ಕರ್ನಾಟಕ

ಕರ್ನಾಟಕದಲ್ಲಿ ‘ಕಾಳ’ ಚಿತ್ರ ಬಿಡುಗಡೆಗೆ ಹೈಕೋರ್ಟ್ ಹಸಿರು ನಿಶಾನೆ

Pinterest LinkedIn Tumblr

ಬೆಂಗಳೂರು: ಕರ್ನಾಟಕದಲ್ಲಿ ರಜನಿಕಾಂತ್ ಅಭಿನಯದ ಕಾಳ ಚಿತ್ರದ ಬಿಡುಗಡೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಅಲ್ಲದೆ ಸಿನೆಮಾ ಶಾಂತಿಯುತವಾಗಿ ಪ್ರದರ್ಶನಗೊಳ್ಳಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಕ್ಕೆ ನ್ಯಾಯಾಲಯ ಆದೇಶ ನೀಡಿದೆ.

ಕಾಳ ಸಿನಿಮಾಕ್ಕೆ ನಿಷೇಧ ಹೇರುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ, ಯಾವ್ಯಾವ ಥಿಯೇಟರ್ ಗಳು, ಮಲ್ಟಿಪ್ಲೆಕ್ಸ್ ಗಳಲ್ಲಿ ಕಾಳ ಸಿನಿಮಾ ಪ್ರದರ್ಶನಗೊಳ್ಳಲಿದೆ ಮತ್ತು ಎಷ್ಟು ಹೊತ್ತಿಗೆ ಪ್ರದರ್ಶನ ಕಾಣಲಿದೆ ಎಂಬಿತ್ಯಾದಿ ವಿವರಗಳನ್ನು ಒದಗಿಸಿದರೆ ಪ್ರದರ್ಶಕರಿಗೆ ಸಾಕಷ್ಟು ಭದ್ರತೆ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ ಜಿ ಶಿವಣ್ಣ ಹೇಳಿಕೆ ನೀಡಿದ ನಂತರ ನ್ಯಾಯಾಲಯ ಈ ಆದೇಶ ನೀಡಿದೆ.

ಚೆನ್ನೈ ಮೂಲದ ನಿರ್ಮಾಣ ಸಂಸ್ಥೆ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತು ಅಳಿಯ ಧನುಷ್ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ಜಿ. ನರೇಂದರ್ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರು.

ಕಾವೇರಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ರಜನಿಕಾಂತ್ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಚಿತ್ರ ಪ್ರದರ್ಶನಗೊಂಡರೆ ಅಹಿತಕರ ಘಟನೆ ನಡೆಯಬಹುದು ಎಂದು ಮುನ್ನೆಚ್ಚರಿಕೆಯಿಂದ ನಿರ್ಬಂಧ ವಿಧಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರದ ವಿರುದ್ಧ ಇವರು ಹೈಕೋರ್ಟ್ ಮೊರೆ ಹೋಗಿದ್ದರು.

ಈ ಮಧ್ಯೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರ ವಕೀಲರು, ತಾವು ಚಿತ್ರ ಪ್ರದರ್ಶಕರಿಗೆ ಅಥವಾ ಪ್ರತಿಭಟನಾಕಾರರಿಗೆ ಚಿತ್ರ ಪ್ರದರ್ಶನ ಮಾಡಬಾರದೆಂದು ಸೂಚನೆ ನೀಡಿರಲಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ₹15–₹20 ಕೋಟಿ ಆದಾಯ

‘ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಕರ್ನಾಟಕ ಸರ್ಕಾರ ಪಾಲಿಸಬೇಕು ಎಂದು ಚಿತ್ರದ ನಾಯಕ ರಜನಿಕಾಂತ್ ತಿಳಿಸಿದ್ದಾರೆ. ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕರ್ನಾಟಕ ಚಲಚನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಚಿತ್ರ ಬಿಡುಗಡೆಗೆ ಅಥವಾ ವಿತರಣೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದಿದ್ದಾರೆ. ಇದು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

‘ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಇದೇ 7ರಂದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಇದರ ನಿರ್ಮಾಣಕ್ಕೆ ಒಟ್ಟು ₹ 140 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕರ್ನಾಟಕದಲ್ಲಿ 15 ರಿಂದ 20 ಕೋಟಿ ರೂಪಾಯಿ ಆದಾಯ ಗಳಿಕೆ ನಿರೀಕ್ಷಿಸಲಾಗಿದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

‘ಚಿತ್ರದ ವಿತರಕರು, ರಜನಿಕಾಂತ್ ಅಭಿಮಾನಿ ಸಂಘದ ಸದಸ್ಯರು ಹಾಗೂ ಚಿತ್ರ ಬಿಡುಗಡೆಗೆ ಸಹಕರಿಸುವರಿಗೆ ಜೀವ ಭಯವಿದೆ. ಆದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಚಿತ್ರ ಬಿಡುಗಡೆಗೆ ಸೂಕ್ತ ಭದ್ರತೆ ಒದಗಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು.

Comments are closed.