ಕರ್ನಾಟಕ

ರಾಜ್ಯದ ಹಲವೆಡೆ 5 ದಿನ ಭಾರೀ ಮಳೆ

Pinterest LinkedIn Tumblr


ಬೆಂಗಳೂರು: ಮಳೆ ಸಂಬಂಧಿತ ದುರ್ಘಟನೆಗೆ ಶನಿವಾರ ರಾಜ್ಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅದೇ ರೀತಿ ಚಿತ್ರದುರ್ಗದಲ್ಲಿ ನಾಲ್ಕು ತಿಂಗಳ ನಂತರ ವ್ಯಾಪಕ ಮಳೆಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ಅಥಣಿ ತಾಲೂಕಿನ ಮದಬಾವಿ ಗ್ರಾಮದ ಶಿವಪ್ಪ ಮುತ್ತಪ್ಪ ನಡಹಟ್ಟಿ( 30) ಎಂಬ ಯುವಕ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಈತ ಅಥಣಿಯಿಂದ ಮದಬಾವಿ ಗ್ರಾಮಕ್ಕೆ ಬೈಕ್‌ನಲ್ಲಿ ಮರಳುತ್ತಿದ್ದ ವೇಳೆ ಮಳೆ ಜೋರಾಗಿ ಸುರಿದಿದೆ.

ಮಳೆಯಿಂದ ರಕ್ಷಣೆ ಪಡೆಯಲು ರಸ್ತೆಯ ಬದಿ ಬೈಕ್‌ ನಿಲ್ಲಿಸಿ, ಮರವೊಂದರ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಭರ್ಜರಿ ಗಾಳಿ ಮಳೆಯಾಗಿದೆ. ಇದರಿಂದಾಗಿ ಸಾದೊಳಲು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ವೃದ್ಧ ಆಂಜನಪ್ಪ (70) ಸಾವನ್ನಪ್ಪಿದ್ದಾರೆ. ಈ ನಡುವೆ, ರಾಜ್ಯಾದ್ಯಂತ ಮುಂದಿನ ನಾಲ್ಕೈದು ದಿನಗಳ ಕಾಲ ಮಳೆ ಸುರಿಯಲಿದೆ, ಆದರೆ ಮಳೆಯ ತೀವ್ರತೆ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪುನಃ ಅ.5ರಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗದಲ್ಲಿ ಭಾನುವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಅ.3 ರವರೆಗೆ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಚನ್ನಬಸಪ್ಪ ಎಸ್‌. ಪಾಟೀಲ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಶನಿವಾರ ಕರಾವಳಿ ಮತ್ತು ಮಲೆನಾಡು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಭಾನುವಾರದಿಂದ ಪ್ರಮಾಣ ಕಡಿಮೆಯಾಗಲಿದೆ. ಪುನಃ ಅ.5ರಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.

ಪಾಂಡವಪುರ ತಾಲೂಕಿನ ಬೆಳ್ಳಾಳೆ ಗ್ರಾಮದ ನಿವೃತ್ತ ಕಂದಾಯ ಅಧಿಕಾರಿ ಬೋರೇಗೌಡರ ಮನೆಯ ಗೋಡೆಗಳು ಸಿಡಿಲಿನಿಂದ ತೀವ್ರ ಹಾನಿಯಾಗಿವೆ. ಮನೆಯ ವಿದ್ಯುತ್‌ ವೈರಿಂಗ್‌, ಮೀಟರ್‌ ಬೋರ್ಡ್‌, ಟಿವಿ, ರೆಫ್ರಿಜರೇಟರ್‌ ಸಂಪೂರ್ಣ ಸುಟ್ಟು ಹೋಗಿವೆ.

ಚಿತ್ರದುರ್ಗದ 4 ತಿಂಗಳ ನಂತರ ವ್ಯಾಪಕ ಮಳೆ:

ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ವ್ಯಾಪಕ ಮಳೆಯಾಗಿ ರೈತರಲ್ಲಿ ಹರ್ಷ ಮೂಡಿಸಿತ್ತು. ಆದರೆ, ಆ ನಂತರ ಅಲ್ಲಲ್ಲಿ ತುಂತುರು ಮಳೆ ದಾಖಲಾಗಿತ್ತು ಹೊರತು ವ್ಯಾಪಕ ಮಳೆಯಾಗಿರಲಿಲ್ಲ. ಇದೀಗ ಕಳೆದ ಮೂರು ದಿನಗಳಲ್ಲಿ ಜಿಲ್ಲಾದ್ಯಂತ ವ್ಯಾಪಕ ಮಳೆ ಬೀಳುತ್ತಿದೆ. ಈಗಾಗಲೇ ಮಳೆ ಇಲ್ಲದೇ ಬೆಳೆಗಳೆಲ್ಲ ಒಣಗಿ ಹೋಗಿರುವುದರಿಂದ ಈ ಮಳೆಯಿಂದ ರೈತರಿಗೆ ಅಷ್ಟೇನು ಪ್ರಯೋಜನವಾಗದು. ಉಳಿದಂತೆ ಉಡುಪಿ, ಕೊಡಗು, ಹಾವೇರಿಯಲ್ಲಿ ಸಾಧಾರಣ ಮಳೆಯಾಗಿದೆ.

Comments are closed.