ. ಸಂಚರಿಸುವ ಮೂಲಕ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ.

ಮುಂದಿನ‌ ಆರು ತಿಂಗಳೊಳಗೆ ಯೋಜನೆ ಕಾರ್ಯರೂಪಕ್ಕೆ ತರಲು ಕೇಸರಿ ಪಕ್ಷದಲ್ಲಿ ಚಿಂತನೆ ನಡೆದಿದೆ. ಆರ್​ಎಸ್​ಎಸ್​ ಸಲಹೆಯೊಂದಿಗೆ ಮೋದಿ ಪ್ರಚಾರ ಕಾರ್ಯಕ್ರಮ ಅನುಷ್ಠಾನಗೊಳಿಸಲಿರುವ ಬಿಜೆಪಿ, ರ್ಯಾಲಿಗಳ ಮೂಲಕ ಪಕ್ಷದ ಪರ ಅಲೆ ಮೂಡಿಸಲು ಹೊರಟಿದೆ.

ಈ ಹಿಂದೆಯೂ ಕೂಡ ಲೋಕಸಭೆ ಇರಲಿ, ವಿಧಾನಸಭೆ ಚುನಾವಣೆ ಇರಲಿ, ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ರಣನೀತಿ ರೂಪಿಸುವ ಮೂಲಕ ರಾಜಕೀಯ ಚಾಣಕ್ಯ ಎಂದೇ ಖ್ಯಾತಿ ಗಳಿಸಿದ್ದರು. ಪೇಜ್​ ಪ್ರಮುಖ್, ಕ್ಷೇತ್ರ ಪ್ರಚಾರಕ್, ಬೂತ್ ಪ್ರಮುಖ್ ಹೀಗೆ ಹಲವು ರೀತಿಯ ವಿಭಿನ್ನ ಪ್ರಚಾರ ತಂತ್ರಗಳನ್ನು ಅನುಸರಿಸಿದ್ದ ಬಿಜೆಪಿ ಇದೀಗ ಬೃಹತ್ ಪ್ರಚಾರ ಸಂಚಾರ ಯೋಜನೆ ಹಾಕಿಕೊಂಡಿದೆ. ದಕ್ಷಿಣ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬಿಜೆಪಿಯ ಈ ಸಂಚಾರ ಪ್ರಚಾರ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಪ್ರಯೋಜನವಾಗಲಿದೆ ಎಂಬುದು ಮುಂದಿನ ಚುನಾವಣೆ ಫಲಿತಾಂಶ ಬಂದಾಗಲೇ ಗೊತ್ತಾಗುವುದು.

Comments are closed.