ಕರ್ನಾಟಕ

ಎಂ ಎಂ ಕಲಬುರ್ಗಿ ಮತ್ತು ಗೌರಿ ಹತ್ಯೆಗೂ ಸಂಬಂಧ ಇದೆ: ವಿಜ್ಞಾನ ಪ್ರಯೋಗಾಲಯದ ವರದಿ

Pinterest LinkedIn Tumblr


ಬೆಂಗಳೂರು: ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಂಡಿನ ರಹಸ್ಯ ಬಯಲಾಗಿದ್ದು, ವಿಚಾರವಾದಿ ಎಂ ಎಂ ಕಲಬುರ್ಗಿ ಮತ್ತು ಗೌರಿ ಹತ್ಯೆಗೂ ಸಂಬಂಧ ಇದೆ ಎನ್ನುವುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ತಿಳಿದುಬಂದಿದೆ.

2015ರ ಆಗಸ್ಟ್ 30ರ ಬೆಳಗ್ಗೆ 8.401ಕ್ಕೆ ಅವಳಿ ನಗರ ಧಾರವಾಡದಲ್ಲಿ ಪಿಸ್ತೂಲ್ ಸದ್ದು ಮಾಡಿತ್ತು. ಹಿರಿಯ ಸಂಶೋಧಕ ಎಂಎಂ ಕಲಬುರ್ಗಿ ಅವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಮೂರು ವರ್ಷ ಕಳೆದರೂ ಸಿಐಡಿ ತನಿಖೆಯಲ್ಲಿ ಹಂತಕರು ಪತ್ತೆಯಾಗಿರಲಿಲ್ಲ. ಆದರೆ, ಇದೀಗ ಎಸ್‌ಐಟಿ ತನಿಖೆಯಲ್ಲಿ ಕಲಬುರ್ಗಿ ಹತ್ಯೆ ಬಯಲಾಗುವ ಸಾಧ್ಯತೆಯಿದೆ.

ವಿಧಿ ವಿಜ್ಞಾನ ಪರೀಕ್ಷೆಯಲ್ಲಿ “ಗುಂಡಿನ” ರಹಸ್ಯ ಬಯಲು

ಗೌರಿ ಹತ್ಯೆ ತನಿಖೆಯಲ್ಲಿ ಕಲಬುರ್ಗಿ ಹತ್ಯೆ ವಿಚಾರಕ್ಕೆ ಮಹತ್ವದ ಸಾಕ್ಷಿ ಸಿಕ್ಕಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತ ನವೀನ್ ವಿರುದ್ಧ ಎಸ್‌ಐಟಿ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಗೌರಿ ಹತ್ಯೆ ಸ್ಥಳದಲ್ಲಿ ಪತ್ತೆಯಾಗಿದ್ದ ಪಿಸ್ತೂಲ್ ಮತ್ತು ಬುಲೆಟ್‌, ಕ್ಯಾಟ್ರಿಜ್​ಗಳನ್ನು ಫೊರೆನ್ಸಿಕ್ ಸೈನ್ಸ್ ಲ್ಯಾಬ್‌ನಲ್ಲಿ ತಪಾಸಣೆಗೆ ಒಳಪಡಿಸಿದಾಗ ಎಂಎಂ ಕಲಬುರ್ಗಿ ಹತ್ಯೆ ಸ್ಥಳದಿಂದ ಪತ್ತೆಯಾಗಿದ್ದ ಕ್ಯಾಟ್ರಿಜ್​ ಮತ್ತು ಬುಲೆಟ್‌ಗೆ ತಾಳೆಯಾಗಿದ್ದು, ಎರಡೂ ಹತ್ಯೆಗೆ ಒಂದೇ ಪಿಸ್ತೂಲ್ ಬಳಕೆ ಮಾಡಲಾಗಿದೆ ಎನ್ನಲಾಗಿದೆ.

ಎರಡೂ ಪ್ರಕರಣಗಳಲ್ಲಿ ಹತ್ಯೆ ಮಾಡಿದ ಆರೋಪಿಗಳು ಒಬ್ಬರೇನಾ ಅಥವಾ ಬೇರೆಯವರಾ ಎನ್ನುವ ಕುರಿತಷ್ಟೇ ಮಾಹಿತಿ ಲಭ್ಯವಾಗಬೇಕಿದ್ದು, ಎಂಎಂ ಕಲಬುರ್ಗಿ ಹತ್ಯೆಯ ರಹಸ್ಯ ಕೂಡ ಬಯಲಾಗಲಿದೆ.

Comments are closed.