ಕರ್ನಾಟಕ

ಸಾಲ ಮನ್ನಾ ವಿಚಾರವನ್ನು ಬಜೆಟ್‌ ಅಧಿವೇಶನದವರೆಗೂ ಕಾದು ನೋಡುತ್ತೇವೆ: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ರೈತರ ಸಾಲ ಮನ್ನಾ ವಿಚಾರದಲ್ಲಿ ಬಜೆಟ್‌ ಅಧಿವೇಶನದವರೆಗೂ ಕಾದು ನೋಡುತ್ತೇವೆ. ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಆರಂಭಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆಗೆ ಮುನ್ನ ಜೆಡಿಎಸ್‌ ಭರವಸೆ ನೀಡಿದಂತೆ ರೈತರು ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಲ್ಲಿ ಮಾಡಿರುವ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಸಣ್ಣವರು-ದೊಡ್ಡವರು ಎಂದು ತಾರತಮ್ಯ ಮಾಡಬಾರದು ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನವೇ 1 ಲಕ್ಷ ರೂ.ವರೆಗಿನ ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರ ಸಂಘಗಳ ಸಾಲಮನ್ನಾ ತೀರ್ಮಾನ, ಭಾಗ್ಯಲಕ್ಷ್ಮಿ ಯೋಜನೆ ಬಾಂಡ್‌ ಮೊತ್ತ 1 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಏರಿಸುವ ಬಗ್ಗೆ ತೀರ್ಮಾನ ಮಾಡಿದ್ದೆ. 15 ದಿನ ಅವಕಾಶ ಕೊಟ್ಟರೆ ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಬಿಜೆಪಿ ಜತೆಗೆ ಹೋಗ್ತಾರೆ ಎಂದು ಸುಪ್ರೀಂಕೋರ್ಟ್‌ಗೆ ಹೋದರು. ಇತಿಹಾಸದಲ್ಲಿ ಮೊದಲ ಬಾರಿಗೆ ರಾತ್ರಿಯಿಡೀ ವಿಚಾರಣೆ ನಡೆದು ವಿಶ್ವಾಸಮತ ಎರಡೇ ದಿನದಲ್ಲಿ ಸಾಬೀತುಪಡಿಸಲು ಸೂಚಿಸಲಾಯಿತು. ರಾಜ್ಯಪಾಲರು ನೀಡಿದ್ದ 15 ದಿನ ಕಾಲಾವಕಾಶಕ್ಕೂ ಒಪ್ಪಲಿಲ್ಲ ಎಂದರು.

ರೈತರಿಗೆ ಸುಳ್ಳು ಭರವಸೆ ನೀಡಿ, ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡುತ್ತಿರುವ ಕುಮಾರಸ್ವಾಮಿಯವರು ರಾಜ್ಯದ ಜನರಿಂದ ತಿರಸ್ಕೃತವಾದರೂ ಕಾಂಗ್ರೆಸ್‌ನವರು ಒತ್ತೆಯಾಳುಗಳಂತೆ ದೇವೇಗೌಡರ ಮನೆ ಬಾಗಿಲಿಗೆ ಹೋಗಿ ನೀವೇ ಸರ್ಕಾರ ರಚನೆ ಮಾಡಿ ನಿಮ್ಮ ಜತೆಗೆ ಇರ್ತೇವೆ ಎಂದು ಶರಣಾಗತಿಯಾದ್ದರಿಂದ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಕಳೆದ 15 ದಿನಗಳಿಂದ ನಡೆಯುತ್ತಿರುವ ರಾಜಕೀಯ ನಡವಳಿಕೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಈ ಸರ್ಕಾರ ಹೆಚ್ಚು ದಿನ ಬಾಳಲ್ಲ. ನಮಗೆ ಅಧಿಕಾರದ ಹಪಾಹಪಿ ಇಲ್ಲ. ನಾವು ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ವಿಧಾನಸಭೆಯಲ್ಲಿ 104 ಶಾಸಕರು ಎದ್ದು ನಿಂತರೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನವರು ಜನ ಹಾಗೂ ರೈತ ವಿರೋಧಿ ಕ್ರಮ ಕೈಗೊಳ್ಳಲು ಭಯ ಬೀಳುವಂತಿರಬೇಕು. ಪರಿಷತ್‌ನಲ್ಲೂ ನಮ್ಮ ಧ್ವನಿ ಹಾಗೇ ಇರಬೇಕು. ಸದನದ ಒಳಗೆ ಹೊರಗೆ ರಾಜ್ಯ ಸರ್ಕಾರದ ವೈಫ‌ಲ್ಯಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ತಿಳಿಸಿದರು.

ರೈತ ಮೋರ್ಚಾವನ್ನು ರಾಜ್ಯಾದ್ಯಂತ ಉತ್ತಮವಾಗಿ ಸಂಘಟಿಸಿ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುವಂತೆ ಮಾಡಬೇಕು. ರೈತ ಮೋರ್ಚಾಗೆ ಹೊಸ ಅಧ್ಯಕ್ಷರಾಗಿರುವ ಮಾಜಿ ಸಹಕಾರಿ ಸಚಿವರೂ ಆದ ಲಕ್ಷ್ಮಣ ಸವದಿ ಅವರು ಅನುಭವಿ ಆಗಿದ್ದು ಸಂಘಟನಾ ಸಾಮರ್ಥ್ಯ ಹೊಂದಿದ್ದಾರೆ ಎಂದು ತಿಳಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ತೇಜಸ್ವಿನಿಗೌಡ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಧರ್ಮಸ್ಥಳಕ್ಕೆ ಹೋಗಿದ್ದಾಗ ರೈತರು ಮಾಡಿರುವ ಖಾಸಗಿ ಸಾಲ ಸಹ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. ಮೊದಲೇ ಅವರ ಮೇಲೆ ವಚನ ಭ್ರಷ್ಟತೆ, ನುಡಿದಂತೆ ನಡೆಯುವುದಿಲ್ಲ ಎಂಬ ಆರೋಪವಿದೆ. ಇದೀಗ ರೈತರ ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಮಂಜುನಾಥನ ಶಾಪ, ರೈತರ ಶಾಪ ತಟ್ಟುತ್ತೆ.
– ಲಕ್ಷ್ಮಣ ಸವದಿ, ರೈತ ಮೋರ್ಚಾ ಅಧ್ಯಕ್ಷ

Comments are closed.