ಬೆಂಗಳೂರು: ಕಳೆದ ವಾರವಷ್ಟೇ ಬಿಬಿಎಂಪಿಯ ಉಪಮೇಯರ್ ಆಗಿ ಆಯ್ಕೆಯಾಗಿದ್ದ ರಮೀಳಾ ಉಮಾಶಂಕರ್(44) ಅವರು ತೀವ್ರ ಹೃದಯಾಘಾತದಿಂದ ಗುರುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಗುರುವಾರ ತಡರಾತ್ರಿ 12.50ರ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಪಶ್ಚಿಮ ಕಾರ್ಡ್ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಡಿಪ್ಲೊಮೊ ಇನ್ ಎಲೆಕ್ಟ್ರಾನಿಕ್ಸ್ ಓದಿದ್ದ ರಮೀಳಾ, 2015ರಲ್ಲಿ ನಡೆದಿದ್ದ ಬಿಬಿಎಂಪಿ ಚುನಾವಣೆಯಲ್ಲಿ ಕಾವೇರಿಪುರಂ ವಾರ್ಡ್‌ನಿಂದ (103) ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ವಾರದ ಹಿಂದಷ್ಟೇ ಬಿಬಿಎಂಪಿಯ ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು. ಪತಿ ಉಮಾಶಂಕರ್, ಪುತ್ರ ವರುಣ್ ಕುಮಾರ್, ಪುತ್ರಿ ಭೂಮಿಕಾ ರಾಣಿ ಹಾಗೂ ಬಂಧುಮಿತ್ರರನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಕಿತ್ತನಹಳ್ಳಿಯಲ್ಲಿರುವ ಹೌಸಿಂಗ್ ಬೋರ್ಡ್ ನಲ್ಲಿ ರಮೀಳಾ ಉಮಾಶಂಕರ್ ಅಂತ್ಯಕ್ರಿಯೆ ನಡೆಯಲಿದ್ದು, ಸದ್ಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಮೀಳಾ ಉಮಾಶಂಕರ್ ನಿಧನ ಹಿನ್ನೆಲೆ ಬಿಬಿಎಂಪಿಗೆ ರಜೆ ಘೋಷಣೆ ಮಾಡಲಾಗಿದೆ.
Comments are closed.