ಕರ್ನಾಟಕ

ಅನ್ನಭಾಗ್ಯ ಯೋಜನೆಯ 7 ಕೆಜಿ ಅಕ್ಕಿ ವಿತರಣೆ ಮುಂದುವರಿಕೆ

Pinterest LinkedIn Tumblr


ಬೆಂಗಳೂರು: ಅನ್ನಭಾಗ್ಯ ಯೋಜನೆಯಲ್ಲಿ ಉಚಿತವಾಗಿ ಏಳು ಕೆ.ಜಿ. ಅಕ್ಕಿ ನೀಡುವುದನ್ನೇ ಮುಂದುವರಿಸುವುದಾಗಿ ಆಹಾರ ಸಚಿವ ಜಮೀರ್‌ ಅಹಮದ್‌ ಪುನರುಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 7 ಕೆ.ಜಿ. ಅಕ್ಕಿ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಬಜೆಟ್‌ ಮೇಲಿನ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ. ಏಳು ಕೆಜಿ ಕೊಡಲು ಆಗುವುದಿಲ್ಲವೆಂದು ಮುಖ್ಯಮಂತ್ರಿ ಎಲ್ಲಿಯೂ ಹೇಳಿಲ್ಲ. ನನ್ನ ಜತೆಯೂ ಆ ಬಗ್ಗೆ ಚರ್ಚಿಸಿಲ್ಲ. ಹೀಗಾಗಿ ಏಳು ಕೆಜಿ ಅಕ್ಕಿ
ನೀಡುವುದನ್ನೇ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಸಂಗ್ರಹಿಸಿರುವ ಸಾಕಷ್ಟು ಅಕ್ಕಿ ಕೊಳೆಯುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಕೊಳೆಯತ್ತಿರುವ ಅಕ್ಕಿ ಎಲ್ಲಿದೆ ಎಂದು ತೋರಿಸಲಿ ಎಂದು ಪ್ರಶ್ನಿಸಿದ ಜಮೀರ್‌, ಕೇಂದ್ರ ಸರ್ಕಾರ ಪಡಿತರ ವ್ಯವಸ್ಥೆ
ಮೂಲಕ ಸಿರಿಧಾನ್ಯ ನೀಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

ವಕ್ಫ್ ಅಕ್ರಮ, ಸಿಬಿಐ ತನಿಖೆ ಇಲ್ಲ: ವಕ್ಫ್ ಆಸ್ತಿ ಕಬಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವುದಿಲ್ಲ ಎಂದು ವಕ್ಫ್ ಸಚಿವರೂ ಆದ ಜಮೀರ್‌ ಅಹಮದ್‌ ಹೇಳಿದ್ದಾರೆ. ಪರಿಷತ್‌ನಲ್ಲಿ ವಕ್ಫ್ ಆಸ್ತಿ ಕಬಳಿಕೆ ಹಗರಣ ಕುರಿತು ಅನ್ವರ್‌ ಮಾಣಿಪ್ಪಾಡಿ ನೀಡಿರುವ ವರದಿ ಬಗ್ಗೆ ಸಿಬಿಐ ತನಿಖೆ ವಹಿಸುವುದಾಗಿ ಹೇಳಿ ಯೂಟರ್ನ್ ಹೊಡೆದಿದ್ದಾರೆಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವತ್ತೂ ಯೂಟರ್ನ್ ಹೊಡೆಯುವುದಿಲ್ಲ ಎಂದರು.

ಕುಮಾರಸ್ವಾಮಿಯೊಂದಿಗಿನ ಹಳೆಯ ದ್ವೇಷವನ್ನು ಮರೆತಿದ್ದೇನೆ. ಹಳೆಯದು ಯಾವುದೂ ನನಗೆ ನೆನಪಿಲ್ಲ. ಇನ್ನು ಮುಂದೆ ನನ್ನ ಇಲಾಖೆ ವಿಚಾರ ಬಿಟ್ಟು ಬೇರೆ ಏನೂ ಮಾತನಾಡುವುದಿಲ್ಲ.
● ಜಮೀರ್‌ ಅಹಮದ್‌, ಸಚಿವ

Comments are closed.