ಕರ್ನಾಟಕ

ದುಬಾರಿ ಬೆಲೆಯ ಐಫೋನ್‌ ಗಿಫ್ಟ್‌ ವಾಪಾಸ್ ನೀಡಿದ ಬಿಜೆಪಿ ಸಂಸದರು

Pinterest LinkedIn Tumblr

ಬೆಂಗಳೂರು: ರಾಜ್ಯದ 40 ಸಂಸದರಿಗೆ ದುಬಾರಿ ಬೆಲೆಯ ಐಫೋನ್‌ ಎಕ್ಸ್‌ ಹಾಗೂ ಮೋಚಿ ಲೆದರ್‌ ಬ್ಯಾಗ್ ಗಿಫ್ಟ್‌ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಈಗ ಬಿಜಪಿ ಸಂಸದರು ಆ ಗಿಫ್ಟ್ ಅನ್ನು ವಾಪಸ್ ನೀಡಲು ನಿರ್ಧರಿಸಿದ್ದಾರೆ.

ನಾನು ಈಗಾಗ್ಲೇ ಐಫೋನ್‌ ಹಾಗೂ ಬ್ಯಾಗನ್ನು ಮರಳಿಸಿದ್ದೇನೆ. ಜತೆಗೆ, ರಾಜ್ಯ ಬಿಜೆಪಿಯ ಎಲ್ಲ ಸಂಸದರು ಐ ಫೋನ್ ವಾಪಸ್‌ ನೀಡಲು ನಿರ್ಧರಿಸಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಬುಧವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಟ್ವೀಟ್ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿಯವರೇ, ನನ್ನ ಬೆಂಗಳೂರು ಕಚೇರಿಗೆ ಕಾವೇರಿ ನದಿಗೆ ಸಂಬಂಧಪಟ್ಟ ದಾಖಲೆಗಳು ಹಾಗೂ ದುಬಾರಿ ಬೆಲೆಯ ಐ ಫೋನ್‌ ಅನ್ನು ಬ್ಯಾಗ್ ನಲ್ಲಿ ನೀಡಲಾಗಿತ್ತು. ಆದರೆ, ನನ್ನ ಆದೇಶದ ಮೇರೆಗೆ ನನ್ನ ಕಾರ್ಯದರ್ಶಿ ಸೋಮವಾರವೇ ಬ್ಯಾಗನ್ನು ವಾಪಸ್ ಕಳಿಸಿದ್ದಾರೆ. ಈ ರೀತಿಯ ಉಡುಗೊರೆಗಳಿಗೆ ಸರಕಾರದ ಹಣವನ್ನು ಬಳಸುವುದು ತಪ್ಪು. ಹೀಗಾಗಿ ರಾಜ್ಯದ ಎಲ್ಲ ಬಿಜೆಪಿ ಸಂಸದರು ಐ ಫೋನ್‌ ಅನ್ನು ವಾಪಸ್ ನೀಡಲು ನಿರ್ಧರಿಸಿದ್ದಾರೆ ಎಂದು ಅನಂತ್ ಕುಮಾರ್ ತಿಳಿಸಿದ್ದಾರೆ.

ಅಲ್ಲದೆ, ಸರಿಯಾದ ಸಂಬಳ ಸಿಗದೆ ಪೌರಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿದಿನ ರೈತರು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು, ರಾಜ್ಯದಲ್ಲಿ ಮಳೆ ಹೆಚ್ಚಾದ ಕಾರಣ ಪ್ರವಾಹ ಉಂಟಾಗಿದ್ದು, ರೈತರ ಹಾಗೂ ಜನರ ಜೀವನವನ್ನು ಹಾಳು ಮಾಡುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ತನ್ನ ಬೊಕ್ಕಸದಲ್ಲಿರುವ ಹಾಗೂ ಜನರ ತೆರಿಗೆ ಹಣದ ಪ್ರತಿ ಪೈಸೆಯನ್ನೂ ಜನರ ಕಷ್ಟವನ್ನು ಪರಿಹರಿಸಲು ವಿನಿಯೋಗಿಸಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ದೆಹಲಿ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರು ಐಫೋನ್ ಗಿಫ್ಟ್ ನೀಡಿರುವ ಬಗ್ಗೆ ತಮಗೆ ಗೊತ್ತೇ ಇಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್‌ ಅವರು, ಆ ಗಿಫ್ಟ್‌ ಅನ್ನು ನಾನೇ ಕೊಟ್ಟಿದ್ದು ಎಂದು ಮಂಗಳವಾರ ಸ್ಪಷ್ಟಪಡಿಸಿದ್ದರು.

Comments are closed.