ಕರ್ನಾಟಕ

ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿಗೆ ಬಿಎಸ್ಪಿ ಕೈ ಕೊಡಬಹುದಾ?: ಮೈತ್ರಿ ಮುರಿದರೆ ಮಹೇಶ್‌ ಸಚಿವ ಸ್ಥಾನಕ್ಕೆ ಕುತ್ತು

Pinterest LinkedIn Tumblr


ಬೆಂಗಳೂರು: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ನಿಂದ ದೂರವಾಗಿರುವ ಬಿಎಸ್‌ಪಿ ಕರ್ನಾಟಕದಲ್ಲಿ ಏನು ಮಾಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿರುವ ಬಿಎಸ್‌ಪಿ ಕರ್ನಾಟಕದ ಮಟ್ಟಿಗೆ ಸದ್ಯಕ್ಕೆ ಮೈತ್ರಿ ಮುಂದುವರಿಸುತ್ತದೆಯಾದರೂ ಲೋಕಸಭೆ ಚುನಾವಣೆ ವೇಳೆಗೆ ಬೇರೆ ನಿರ್ಧಾರ ಕೈಗೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ,ಲೋಕಸಭೆ ಚುನಾವಣೆಯಲ್ಲಿಯೂ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದ್ದ ಜೆಡಿಎಸ್‌ಗೆ ಇದು ತಲೆನೋವಾಗಿ ಪರಿಣಮಿಸಿದೆ.

28 ಕ್ಷೇತ್ರಗಳ ಪೈಕಿ 10 ಕ್ಷೇತ್ರ ಜೆಡಿಎಸ್‌ ಪಡೆದು, ಅದರಲ್ಲೊಂದು ಸ್ಥಾನ ಬಿಎಸ್‌ಪಿಗೆ ಬಿಟ್ಟುಕೊಡಲು ಪ್ರಾಥಮಿಕ ಮಾತುಕತೆಗಳು ನಡೆದಿದ್ದವು. ಬಿಎಸ್‌ಪಿ ಲೋಕಸಭೆ ಚುನಾವಣೆಯಲ್ಲಿ “ಮಹಾಘಟಬಂಧನ್‌’ ಕಾಂಗ್ರೆಸ್‌ ಮೈತ್ರಿಕೂಟದಡಿ ಚುನಾವಣೆ ಎದುರಿಸದಿದ್ದರೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮಾತ್ರ ಮೈತ್ರಿ ಮಾಡಿಕೊಳ್ಳಬೇಕಾಗುತ್ತದೆ.

ಬದಲಾದ ಸನ್ನಿವೇಶದಲ್ಲಿ ಬಿಎಸ್‌ಪಿ ಒಂದೊಮ್ಮೆ ಬಿಜೆಪಿ ಮೈತ್ರಿಕೂಟದಡಿ ಅಥವಾ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ದಲಿತ ಮತಬ್ಯಾಂಕ್‌ ವಿಭಜನೆಯಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ನಷ್ಟವಾಗಬಹುದು. ಪರೋಕ್ಷವಾಗಿ ಅದು ಬಿಜೆಪಿಗೆ ಆನುಕೂಲವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಎಸ್‌ಪಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಸ್ಪತಂತ್ರವಾಗಿ ಸ್ಪರ್ಧೆ ಮಾಡಬೇಕು ಎಂಬುದೇ ಬಿಜೆಪಿಯ ಬಯಕೆಯೂ ಆಗಿದೆ. ಏಕೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ-ಜೆಡಿಎಸ್‌ ಮೈತ್ರಿ ಆಗಿರದಿದ್ದರೆ 5 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧ್ಯವಾಗುತ್ತಿತ್ತು. ದಲಿತರ ಮತಗಳು ಜೆಡಿಎಸ್‌-ಬಿಎಸ್‌ಪಿ ಅಭ್ಯರ್ಥಿಗಳಿಗೆ ಬಿದ್ದಿದ್ದರಿಂದ ಬಿಜೆಪಿಗೆ ಸೋಲು ಉಂಟಾಯಿತು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌-ಬಿಎಸ್‌ಪಿ ಜತೆಗೂಡಿದರೂ ದಲಿತ ಮತಬ್ಯಾಂಕ್‌ ಬಿಜೆಪಿ ಕೈ ತಪ್ಪುವ ಆತಂಕವೂ ಇದೆ. ಹೀಗಾಗಿ, ಈಗಿನ ಬೆಳವಣಿಗೆಗಳು ರಾಜ್ಯದ ಮಟ್ಟಿಗೆ ಬಿಜೆಪಿಗೆ ವರದಾನವಾಗುವ ಲಕ್ಷಣಗಳು ಕಂಡುಬರುತ್ತಿವೆ.

ಮಹೇಶ್‌ ಸಚಿವ ಸ್ಥಾನಕ್ಕೆ ಕುತ್ತು?
ಈ ಮಧ್ಯೆ, ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ಕಾಂಗ್ರೆಸ್‌ ವಿರುದ್ಧ ವಾಗಾœಳಿ ನಡೆಸಿರುವುದರಿಂದ ಒಂದೊಮ್ಮೆ ಲೋಕಸಭೆ ಚುನಾವಣೆಗೂ ಬಿಎಸ್‌ಪಿ ಕಾಂಗ್ರೆಸ್‌ ಜತೆ ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳದಿದ್ದರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಿಂದ ಸಚಿವ ಮಹೇಶ್‌ ಅವರನ್ನು ಕೈ ಬಿಡುವ ಸಾಧ್ಯತೆಯೂ ಇಲ್ಲದಿಲ್ಲ ಎಂದು ಹೇಳಲಾಗಿದೆ.

ದೆಹಲಿಯಲ್ಲಿ ಗುರುವಾರ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಮಾಯಾವತಿ ನಡೆ ಬಗ್ಗೆಯೂ ಚರ್ಚಿಸಿದ್ದಾರೆ. ದೇಶವ್ಯಾಪಿ ಕಾಂಗ್ರೆಸ್‌ ಟೀಕಿಸಿ ಕರ್ನಾಟಕ ಸರ್ಕಾರದಲ್ಲಿ ಬಿಎಸ್‌ಪಿ ಸಚಿವರು ಇದ್ದರೆ ಪಕ್ಷಕ್ಕೆ ಮುಜುಗರ ಆಗುತ್ತದೆ. ಮಾಯಾವತಿ ನಡೆಯಿಂದ ಸೋನಿಯಾಗಾಂಧಿ ಹಾಗೂ ರಾಹುಲ್‌ ಗಾಂಧಿ ಬೇಸರಗೊಂಡಿದ್ದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಜೆಡಿಎಸ್‌ಗೂ ಮುಜುಗರ:
ಮಾಯಾವತಿ ಹೇಳಿಕೆಯಿಂದ ಜೆಡಿಎಸ್‌ಗೂ ಮುಜುಗರ ಉಂಟಾಗಿದೆ ಎನ್ನಲಾಗಿದೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌-ಬಿಎಸ್ಪಿ ಮೈತ್ರಿ ಗಟ್ಟಿಯಾಗಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಹೇಳಿದ್ದಾರೆ. ಮತ್ತೂಂದೆಡೆ ಸರ್ಕಾರದ ಭಾಗವಾಗಿರುವ ಬಿಎಸ್‌ಪಿಯ ಸಚಿವ ಮಹೇಶ್‌ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. 28 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಇದು ಹಲವು ಗೊಂದಲಗಳಿಗೂ ಕಾರಣವಾಗಿದೆ.

ಹೀಗಾಗಿ, ಲೋಕಸಭೆ ಚುನಾವಣೆಗೆ ಬಿಎಸ್‌ಪಿ ಕಾಂಗ್ರೆಸ್‌ನ ಮಹಾಘಟಬಂಧನ್‌ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ ರಾಜ್ಯದಲ್ಲಿ ಬಿಎಸ್‌ಪಿ ಜತೆ ಸಂಬಂಧ ಕಡಿದುಕೊಳ್ಳಲು ಜೆಡಿಎಸ್‌ ಮೇಲೆ ಕಾಂಗ್ರೆಸ್‌ ಒತ್ತಡ ಹೇರಬಹುದು. ಜತೆಗೆ ಸಚಿವ ಸ್ಥಾನದಿಂದಲೂ ಮಹೇಶ್‌ನನ್ನು ತೆಗೆಯುವಂತೆ ಒತ್ತಾಯಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಮಾಯಾವತಿ ಹೇಳಿಕೆ ಆಧರಿಸಿ ಮಹಾಮೈತ್ರಿಗೆ ಹಿನ್ನೆಡೆ ಎಂದು ಭಾವಿಸುವುದು ತಪ್ಪಾಗುತ್ತದೆ. ರಾಜಕಾರಣದಲ್ಲಿ ಯಾವುದೂ ಅಂತಿಮವಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌- ಬಿಎಸ್‌ಪಿ ಒಟ್ಟಾಗಿದೆ.
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ಮಾಯಾವತಿಯವರು ಮಹಾಘಟಬಂಧನ್‌ಗೆ ಸಂಬಂಧಿಸಿ ಯಾಕೆ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಅಭಿಪಾಯ ಹೇಳಿರಬಹುದು. ಎರಡೂ ಪಕ್ಷಗಳ ಮುಖಂಡರು ಪರಸ್ಪರ ಮಾತನಾಡಿಕೊಂಡು ಬಗೆಹರಿಸಿಕೊಳ್ಳುವ ವಿಶ್ವಾಸವಿದೆ. 2019ರ ಲೋಕಸಭೆ ಚುನಾವಣೆಗೆ ಜೆಡಿಎಸ್‌, ಕಾಂಗ್ರೆಸ್‌ ಜತೆ ಮೈತ್ರಿಮಾಡಿಕೊಂಡು ಸ್ಪರ್ಧೆ ಮಾಡಲಿದೆ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಕರ್ನಾಟಕದಲ್ಲಿ ಬಿಎಸ್‌ಪಿ ಕಾಂಗ್ರೆಸ್‌ ಭಾಗವಲ್ಲ. ನಾವು ಜೆಡಿಎಸ್‌ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದೆವಷ್ಟೆ. ಕಾಂಗ್ರೆಸ್‌ನ ಸ್ವಾರ್ಥ ಹಾಗೂ ಆಹಂನಿಂದ ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮೈತ್ರಿ ಆಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಯಾವ ತೀರ್ಮಾನವೂ ಆಗಿಲ್ಲ. ಬೆಹನ್‌ ಜೀ ಕೈಗೊಳ್ಳುವ ತೀರ್ಮಾನವೇ ಅಂತಿಮ.
– ಎ.ಹರಿರಾಮ್‌, ಬಿಎಸ್‌ಪಿ ರಾಜ್ಯಾಧ್ಯಕ್ಷ

Comments are closed.