ಕರ್ನಾಟಕ

ಬುದ್ಧಿವಾದ ಹೇಳಿ ದುನಿಯಾ ವಿಜಯ್ ಗೆ ಜಾಮೀನು ನೀಡಿದ ನ್ಯಾಯಾಧೀಶ

Pinterest LinkedIn Tumblr


ಬೆಂಗಳೂರು: ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಿಗೆ 70ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಇದೇ ಕೊನೆ. ಇನ್ನು ಮುಂದೆ ಪುಂಡಾಟ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೆಷನ್ಸ್ ಕೋರ್ಟ್ ಕೋರ್ಟ್ ನ್ಯಾಯಾಧೀಶ ರಾಮಲೀಂಗೇಗೌಡ ನಟ ದುನಿಯಾ ವಿಜಯ್‍ಗೆ ಎಚ್ಚರಿಕೆ ನೀಡಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು ನಟ ದುನಿಯಾ ವಿಜಯ್‍ಗೆ, ಹೀರೋ ಆಗಿರುವ ನೀವು ಜನರಿಗೆ ರೋಲ್ ಮಾಡೆಲ್ ಆಗಿರಬೇಕು. ಈ ರೀತಿ ಮಾಡಿಕೊಳ್ಳಬಾರದು ಎಂದು ಬುದ್ಧಿವಾದ ಹೇಳಿದರು.

1 ಲಕ್ಷ ರೂ. ಬಾಂಡ್ ಹಾಗೂ ಎರಡು ಶ್ಯೂರಿಟಿ, ಪ್ರಭಾವ ಬೀರಿ ಯಾವುದೇ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ತನಿಖೆಗೆ ಸಹಕರಿಸಿಬೇಕು ಎಂದು ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ವಿಜಯ್ ಪರ ವಕೀಲರು ಪರಪ್ಪನ ಅಗ್ರಹಾರಕ್ಕೆ ತೆರಳಿದ್ದು, ವಿಜಯ್ ಇಂದೇ ಬಿಡುಗಡೆಯಾಗುವ ಸಾಧ್ಯತೆಯಿದೆ.

ದುನಿಯಾ ವಿಜಯ್ ಮೇಲೆ ಕಿಡ್ನಾಪ್, ಹಲ್ಲೆ, ಕೊಲೆ ಜೀವ ಬೆದರಿಕೆ, ಐಪಿಸಿ ಸೆಕ್ಷನ್ 365 (ಕಿಡ್ನಾಪ್), 342 (ಅಕ್ರಮ ಬಂಧನ), 325 (ಹಲ್ಲೆ), 506 (ಕೊಲೆ ಬೆದರಿಕೆ) ಪ್ರಕರಣ ದಾಖಲಾಗಿದೆ. ವಿಜಿ ಮೇಲೆ ದಾಖಲಾಗಿರುವ ಆರೋಪಗಳು ಸಾಬೀತಾದಲ್ಲಿ ಎರಡು ವರ್ಷ ಮೇಲ್ಪಟ್ಟು ಶಿಕ್ಷೆಯಾಗುವ ಸಾಧ್ಯತೆ ಇದೆ.

ಏನಿದು ಪ್ರಕರಣ?
ಸೆಪ್ಟೆಂಬರ್ 22ರ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದರು. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿತ್ತು.

Comments are closed.