ಕರ್ನಾಟಕ

ಸಂಪುಟ ವಿಸ್ತರಣೆಯ ಹಗ್ಗಜಗ್ಗಾಟ ಕೊನೆ: ಜೆಡಿಎಸ್‌ ಪಾಲಿಗೆ ಹಣಕಾಸು

Pinterest LinkedIn Tumblr


ಬೆಂಗಳೂರು: ಮೈತ್ರಿ ಸರಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದ ಸಂಪುಟ ವಿಸ್ತರಣೆಗೆ ಇದ್ದ ಹಗ್ಗಜಗ್ಗಾಟ ಕೊನೆಯಾಗಿದೆ.

ಜೆಡಿಎಸ್‌ ಪಾಲಿಗೆ ಹಣಕಾಸು, ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆಗಳು ಒದಗಿ ಬಂದರೆ, ಗೃಹ, ಇಂಧನ, ಜಲಸಂಪನ್ಮೂಲ ಸೇರಿದಂತೆ ಇನ್ನಿತರ ಪ್ರಮುಖ ಖಾತೆಗಳು ಕಾಂಗ್ರೆಸ್‌ ಪಾಲಾಗಲಿದೆ. ಮತ್ತೊಂದು ಸುತ್ತಿನ ಮಾತುಕತೆಯೂ ನಡೆಯಲಿದ್ದು, ಉಳಿದ ಖಾತೆಗಳ ಬಗ್ಗೆ ಅಂತಿಮ ನಿರ್ಧಾರವಾಗಲಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ನೂತನ ಸಚಿವರು ಮುಂದಿನ ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಹಣಕಾಸು ಹಾಗೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಉಭಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಎದುರಾಗಿದ್ದ ಹಿನ್ನೆಲೆಯಲ್ಲಿ ಮೈತ್ರಿ ಉಳಿಸಿಕೊಳ್ಳುವ ಬಗೆ ಎಲ್ಲರಲ್ಲಿ ಕುತೂಹಲ ಮೂಡಿಸಿತ್ತು. ಸೋಮವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಮಂತ್ರಿಗಳ ಬಣಕ್ಕೆ ರೂಪುರೇಷೆಗಳು ಸಿಕ್ಕುವ ಸಾಧ್ಯತೆಗಳಿದ್ದು, ಸಂಪುಟ ವಿಸ್ತರಣೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

ಅದಾಗ್ಯೂ ಕಾಂಗ್ರೆಸ್‌ ಪಕ್ಷಕ್ಕೆ ಎಷ್ಟು ಖಾತೆ, ಜೆಡಿಎಸ್‌ಗೆ ಒಟ್ಟು ಎಷ್ಟು ಇಲಾಖೆಗಳ ಜವಾಬ್ದಾರಿ ಸಿಗಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಅಂತಿಮಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಹಣಕಾಸು ಇಲಾಖೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಬಳಿಯೇ ಇರಬೇಕೆಂದು ಜೆಡಿಎಸ್‌ ಆಗ್ರಹಿಸಿತ್ತು. ಈ ಬಗ್ಗೆ ಕಾಂಗ್ರೆಸ್‌ ವರಿಷ್ಠರಾದ ಗುಲಾಂ ನಬಿ ಆಜಾದ್‌ ನೇತೃತ್ವದ ಸಭೆಯಲ್ಲೂ ತಮ್ಮ ಬೇಡಿಕೆಯನ್ನು ಜೆಡಿಎಸ್‌ ಸ್ಪಷ್ಟವಾಗಿ ತಿಳಿಸಿತ್ತು. ಕಾಂಗ್ರೆಸ್‌ ಸಹ ಜೆಡಿಎಸ್‌ ನಿಲುವಿಗೆ ಒಮ್ಮತ ವ್ಯಕ್ತಪಡಿಸದೇ ಇದ್ದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಎಂಬ ಜೇನುಗೂಡನ್ನು ಕೆದಕುವ ಕೆಲಸದಿಂದ ಕೆಲ ದಿನಗಳ ಕಾಲ ದೂರ ಉಳಿಯಲಾಗಿತ್ತು.

Comments are closed.